Nikhat Zareen: ಕೆಚ್ಚೆದೆಯ ಹೋರಾಟಗಾರ್ತಿಯ ಮುಂದಿದೆ ಚಿನ್ನದ ಪದಕದ ಸವಾಲು

Nikhat Zareen: 2017 ರಲ್ಲಿ ಭುಜದ ಗಾಯದಿಂದಾಗಿ, ನಿಖಾತ್ ಒಂದು ವರ್ಷ ರಿಂಗ್‌ನಿಂದ ಹೊರಗುಳಿದಿದ್ದರು. 2018 ರಲ್ಲಿ ಮತ್ತೆ ಪುನರಾಗಮನ ಮಾಡಿದ ಅವರು ಬೆಲ್ಗ್ರೇಡ್ ವಿನ್ನರ್ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಹೀಗಾಗಿಯೇ ನಿಖಾತ್ ಝರೀನ್​​ಗೆ ಟೋಕಿಯೋ ಒಲಿಂಪಿಕ್ಸ್​ ಅರ್ಹತಾ ಸುತ್ತಿನಲ್ಲಿ ಅವಕಾಶ ದೊರೆಯಿತು.

Nikhat Zareen: ಕೆಚ್ಚೆದೆಯ ಹೋರಾಟಗಾರ್ತಿಯ ಮುಂದಿದೆ ಚಿನ್ನದ ಪದಕದ ಸವಾಲು
Nikhat Zareen
Follow us
|

Updated on: Jul 22, 2024 | 8:20 AM

ಭಾರತೀಯ ಬಾಕ್ಸಿಂಗ್​ನಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರೆಂದರೆ ಮೇರಿ ಕೋಮ್. ಆದರೆ ಮೇರಿ ಕೋಮ್ ನಿವೃತ್ತಿಯ ಬಳಿಕ ಯಾರು ಎಂಬ ಪ್ರಶ್ನೆಗೆ ಕೇಳಿ ಬಂದ ಉತ್ತರ ನಿಖಾತ್ ಝರೀನ್. ಹೌದು, ಬಾಕ್ಸಿಂಗ್​ ಅಂಗಳದಲ್ಲಿ ಹೊಸ ಭರವಸೆ ಮೂಡಿಸಿರುವ ನಿಖಾತ್ ಝರೀನ್ ಇದೀಗ ಪ್ಯಾರಿಸ್​ ಒಲಿಂಪಿಕ್ಸ್ ಅಂಗಳದಲ್ಲಿದ್ದಾರೆ. ಈ ಮೂಲಕ ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಎಂದರೆ ನಿಖಾತ್ ಝರೀನ್​ಗೆ ಇದು ಮೊದಲ ಒಲಿಂಪಿಕ್ಸ್​. ಆದರೆ ಇದಕ್ಕೂ ಮುನ್ನ 2022 ರಲ್ಲಿ ಇಸ್ತಾಂಬುಲ್ ಮತ್ತು 2023 ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ಮುಡಿಗೇರಿಸಿಕೊಂಡಿದ್ದರು. ಹೀಗಾಗಿಯೇ ಪ್ಯಾರಿಸ್ ಒಲಿಂಪಿಕ್ಸ್​ನ ಪದಕ ನಿರೀಕ್ಷೆ ಪಟ್ಟಿಯಲ್ಲಿ ನಿಖಾತ್ ಝರೀನ್ ಹೆಸರು ಕೂಡ ಇದೆ.

ಕೆಚ್ಚೆದೆಯ ಹೋರಾಟಗಾರ್ತಿ:

ನಿಖಾತ್ ಝರೀನ್ ಜೂನ್ 14, 1996 ರಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು. ನಿಖಾತ್ ತಂದೆ ಮೊಹಮ್ಮದ್ ಜಮೀಲ್ ಅಹ್ಮದ್ ಅವರ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಏಕೆಂದರೆ ಜಮೀಲ್ ಅಹ್ಮದ್ ಸ್ವತಃ ಫುಟ್ಬಾಲ್ ಆಟಗಾರ. ಹಾಗೆಯೇ ಕ್ರಿಕೆಟ್ ಕೂಡ ಆಡುತ್ತಿದ್ದರು. ಹೀಗಾಗಿ ಮಗಳು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವುದನ್ನು ತಡೆಯಲು ಜಮೀಲ್ ಮುಂದಾಗಿರಲಿಲ್ಲ.

ಆರಂಭದಲ್ಲಿ ನಿಖಾತ್ ಝರೀನ್ ಸ್ಪ್ರಿಂಟ್ ಓಟದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅದರಂತೆ ತಂದೆಯೊಂದಿಗೆ ತರಬೇತಿಯನ್ನು ಪ್ರಾರಂಭಿಸಿದ್ದರು. ಆದರೆ ನಿಖಾತ್​ಗೆ ಇದ್ದಂತಹ ಕೆಚ್ಚೆದೆಯ ದೈರ್ಯವು ಅವರನ್ನು ಬಾಕ್ಸಿಂಗ್​ನತ್ತ ಸೆಳೆಯಿತು ಎಂದರೆ ತಪ್ಪಾಗಲಾರದು.

ಸ್ಥಳೀಯ ಜಿಮ್​ಖಾನಾದಲ್ಲಿ ಶುರುವಾದ ಬಾಕ್ಸಿಂಗ್ ಅಭ್ಯಾಸದಲ್ಲಿ ನಿಖಾತ್ ಝರೀನ್ ಎದುರಾಳಿಗಳು ಹುಡುಗರು ಎಂಬುದು ವಿಶೇಷ. ಮೊದಲೇ ಹೇಳಿದಂತೆ ಕೆಚ್ಚೆದೆಯ ಹುಡುಗಿ ಸೋಲಲು ಸಿದ್ಧರಿರಲಿಲ್ಲ. ಸೋತರೂ ಅದು ವಿರೋಚಿತವಾಗಿರುತ್ತಿತ್ತು. ಹೀಗಾಗಿಯೇ ಅವರ ತಂದೆ ನಿಖಾತ್ ಝರೀನ್ ಅವರನ್ನು ವಿಶಾಖಪಟ್ಟಣಂನಿಂದ SAI ಕೇಂದ್ರಕ್ಕೆ ಸೇರಿದರು. ಅಲ್ಲಿ ಅವರು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ ಐವಿ ರಾವ್ ಅವರ ಮೇಲ್ವಿಚಾರಣೆಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು.

ಸ್ಥಾನ ಪಡೆಯಲು ಹರಸಾಹಸ:

2011 ರಲ್ಲಿ ಅವರು ಜೂನಿಯರ್ ಮತ್ತು ಯುವ ವಿಶ್ವ ಚಾಂಪಿಯನ್ ಆದರು. 2013 ರಲ್ಲಿ, ಅವರು ಮತ್ತೆ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ರಿಂಗ್‌ಗೆ ಪ್ರವೇಶಿಸಿದರು. ಅಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ನಿಖಾತ್ ಝರೀನ್ ಯಶಸ್ವಿಯಾದರು. ಇದರೊಂದಿಗೆ ಹಿರಿಯ ಬಾಕ್ಸಿಂಗ್​ ರಿಂಗ್​ಗೆ ನಿಖಾತ್​ಗೆ ಬಾಗಿಲು ತೆರೆಯಿತು.

ಆದರೆ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವುದು ನಿಖಾತ್ ಪಾಲಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಏಕೆಂದರೆ ಅದಾಗಲೇ 51 ಕೆಜಿ ವಿಭಾಗದಲ್ಲಿ ಈಗಾಗಲೇ ಮೇರಿ ಕೋಮ್ ಮತ್ತು ಪಿಂಕಿ ಜಾಂಗ್ರಾ ಅವರಂತಹ ದೊಡ್ಡ ಹೆಸರುಗಳು ಮುಂಚೂಣಿಯಲ್ಲಿದ್ದವು.

2015 ರಲ್ಲಿ ಮೊದಲ ಬಾರಿಗೆ, ನಿಖಾತ್ ಝರೀನ್ ರಾಷ್ಟ್ರೀಯ ಶಿಬಿರದಲ್ಲಿ ಪ್ರವೇಶ ಪಡೆದರು. ಅಲ್ಲಿ 2016 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು 54 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ಸಲಹೆ ನೀಡಲಾಯಿತು.

ನಿಖಾತ್ ಈ ಸಲಹೆಯನ್ನು ಸವಾಲಾಗಿ ಸ್ವೀಕರಿಸಿದರು. ಈ ಸವಾಲಿನೊಂದಿಗೆ 2016 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್-ಫೈನಲ್​ಗೆ ತಲುಪಿದರು. ತನಗಿಂತ ಹೆಚ್ಚು ವೇಟ್ ಕ್ಯಾಟಗರಿಯಲ್ಲಿ ಇದ್ದವರೆನ್ನೆಲ್ಲಾ ಹೊಡೆದುರುಳಿಸಿದ್ದರಿಂದ ನಿಖಾತ್ ಝರೀನ್ ಅವರ ಆತ್ಮವಿಶ್ವಾಸ ಹೆಚ್ಚಾಯಿತು.

ಕನಸು ಭಗ್ನ:

2017 ರಲ್ಲಿ ಭುಜದ ಗಾಯದಿಂದಾಗಿ, ನಿಖಾತ್ ಒಂದು ವರ್ಷ ರಿಂಗ್‌ನಿಂದ ಹೊರಗುಳಿದಿದ್ದರು. 2018 ರಲ್ಲಿ ಮತ್ತೆ ಪುನರಾಗಮನ ಮಾಡಿದ ಅವರು ಬೆಲ್ಗ್ರೇಡ್ ವಿನ್ನರ್ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಹೀಗಾಗಿಯೇ ನಿಖಾತ್ ಝರೀನ್​​ಗೆ ಟೋಕಿಯೋ ಒಲಿಂಪಿಕ್ಸ್​ ಅರ್ಹತಾ ಸುತ್ತಿನಲ್ಲಿ ಅವಕಾಶ ದೊರೆಯಿತು. ಆದರೆ ಆಯ್ಕೆ ಟ್ರಯಲ್ಸ್‌ನಲ್ಲಿ ನಿಖಾತ್ ತನ್ನ ಆರಾಧ್ಯ ದೈವ ಮೇರಿ ಕೋಮ್‌ನೊಂದಿಗೆ ಹೋರಾಡಿ ಸೋತರು. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಕನಸು ಭಗ್ನವಾಯಿತು.

ಪ್ಯಾರಿಸ್​ಗೆ ಎಂಟ್ರಿ:

ಈ ಬಾರಿ ನಿಖಾತ್ ಝರೀನ್ ತಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಾಕ್ಸಿಂಗ್​ ರಿಂಗ್​ನಲ್ಲಿ ಎಲ್ಲರನ್ನು ಹೊಡೆದುರುಳಿಸಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ 2 ವಿಶ್ವ ಚಾಂಪಿಯನ್ಸ್​ಶಿಪ್ ಪದಕಗಳ ಒಡೆತಿ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸುವ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ

ನಿಖಾತ್ ಝರೀನ್ ಸಾಧನೆಗಳು:

  • 2023: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
  • 2022: ಭೋಪಾಲ್‌ನ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
  • 2022: ಬರ್ಮಿಂಗ್ಹ್ಯಾಮ್‌ನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ
  • 2022: ಇಸ್ತಾನ್‌ಬುಲ್‌ನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
  • 2022: ಬಲ್ಗೇರಿಯಾದ ಸ್ಟ್ರಾಂಡ್ಜಾ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ
  • 2021: ಹಿಸಾರ್‌ನ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
  • 2021: ಟರ್ಕಿಯಲ್ಲಿ ನಡೆದ ಇಸ್ತಾಂಬುಲ್ ಬಾಸ್ಫರಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕ
  • 2019: ಗುವಾಹಟಿಯ ಇಂಡಿಯಾ ಓಪನ್‌ನಲ್ಲಿ ಕಂಚಿನ ಪದಕ
  • 2019: ಥೈಲ್ಯಾಂಡ್ ಓಪನ್‌ನಲ್ಲಿ ಬೆಳ್ಳಿ ಪದಕ
  • 2019: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಕಂಚಿನ ಪದಕ
  • 2019: 70ನೇ ಸ್ಟ್ರಾಂಡ್ಜಾ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ