FIFA World Cup 2022 Semi-Final: ಫಿಫಾ ವಿಶ್ವಕಪ್ ಸೆಮಿ ಫೈನಲ್ಗೆ ಕ್ಷಣಗಣನೆ: ಇಂದು ಅರ್ಜೆಂಟೀನಾ- ಕ್ರೊವೇಷ್ಯಾ ನಡುವೆ ಹೈವೋಲ್ಟೇಜ್ ಕದನ
Argentina vs Croatia, Semi Final: ಇಂದು ತಡರಾತ್ರಿ 12.30ಕ್ಕೆ ನಡೆಯಲಿರುವ ಮೊದಲ ಸೆಮಿ ಫೈನಲ್ನಲ್ಲಿ ಅರ್ಜೆಂಟೀನಾ -ಕ್ರೊವೇಷ್ಯಾ ತಂಡಗಳು ಸೆಣೆಸಾಟ ನಡೆಸಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ.
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಅಂತಿಮ ಹಂತದತ್ತ ತಲುಪುತ್ತಿದೆ. ಇಂದು ತಡರಾತ್ರಿ 12.30ಕ್ಕೆ ನಡೆಯಲಿರುವ ಮೊದಲ ಸೆಮಿ ಫೈನಲ್ನಲ್ಲಿ ಅರ್ಜೆಂಟೀನಾ -ಕ್ರೊವೇಷ್ಯಾ (Argentina vs Croatia) ತಂಡಗಳು ಸೆಣೆಸಾಟ ನಡೆಸಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ. ಲುಸೈಲ್ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಗುಂಪು ಹಂತದಲ್ಲಿ ಸೌಧಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲಿನ ಆಘಾತ ಅನುಭವಿಸಿ ಬಳಿಕ ಪುಟಿದೆದ್ದ ಲಿಯೊನೆಲ್ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟೀನಾ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ.
ನೆದರ್ಲೆಂಡ್ಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ರೋಚಕವಾಗಿ ಜಯಿಸಿತ್ತು. ಉಭಯ ತಂಡಗಳು 2-2 ಅಂತರದ ಸಮಬಲ ಸಾಧಿಸಿದ ಕಾರಣ ಪೆನಾಲ್ಟಿ ಶೂಟ್ಔಟ್ ನಡೆಸಲಾಯಿತು. ಇದರಲ್ಲಿ ಅರ್ಜೆಂಟೀನಾ 4-3 ಗೋಲುಗಳಿಂದ ಗೆದ್ದು ಬೀಗಿ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿತ್ತು. ಅರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಗೆದ್ದಿಲ್ಲ. ಇದೀಗ ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ಪ್ರಶಸ್ತಿ ತಂದುಕೊಡುತ್ತಾರ ನೋಡಬೇಕಿದೆ. ಅಲ್ಲದೆ ಬಹುತೇಕ ಕೊನೆಯ ವಿಶ್ವಕಪ್‌ನಲ್ಲಿ ಆಡಲಿರುವ ಮೆಸ್ಸಿ ಪಾಲಿಗಂತೂ ಇದು ಪ್ರತಿಷ್ಠೆಯ ಕದನ ಎನ್ನಬಹುದು.
ಈ ಬಾರಿ ಅರ್ಜೆಂಟೀನಾದ ಸೆಮೀಸ್ ಹಾದಿ ರೋಚಕವಾಗಿತ್ತು. ಮೊದಲಿಗೆ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲು, ನಂತರ ಮೆಕ್ಸಿಕೋ ವಿರುದ್ಧ 2-0 ಅಂತರ ಗೆಲುವು, ಪೋಲೆಂಡ್ ವಿರುದ್ಧವೂ 2-0 ಅಂತರದ ಜಯದೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವು ಪಡೆದು ಕ್ವಾರ್ಟರ್ ಫೈನಲ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಶೂಟೌಟಲ್ಲಿ 4-3 ಅಂತರದ ರೋಚಕ ಗೆಲುವು ಸಾಧಿಸಿತ್ತು. ವಿಶೇಷ ಎಂದರೆ ಅರ್ಜೆಂಟೀನಾ ತಾನಾಡಿರುವ ಐದು ವಿಶ್ವಕಪ್ಗಳ ಸೆಮಿ ಫೈನಲ್ನಲ್ಲಿ ಇದುವರೆಗ ಒಂದೇ ಒಂದು ಸೋಲುಂಡಿಲ್ಲ. ಐದೂ ಬಾರಿ ಕೂಡ ಫೈನಲ್ಗೇರಿರುವ ದಾಖಲೆ ಬರೆದಿದೆ.
IND vs BAN: ಪಂತ್ ತಂಡದಲ್ಲಿದ್ದರೂ ಪೂಜಾರಗೆ ಉಪನಾಯಕತ್ವ ಪಟ್ಟ ಕಟ್ಟಿದ್ಯಾಕೆ? ರಾಹುಲ್ ಹೇಳಿದ್ದಿದು
ಇತ್ತ ಕ್ವಾರ್ಟರ್ ಫೈನಲ್ನಲ್ಲಿ ಬ್ರೆಜಿಲ್‌ಗೆ ಸರಿಸಾಟಿಯಾಗಿ ನಿಂತ ಕ್ರೊವೇಷ್ಯಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಅರ್ಜೆಂಟೀನಾಕ್ಕೆ ಮೆಸ್ಸಿ ಇದ್ದಂತೆ, ಕ್ರೊವೇಷ್ಯಾಕ್ಕೆ ಲುಕಾ ಮೊಡ್ರಿಕ್ ಆಧಾರವಾಗಿದ್ದಾರೆ. ಕ್ವಾರ್ಟರ್ ಫೈನಲ್ನ ಮೊದಲ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿದ ಕ್ರೊವೇಷ್ಯಾ ತಂಡ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡಕ್ಕೆ ಮರ್ಮಾಘಾತ ನೀಡಿತು. 120 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಉಭಯ ತಂಡಗಳು 1-1ರ ಅಂತರದಲ್ಲಿ ಸಮಬಲ ಕಂಡಿತ್ತು. ಆದರೆ, ಫಲಿತಾಂಶ ಸಲುವಾಗಿ ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-2 ಅಂತರದ ಗೆದ್ದ ಕ್ರೊವೇಷ್ಯಾ ಸೆಮೀಸ್ಗೆ ಲಗ್ಗೆಯಿಟ್ಟಿದೆ.
ಕಳೆದ ಸಲದ ಫೈನಲ್ ಹಾದಿಯಲ್ಲಿ ಕ್ರೊವೇಷ್ಯಾ ಪಡೆ ಅರ್ಜೆಂಟೀನಾವನ್ನೂ ಮಣಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಮಿಡ್‌ಫೀಲ್ಡ್‌ನಲ್ಲಿ ಆಡುವ ಎಲ್ಲ ಆಟಗಾರರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ಧಾರೆ. ರಕ್ಷಣ ವಿಭಾಗದ ಮಾರ್ಸೆಲೊ ಬೊಝೋವಿಕ್, ಮ್ಯಾಟಿಯೊ ಕೊವಾಸಿಕ್ ಆಟ ಕ್ರೊವೇಶಿಯ ಪಾಲಿಗೆ ನಿರ್ಣಾಯಕ. ಉಭಯ ತಂಡಗಳು ಇದುವರೆಗೆ ಐದು ಬಾರಿ ಪರಸ್ಪರ ಮುಖಾಮುಖಿ ಆಗಿದೆ. ಆದರೆ, ವಿಶ್ವಕಪ್‌ನಲ್ಲಿ ಎರಡು ಸಲ ಮಾತ್ರ ಸೆಣಸಾಟ ನಡೆಸಿವೆ. 1998ರ ಟೂರ್ನಿಯ ಲೀಗ್ ಹಂತದಲ್ಲಿ ಅರ್ಜೆಂಟೀನಾ 1-0 ರಲ್ಲಿ ಗೆದ್ದಿದ್ದರೆ, 2018ರ ಟೂರ್ನಿಯ ಲೀಗ್ ಪಂದ್ಯದಲ್ಲಿ ಕ್ರೊವೇಷ್ಯಾ 3-0 ರಲ್ಲಿ ಜಯಿಸಿತ್ತು. ಉಭಯ ತಂಡಗಳು ಬಲಿಷ್ಠ ಇರುವ ಕಾರಣ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Tue, 13 December 22