PV Sindhu: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಿದ್ದ ಸಿಂಧು ವಿಶ್ವ ಚಾಂಪಿಯನ್‌ಶಿಪ್​ನಿಂದ ಔಟ್..!

| Updated By: ಪೃಥ್ವಿಶಂಕರ

Updated on: Aug 13, 2022 | 10:31 PM

PV Sindhu: ಸಿಂಧು 2013 ರಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, ಇದುವರೆಗೆ ಅವರು ಒಂದು ಚಿನ್ನ ಸೇರಿದಂತೆ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಎರಡು ಬಾರಿ ಬೆಳ್ಳಿ ಹಾಗೂ ಎರಡು ಬಾರಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ.

PV Sindhu: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಿದ್ದ ಸಿಂಧು ವಿಶ್ವ ಚಾಂಪಿಯನ್‌ಶಿಪ್​ನಿಂದ ಔಟ್..!
Follow us on

ಇತ್ತೀಚಿಗೆ ಮುಗಿದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ (CWG 2o22), ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ದೇಶಕ್ಕಾಗಿ ಸ್ಮರಣೀಯ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಜೊತೆಗೆ ಸಿಂಧು ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಿಂಗಲ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯನ್ನು ಮಾಡಿದ್ದರು. ಆದರೆ ಸಿಂಧು ಈಗ ಈ ಚಿನ್ನದ ಪದಕದ ಗೆಲುವಿನ ಬಾರವನ್ನು ಹೊರಬೇಕಾಗಿದೆ. ಚಿನ್ನ ಗೆಲ್ಲುವ ಯತ್ನದಲ್ಲಿ, ಗಾಯದ ನಡುವೆಯೂ ಸಿಂಧು ಫೈನಲ್ ಆಡಿದ್ದರು. ಆದರೆ ಈಗ ಈ ಗಾಯವು ಗಂಭೀರವಾಗಿದ್ದು, ಈ ಕಾರಣದಿಂದಾಗಿ ಅವರು ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.

ಗಾಯದ ನಡುವೆಯೂ ಚಿನ್ನ ಗೆದ್ದ ಸಿಂಧು

ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ 22 ರಿಂದ ಆಗಸ್ಟ್ 28 ರವರೆಗೆ ನಡೆಯಲಿದ್ದು, ಮಾಜಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಸಿಂಧು ಈ ಸ್ಪರ್ಧೆಯಲ್ಲಿ ಬಾಗವಹಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗಷ್ಟೇ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ಸಿಂಧು ಗಾಯಗೊಂಡಿದ್ದರು. ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದ ವೇಳೆ ಸಿಂಧು ಈ ಗಾಯಕ್ಕೆ ಒಳಗಾಗಿದ್ದರು. ಇದರ ಹೊರತಾಗಿಯೂ, ಅವರು ಕಠಿಣ ಪಂದ್ಯದಲ್ಲಿ ಗೆಲುವ ಸಾಧಿಸಿದ್ದರು. ಜೊತೆಗೆ ಆಗಸ್ಟ್ 8 ರಂದು ನಡೆದ ಫೈನಲ್‌ನಲ್ಲಿ ಗಾಯದ ನೋವನ್ನು ಸಹಿಸಿಕೊಂಡು ತನಗೆ ಮತ್ತು ದೇಶಕ್ಕೆ ಸ್ಮರಣೀಯ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ
CWG 2022: ಕಾಮನ್​ವೆಲ್ತ್​ ಗೇಮ್ಸ್​ಗೆ ತೆರಳಿದ್ದ ಪಾಕಿಸ್ತಾನದ ಇಬ್ಬರು ಬಾಕ್ಸರ್​ಗಳು ಬರ್ಮಿಂಗ್‌ಹ್ಯಾಮ್‌ನಿಂದ ನಾಪತ್ತೆ..!
CWG 2022: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಮೊದಲ ಬಾರಿಗೆ ಪದಕ ಗೆದ್ದ ಭಾರತದ ಸ್ಪರ್ಧಿಗಳಿವರು
CWG 2022: ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್​​ನಲ್ಲಿ ಬೆಳ್ಳಿ ಗೆದ್ದ ಅಶ್ವಿನಿ ಪೊನ್ನಪ್ಪಗೆ ರಾಜ್ಯ ಸರ್ಕಾರದಿಂದ ನಗದು ಬಹುಮಾನ ಘೋಷಣೆ

ಅಕ್ಟೋಬರ್‌ನಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ

ಸಿಂಧು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅಲ್ಲದೆ ವಿಶ್ವ ಚಾಂಪಿಯನ್‌ಶಿಪ್‌ ಆರಂಭಕ್ಕೂ ಮೊದಲು ಸಿಂದು ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪೋರ್ಟ್‌ಸ್ಟಾರ್ ವರದಿ ಹೇಳಿದೆ. ಸಿಂಧು ಅವರ ಎಡ ಹಿಮ್ಮಡಿಯಲ್ಲಿ ಮೂಳೆ ಮುರಿತವಾಗಿದೆ ಎಂದು ಭಾರತದ ಸ್ಟಾರ್ ಷಟ್ಲರ್ ತಂದೆ ಪಿವಿ ರಾಮಣ್ಣ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಕಾರಣದಿಂದಾಗಿ, ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಕೋರ್ಟ್​ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಸಿಂಧು, ವಿಶ್ರಾಂತಿ ಮತ್ತು ಚೇತರಿಕೆಯತ್ತ ಗಮನ ಹರಿಸಲಿದ್ದು, ಅಕ್ಟೋಬರ್‌ನಲ್ಲಿ ಕೋರ್ಟ್​ಗೆ ಮರಳುವ ಸಾಧ್ಯತೆ ಇದೆ ಎಂದು ಅವರ ತಂದೆ ತಿಳಿಸಿದ್ದಾರೆ.

ಸೈನಾ ನೆಹ್ವಾಲ್ ಮೇಲೆ ಕಣ್ಣು

ಸಿಂಧು ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಆಟಗಾರ್ತಿಯಾಗಿದ್ದಾರೆ. 2019 ರಲ್ಲಿ, ಸಿಂಧು ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಂಧು 2013 ರಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, ಇದುವರೆಗೆ ಅವರು ಒಂದು ಚಿನ್ನ ಸೇರಿದಂತೆ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಎರಡು ಬಾರಿ ಬೆಳ್ಳಿ ಹಾಗೂ ಎರಡು ಬಾರಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಸಿಂಧು ಈ ಬಾರಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸೈನಾ ಹೊರತಾಗಿ ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್ ಕೂಡ ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿಗಾಗಿ ಸೆಣಸಾಡಲಿದ್ದಾರೆ.