Paris Olympics 2024: 52 ವರ್ಷಗಳ ನಂತರ ಮೊದಲ ಗೆಲುವು; ಇತಿಹಾಸ ಸೃಷ್ಟಿಸಿದ ಭಾರತ ಹಾಕಿ ತಂಡ..!

Paris Olympics 2024: ಪೂಲ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾವನ್ನು 3-2 ಗೋಲುಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ ಭಾರತ ಹಾಕಿ ತಂಡ ಬರೋಬ್ಬರಿ 52 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ.

Paris Olympics 2024: 52 ವರ್ಷಗಳ ನಂತರ ಮೊದಲ ಗೆಲುವು; ಇತಿಹಾಸ ಸೃಷ್ಟಿಸಿದ ಭಾರತ ಹಾಕಿ ತಂಡ..!
ಭಾರತ ಹಾಕಿ ತಂಡ

Updated on: Aug 02, 2024 | 7:05 PM

2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್​ನಲ್ಲೂ ಪದಕದ ನಿರೀಕ್ಷೆ ಹೆಚ್ಚಿಸಿದೆ. ಪೂಲ್ ಹಂತದಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೋಚ್ ಕ್ರೇಗ್ ಫುಲ್ಟನ್ ಮತ್ತು ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ, ಕ್ವಾರ್ಟರ್​ ಫೈನಲ್​ ಸುತ್ತಿಗೂ ಮುನ್ನ ನಡೆದ ಪೂಲ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಪೂಲ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾವನ್ನು 3-2 ಗೋಲುಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ ಭಾರತ ಹಾಕಿ ತಂಡ ಬರೋಬ್ಬರಿ 52 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ.

52 ವರ್ಷಗಳ ನಂತರ ಮೊದಲ ಜಯ

ಈ ಒಲಿಂಪಿಕ್ಸ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್, ತಮ್ಮ ಡಿಫೆಂಡ್ ಕರ್ತವ್ಯವನ್ನು ನಿಭಾಯಿಸುವುದರೊಂದಿಗೆ, ಪೆನಾಲ್ಟಿ ಕಾರ್ನರ್‌ಗಳು ಮತ್ತು ಪೆನಾಲ್ಟಿ ಸ್ಟ್ರೋಕ್‌ಗಳಿಂದ ಗೋಲುಗಳನ್ನು ಗಳಿಸುವ ಮೂಲಕ ತಂಡವನ್ನು ನಿರಂತರವಾಗಿ ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಒಲಿಂಪಿಕ್ಸ್, ವಿಶ್ವಕಪ್ ಹಾಗೂ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಅಡ್ಡಿಯಾಗಿ ನಿಲ್ಲುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಆಘಾತ ನೀಡುವುದರಲ್ಲೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಾತ್ರ ಆಗಾಧವಾಗಿತ್ತು. ಈ ಮೂಲಕ 1972 ರ ನಂತರ ಮೊದಲ ಬಾರಿಗೆ, ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ಹಲವು ಸೋಲುಗಳಿಗೆ ಸೇಡು ತೀರಿಸಿಕೊಂಡಿತು.

2 ನಿಮಿಷಗಳ ಅಂತರದಲ್ಲಿ 2 ಗೋಲು

ಒಂದು ದಿನದ ಹಿಂದೆ ನಡೆದ ಪೂಲ್ ಹಂತದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-2 ಗೋಲುಗಳಿಂದ ಸೋತಿದ್ದ ಟೀಂ ಇಂಡಿಯಾ ಗ್ರೂಪ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾದಿಂದ ಕಠಿಣ ಸವಾಲನ್ನು ಎದುರಿಸಿತ್ತು. ಅಲ್ಲದೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಗೆಲುವಿನ ಏಕೈಕ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಟೀಂ ಇಂಡಿಯಾ ಮೊದಲ ಕ್ವಾರ್ಟರ್‌ನಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ 2-0 ಮುನ್ನಡೆ ಸಾಧಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಅಭಿಷೇಕ್ ತಂಡದ ಪರ ಫೀಲ್ಡ್ ಗೋಲು ಗಳಿಸಿದರೆ, ಮರು ನಿಮಿಷದಲ್ಲೇ ನಾಯಕ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಆ ಬಳಿಕವೂ ಉತ್ತಮ ಆಟ ಮುಂದುವರೆಸಿದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಯಾವುದೇ ಅವಕಾಶ ನೀಡಲಿಲ್ಲ

ಗೆಲುವಿಗಾಗಿ ಆಸ್ಟ್ರೇಲಿಯ ಹೋರಾಟ

ಆದರೆ 25ನೇ ನಿಮಿಷದಲ್ಲಿ ಆಸ್ಟ್ರೇಲಿಯ ಮೊದಲ ಗೋಲು ದಾಖಲಿಸಿ ಸ್ಕೋರ್ ಅನ್ನು 2-1 ಕ್ಕೆ ಕೊಂಡೊಯ್ಯಿತು. ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಟೀಂ ಇಂಡಿಯಾ ಮತ್ತೆ ತನ್ನ ಮುನ್ನಡೆಯನ್ನು ಬಲಗೊಳಿಸಿ, 32ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಟೀಂ ಇಂಡಿಯಾ ಮತ್ತೊಂದು ಗೋಲು ದಾಖಲಿಸಿತು ಆದರೆ ರೆಫರಿ ಅದನ್ನು ಅಸಿಂಧುಗೊಳಿಸಿದರು. ನಂತರ ಆಸ್ಟ್ರೇಲಿಯಾದ ಸ್ಟಾರ್ ಬ್ಲೇಕ್ ಗೋವರ್ಸ್ 55ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಗಳಿಸಿ ಸ್ಕೋರ್ ಅನ್ನು 3-2ಕ್ಕೆ ಏರಿಸಿದರು. ಕೊನೆಯ 5 ನಿಮಿಷಗಳಲ್ಲಿ, ಆಸ್ಟ್ರೇಲಿಯಾವು ಹೆಚ್ಚು ಆಕ್ರಮಣಗಳನ್ನು ಮಾಡಿತು ಆದರೆ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಸೇರಿದಂತೆ ರಕ್ಷಣಾ ಪಡೆ ಈ ಪ್ರಯತ್ನಗಳನ್ನು ವಿಫಲಗೊಳಿಸಿ ಭಾರತಕ್ಕೆ ಐತಿಹಾಸಿಕ ಜಯವನ್ನು ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Fri, 2 August 24