Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಸೈನಿಕ

Avinash Sable: ಅವಿನಾಶ್ ಸಾಬ್ಲೆ ಒಲಿಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲೇನಲ್ಲ. 2021 ರ ಟೋಕಿಯೋ ಒಲಿಂಪಿಕ್ಸ್​ನಲ್ಲೂ ಕಾಣಿಸಿಕೊಂಡಿದ್ದರು. ಆದರೆ ನಿರೀಕ್ಷೆಯಂತೆ ಫೈನಲ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಅತ್ಯುತ್ತಮ ಟ್ರೈನಿಂಗ್​ನೊಂದಿಗೆ ಸಿದ್ಧವಾಗಿರುವ ಅನಿವಾಶ್ ಸ್ಟೀಪಲ್‌ಚೇಸ್ ರನ್ನಿಂಗ್​ನಲ್ಲಿ ಭಾರತಕ್ಕೆ ಪದಕ ತಂದು ಕೊಡುವ ನಿರೀಕ್ಷೆಯಲ್ಲಿದ್ದಾರೆ.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಸೈನಿಕ
Avinash Sable
Follow us
|

Updated on:Jul 21, 2024 | 2:39 PM

ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಕಾಣಿಸಿಕೊಳ್ಳುತ್ತಿದ್ದಾರೆ. ಈ 117 ಕ್ರೀಡಾಪಟುಗಳಲ್ಲಿ ಭಾರತೀಯ ಸೈನಿಕರೊಬ್ಬರು ಇರುವುದು ವಿಶೇಷ. ಹೌದು, ಈ ಬಾರಿ ಒಲಿಂಪಿಕ್ಸ್​ಗೆ ಭಾರತೀಯ ಸೈನಿಕ ಅವಿನಾಶ್ ಸಾಬ್ಲೆ  ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದ ಮೂಲದ ಅವಿನಾಶ್ ಸಾಬ್ಲೆ ಅತ್ಯುತ್ತಮ ಸ್ಟೀಪಲ್‌ಚೇಸ್ ಓಟಗಾರ. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ತೆರಳಿದ್ದಾರೆ. ಹಾಗಿದ್ರೆ ಈ ಅವಿನಾಶ್ ಯಾರು? ಅವರ ಸಾಧನೆಗಳೇನು? ಎಂಬುದರ ಇಣುಕು ನೋಟ ಇಲ್ಲಿದೆ…

ಜೈ ಜವಾನ್… ಜೈ ಕಿಸಾನ್:

ಅವಿನಾಶ್ ಸಾಬ್ಲೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಡ ರೈತ ಕುಟುಂಬದಲ್ಲಿ ಜನಿಸಿದವರು. ಚಿಕ್ಕ ವಯಸ್ಸಿನಿಂದಲೇ ಸೈನ್ಯಕ್ಕೆ ಸೇರಬೇಕೆಂಬ ಆಸೆ ಹೊಂದಿದ್ದ ಅವಿನಾಶ್, ಮನೆಯಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದ್ದ ಶಾಲೆಗೆ ಓಡಿಯೇ ಹೋಗುತ್ತಿದ್ದರು.

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ಅವಿನಾಶ್ ಸೈನ್ಯಕ್ಕೆ ಸೇರಲು ತಯಾರಿಗಳನ್ನು ಆರಂಭಿಸಿದ್ದರು. ಅದರಂತೆ 12ನೇ ತರಗತಿ ಬಳಿಕ ನೇರವಾಗಿ ಭಾರತೀಯ ಸೇನೆಗೆ ಸೇರಿಕೊಂಡರು. ಸೇನೆಗೆ ಸೇರಿದ ಬೆನ್ನಲ್ಲೇ ಅವಿನಾಶ್ ಪಾಲಿಗೆ ಸವಾಲುಗಳು ಎದುರಾಗಿತ್ತು.

ತಮ್ಮ ಮೊದಲ ಪೋಸ್ಟಿಂಗ್​ ಅತ್ಯಂತ ಕಷ್ಟಕರ ಪ್ರದೇಶಗಳಲ್ಲಿ ಒಂದು ಪರಿಗಣಿಸಲಾಗುವ, ವಿಶ್ವದ ಅತಿ ಎತ್ತರದ ಮತ್ತು ಶೀತಲ ಮಿಲಿಟರಿ ಪೋಸ್ಟ್ ಸಿಯಾಚಿನ್‌ನಲ್ಲಾಗಿತ್ತು. ನಂತರ ಅವರನ್ನು ಪಶ್ಚಿಮ ರಾಜಸ್ಥಾನದಲ್ಲಿ ನಿಯೋಜಿಸಲಾಯಿತು. ಆ ಬಳಿಕ ಅವರಿಗೆ ಅಥ್ಲೇಟಿಕ್ಸ್​ನಲ್ಲಿ ಭಾಗವಹಿಸಲು ಅವಕಾಶ ಸಿಗಲಾರಂಭಿಸಿದರು. ಇದಾದ ನಂತರ ಹಿಂತಿರುಗಿ ನೋಡಲೇ ಇಲ್ಲ ಎನ್ನಬಹುದು.

ರಾಷ್ಟ್ರೀಯ ದಾಖಲೆ:

ಅವಿನಾಶ್ ಸಾಬ್ಲೆ ಅವರ ವೃತ್ತಿಜೀವನವನ್ನು ನೋಡಿದರೆ, ಹಲವು ರಾಷ್ಟ್ರೀಯ ದಾಖಲೆಗಳನ್ನು ಕಾಣಬಹುದು. 2018 ರಲ್ಲಿ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ನೊಂದಿಗೆ ಪ್ರಾರಂಭವಾದ ಅವರ ಓಟದಿಂದಾಗಿ 37 ವರ್ಷಗಳ ಗೋಪಾಲ್ ಸೈನಿ ಅವರ ದಾಖಲೆ ಸೈಡ್​ಗೆ ಸರಿಯಿತು.

ಅಲ್ಲದೆ 3000 ಮೀಟರ್ ಸ್ಟೀಪಲ್‌ಚೇಸ್ ಓಟವನ್ನು 8:29.80 ನಿಮಿಷಗಳಲ್ಲಿ ಪೂರ್ಣಗೊಳಿಸಿ ಹೊಸ ರಾಷ್ಟ್ರೀಯ ದಾಖಲೆಯನ್ನು ರಚಿಸಿದರು. ಅಂದಿನಿಂದ ಅವಿನಾಶ್ ಪ್ರತಿ ಪ್ರಮುಖ ಓಟದಲ್ಲಿ ತನ್ನದೇ ಆದ ದಾಖಲೆಗಳನ್ನು ಮುರಿಯುತ್ತಾ ಸಾಗಿದ್ದಾರೆ. ಅಲ್ಲದೆ ಸ್ಟೀಪಲ್‌ಚೇಸ್‌ನಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲು, ಪ್ಯಾರಿಸ್‌ನಲ್ಲೇ ನಡೆದ ಡೈಮಂಡ್ ಲೀಗ್‌ನಲ್ಲಿ ಅವಿನಾಶ್ 8:09.94 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಹೊಸ ರಾಷ್ಟ್ರೀಯ ದಾಖಲೆಯನ್ನು ಬರೆದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ಗೂ ಅರ್ಹತೆ ಗಿಟ್ಟಿಸಿಕೊಂಡರು.

ಪದಕದ ನಿರೀಕ್ಷೆಯಲ್ಲಿ ಅವಿನಾಶ್:

ಅವಿನಾಶ್ ಸಾಬ್ಲೆ ಒಲಿಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲೇನಲ್ಲ. 2021 ರ ಟೋಕಿಯೋ ಒಲಿಂಪಿಕ್ಸ್​ನಲ್ಲೂ ಕಾಣಿಸಿಕೊಂಡಿದ್ದರು. ಆದರೆ ನಿರೀಕ್ಷೆಯಂತೆ ಫೈನಲ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಅನುಭವಿಗಳಿಂದ ತುಂಬಿದ ತಮ್ಮ ಹೀಟ್‌ನಲ್ಲಿ ಏಳನೇ ಸ್ಥಾನ ಪಡೆದರು. ಇದಾಗ್ಯೂ ಟೋಕಿಯೊ ಒಲಿಂಪಿಕ್ಸ್​ನ ಫೈನಲ್‌ಗೆ ಅರ್ಹತೆ ಪಡೆಯದ ರೇಸರ್‌ಗಳಲ್ಲಿ ಅವಿನಾಶ್ ಅತ್ಯಂತ ವೇಗದ ಓಟಗಾರರಾಗಿದ್ದರು ಎಂಬುದು ವಿಶೇಷ.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ

ಸೈನಿಕನ ಸಾಧನೆಗಳು:

ಏಷ್ಯನ್ ಗೇಮ್ಸ್ 2023:

  • ಚಿನ್ನದ ಪದಕ (ಪುರುಷರ 3000ಮೀ ಸ್ಟೀಪಲ್‌ಚೇಸ್)
  • ಬೆಳ್ಳಿ ಪದಕ (ಪುರುಷರ 5000ಮೀ ಸ್ಟೀಪಲ್‌ಚೇಸ್)

ಕಾಮನ್ವೆಲ್ತ್ ಗೇಮ್ಸ್ 2022:

  •  ಬೆಳ್ಳಿ ಪದಕ (ಪುರುಷರ 3000ಮೀ ಸ್ಟೀಪಲ್‌ಚೇಸ್)

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2019:

  • ಬೆಳ್ಳಿ ಪದಕ (ಪುರುಷರ 3000ಮೀ ಸ್ಟೀಪಲ್‌ಚೇಸ್)

28ರ ಹರೆಯದ ಅವಿನಾಶ್ ಸಾಬ್ಲೆ ಈ ಬಾರಿಯ ಒಲಿಂಪಿಕ್ಸ್​ಗೆ 8 ನಿಮಿಷ 11:63 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತೀಯ ಸೈನಿಕನಿಂದ ಪ್ಯಾರಿಸ್​ನಲ್ಲಿ ಚಿನ್ನದ ಪದಕವನ್ನು ನಿರೀಕ್ಷಿಸಬಹುದು.

Published On - 2:35 pm, Sun, 21 July 24