ನ್ಯೂಜಿಲೆಂಡ್ ವಿರುದ್ಧ ಎಜ್ಬ್ಯಾಸ್ಟನ್ನಲ್ಲಿ ಎರಡನೇ ಟೆಸ್ಟ್ ಸೋತು ಎರಡು ಪಂದ್ಯಗಳ ಸರಣಿಯನ್ನು 0-1 ಅಂತರದಿಂದ ಒಪ್ಪಿಸಿಕೊಟ್ಟ ಜೋ ರೂಟ್ ಅವರ ಇಂಗ್ಲೆಂಡ್ ತಂಡ ತನ್ನ ದೇಶದಲ್ಲಿ ಮಾಜಿ ಆಟಗಾರರಿಂದ ಮತ್ತು ಅಭಿಮಾನಗಳಿಂದ ತೀವ್ರ ಸ್ವರೂಪದ ಟೀಕೆಯನ್ನು ಎದುರಿಸುತ್ತಿದೆ. ಎರಡನೆ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಕಿವೀಸ್ ವೇಗದ ದಾಳಿಯೆದರು ತತ್ತರಿಸಿ ಕೇವಲ 122 ರನ್ಗಳ ಮೊತ್ತಕ್ಕೆ ಆಲೌಟಾದ ಇಂಗ್ಲೆಂಡ್ ವರ್ಷಾಂತ್ಯದಲ್ಲಿ ನಡೆಯಲಿರುವ ಌಶಸ್ ಸರಣಿಯಲ್ಲಿ ಮತ್ತೂ ಭಯಾನಕ ವೇಗದ ದಾಳಿಯನ್ನು ಹೊಂದಿರುವ ಆಸ್ಸೀಗಳ ವಿರುದ್ಧ ಮಣ್ಣುಮುಕ್ಕಲಿದೆ ಎಂದು ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಅವರ ಗೈರು ಹಾಜರಿಯಲ್ಲೂ ಅತಿಥೇಯನ್ನು ಮಣಿಸಿದ ನ್ಯೂಜಿಲೆಂಡ್ 22 ವರ್ಷಗಳ ನಂತರ ಆಂಗ್ಲರ ನಾಡಿನಲ್ಲಿ ಸರಣಿ ಗೆದ್ದಿದೆ.
ಟೆಲಿಗ್ರಾಫ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾನ್, ನ್ಯೂಜಿಲೆಂಡ್ ವಿರುದ್ಧ ಆಡಿದ ಎರಡೂ ಟೆಸ್ಟ್ಗಳಲ್ಲಿ ಒಬ್ಬ ಪರಿಣಿತ ಸ್ಪಿನ್ನರ್ನನ್ನು ಆಡಿಸದೆ ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್ ಬಹಳ ದೊಡ್ಡ ಪ್ರಮಾದವೆಸಗಿತು ಎಂದು ಹೇಳಿದ್ದಾರೆ.
‘ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಮಳೆ ಬಂದಿದ್ದರಿಂದ ಇಂಗ್ಲೆಂಡ್ ಬಚಾವಾಯಿತು. ಆದರೆ ಒಂದೇ ತಪ್ಪನ್ನು ಕೇವಲ ಎರಡು ವಾರಗಳ ಅವಧಿಯಲ್ಲಿ ಎರಡನೇ ಸಲ ಮಾಡುವುದು ತಪ್ಪಲ್ಲ, ಅಪಾರಾಧ ಅನಿಸಿಕೊಳ್ಳುತ್ತದೆ. ಲಾರ್ಡ್ಸ್ ಪಿಚ್ ತಿರುವು ತೆಗೆದುಕೊಳ್ಳುತ್ತಿತ್ತು ನಿಜ, ಆದರೆ ಜಾಸ್ತಿ ತಾಪಮಾನ ಮತ್ತು ಒಣಹವೆಯಿಂದ ಕೂಡಿದ್ದ ಎಜ್ಬ್ಯಾಸ್ಟನ್ನ ಮೈದಾನದ ಪಿಚ್ಮೇಲೆ ವೈವಿಧ್ಯಮಯ ಬೌಲಿಂಗ್ ಆಕ್ರಮಣದ ಅವಶ್ಯಕತೆಯಿತ್ತು. ತಂಡದಲ್ಲಿ ನಾಲ್ವರು ವೇಗದ ಬೌಲರ್ಗಳಿದ್ದರೆ ಅವರನ್ನೇ ದಾಳಿಗಿಳಿಸದೆ ಬೇರೆ ವಿಧಿಯಿರುವುದಿಲ್ಲ. ಆದರೆ ಮೂರು ಸೀಮರ್ಗಳ ಜೊತೆಗೆ ಸ್ಪಿನ್ನರ್ ರೂಪದಲ್ಲಿ ಜ್ಯಾಕ್ ಲೀಚ್ ಅವರನ್ನು ಆಡಿಸಿದ್ದರೆ ಜೋ ರೂಟ್ ಅಗಾಗ ದಾಳಿಗಿಳಿದು ವೇಗದ ಬೌಲರ್ಗಳು ದಣಿಯದಂತೆ ನೋಡಿಕೊಳ್ಳುತ್ತಿದ್ದರು. ಭಾರತದ ವಿರುದ್ಧ ನಡೆಯುವ ಸರಣಿಯಲ್ಲಿ ಅತಿಥೇಯರು ಇದೇ ಪ್ರಮಾದ ಪ್ರಮಾದವನ್ನು ಪುನರಾವರ್ತಿಸಲಾರರು ಎಂದು ನಿರೀಕ್ಷಿಸುತ್ತೇನೆ,’ ಎಂದು ವಾನ್ ಹೇಳಿದ್ದಾರೆ.
ಉತ್ತಮವಾದ ಪಿಚ್ಗಳ ಮೇಲೆ ಹೇಗೆ ಆಡಿ ಗೆಲ್ಲಬೇಕೆನ್ನುವ ಅಂಶವನ್ನು ಕಂಡುಕೊಂಡ ನಂತರವೇ ಇಂಗ್ಲೆಂಡ್ ಆಸ್ಟ್ರೇಲಿಯಾ ವಿಸುದ್ಧ ನಡೆಯುವ ಸರಣಿಯನ್ನು ಗೆಲ್ಲುವ ಬಗ್ಗೆ ಯೋಚಿಸಲಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.
‘ಈ ಎರಡು ಪಿಚ್ಗಳ ಮೇಲೆ ಇಂಗ್ಲೆಂಡ್ ಹೆಣಗಾಡಿದ್ದು ನಿಜವಾದರೂ, ಉತ್ತಮ ಪಿಚ್ಗಳ ಮೇಲೆ ಅಡುವುದನ್ನು ಅದು ಮುಂದುವರಿಸಬೇಕು. ಟೀಮಿನ ಹೆಡ್ ಕೋಚ್ ಕ್ರಿಸ್ ಸಿಲ್ವರ್ವುಡ್ ಇದನ್ನೇ ಬಯಸಿದ್ದಾರೆ. ಭಾರತದ ವಿರುದ್ಧ ಹಸಿರು ಹಾಸಿನ ಪಿಚ್ಗಳ ಮೇಲೆ ಆಡಿ ಒಂದೆರಡು ಟೆಸ್ಟ್ಗಳನ್ನು ಗೆದ್ದರೆ ಇಂಗ್ಲೆಂಡ್ಗೆ ಏನೂ ಪ್ರಯೋಜನವಾಗದು. ಅವರು ಌಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಬಗ್ಗೆ ಅಲೋಚಿಸಬೇಕಿದೆ. ಉತ್ತಮ ಪಿಚ್ಗಳ ಮೇಲೆ ಚೆನ್ನಾಗಿ ಆಡಿ ಗೆಲ್ಲುವ ಅಂಶವನ್ನು ಅವರು ಕಂಡುಕೊಳ್ಳಬೇಕು,’ ಎಂದು ವಾನ್ ಹೇಳಿದ್ದಾರೆ.
‘ಕಳೆದ ಕೆಲವು ವಾರಗಳಲ್ಲಿ ಇಂಗ್ಲೆಂಡ್ ಆಡಿರೋದು ಟೆಸ್ಟ್ ಕ್ರಿಕೆಟ್ ಅತ್ಯಂತ ಸೂಕ್ತವಾದ ಪಿಚ್ಗಳ ಮೇಲೆ. ಉತ್ತಮ ಆಟ ಪ್ರದರ್ಶಿಸಿದ ಟೀಮ್ ಟೆಸ್ಟ್ ಮತ್ತು ಸರಣಿಗಳನ್ನು ಗೆದ್ದುಕೊಂಡಿತು. ತಾನು ಉತ್ತಮವಾಗಿ ಆಡಿಲ್ಲ ಎಂಬ ಅಂಶವನ್ನು ಇಂಗ್ಲೆಂಡ್ ಮನಗಾಣಬೇಕಿದೆ. ಈಗಿನ ಇಂಗ್ಲಿಷ್ ತಂಡ ಆಸ್ಟ್ರೇಲಿಯವನ್ನು ಅದರೆ ನೆಲದಲ್ಲೇ ಮಣಿಸುವ ಯೋಚನೆ ನಿಜವಾಗಬೇಕಾದರೆ ಅದರ ಒಟ್ಟಾರೆ ಪ್ರದರ್ಶನದ ಮಟ್ಟ ಬಹಳಷ್ಟು ಸುಧಾರಿಸಬೇಕಿದೆ,’ ಎಂದು ವಾನ್ ಹೇಳಿದ್ದಾರೆ.