PM Modi: ಆ.14 ರಂದು ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತರನ್ನು ಭೇಟಿ ಮಾಡಲಿದ್ದಾರೆ ಪ್ರಧಾನಿ ಮೋದಿ

PM Modi: ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಸ್ಪರ್ಧಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ

PM Modi: ಆ.14 ರಂದು ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತರನ್ನು ಭೇಟಿ ಮಾಡಲಿದ್ದಾರೆ ಪ್ರಧಾನಿ ಮೋದಿ
Follow us
TV9 Web
| Updated By: ಪೃಥ್ವಿಶಂಕರ

Updated on:Aug 12, 2022 | 6:35 PM

ಬರ್ಮಿಂಗ್‌ಹ್ಯಾಮ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games in Birmingham) ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಒಟ್ಟು 61 ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ ಆರಂಭಕ್ಕೂ ಮುನ್ನ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಭಾರತದ ಸ್ಪರ್ಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸಂವಾದ ನಡೆಸಿದ್ದರು. ಈಗ ಕ್ರೀಡಾಕೂಟ ಮುಗಿದಿದ್ದು, ಈ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಸ್ಪರ್ಧಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮಾಹಿತಿ ನೀಡಿದೆ.

ಇಂಗ್ಲೆಂಡಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿದ್ದಾಗಲೂ ಪ್ರಧಾನಿ ಮೋದಿ ಟ್ವಿಟರ್ ಮೂಲಕ ಪದಕ ಗೆದ್ದ ಆಟಗಾರರನ್ನು ಅಭಿನಂದಿಸಿ ಪ್ರೋತ್ಸಾಹಿಸುತ್ತಿದ್ದರು. ಈ ಹಿಂದೆ, ಟೋಕಿಯೊ ಒಲಿಂಪಿಕ್ಸ್‌ನಿಂದ ಭಾರತ ತಂಡ ಹಿಂದಿರುಗಿದಾಗ, ನರೇಂದ್ರ ಮೋದಿ ಅವರು ಪದಕ ವಿಜೇತರನ್ನು ಭೇಟಿಯಾಗಿದ್ದರು.

ಪದಕ ವಿಜೇತರನ್ನು ಭೇಟಿಯಾದ ರಾಜನಾಥ್ ಸಿಂಗ್

ಮತ್ತೊಂದೆಡೆ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಸಶಸ್ತ್ರ ಪಡೆಗಳ (ಆರ್ಮಿ) ಆಟಗಾರರನ್ನು ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು. ರಕ್ಷಣಾ ಸಚಿವರು ಸಶಸ್ತ್ರ ಪಡೆಗಳ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿ, ಅದ್ಭುತವಾಗಿ ಆಡಿದ್ದೀರಿ ಎಂದು ಹೊಗಳಿದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ರಾಜನಾಥ್ ಸಿಂಗ್, “ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿsಇದ್ದ ಸಶಸ್ತ್ರ ಪಡೆಗಳ ಆಟಗಾರರೊಂದಿಗೆ ಅತ್ಯುತ್ತಮ ಸಂವಾದ ನಡೆಸಿದೆ. ಅವರು ತಮ್ಮ ಅದ್ಭುತ ಪ್ರದರ್ಶನಗಳಿಂದ ಎಲ್ಲರನ್ನೂ ಸಂತೋಷಪಡಿಸಿದರು. ಜೊತೆಗೆ ತಮ್ಮ ಸಾಧನೆಗಳಿಂದ ರಾಷ್ಟ್ರವನ್ನು ಹೆಮ್ಮೆಪಡಿಸಿದರು. ಈ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಭಾರತದ ಪ್ರದರ್ಶನ ಹೀಗಿತ್ತು

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಒಟ್ಟು 61 ಪದಕಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ 22 ಚಿನ್ನದ ಪದಕ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಭಾರತ ಹಲವು ಕ್ರೀಡೆಗಳಲ್ಲಿ ಇತಿಹಾಸ ಸೃಷ್ಟಿಸಿತ್ತು. ಅಥ್ಲೆಟಿಕ್ಸ್‌ನಲ್ಲಿ ಭಾರತ ಸಾಕಷ್ಟು ಯಶಸ್ಸು ಕಂಡಿತ್ತು. ತೇಜಸ್ವಿನ್ ಶಂಕರ್, ಮುರಳಿ ಶ್ರೀಶಂಕರ್ ಅವರಂತಹ ಆಟಗಾರರು ಪ್ರಥಮ ಬಾರಿಗೆ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಕ್ರಿಕೆಟ್‌ಗೆ ಮೊದಲ ಬಾರಿಗೆ ಈ ಕ್ರೀಡಾಕೂಟದಲ್ಲಿ ಅವಕಾಶ ಸಿಕ್ಕಿತು. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ ಬೆಳ್ಳಿ ಪದಕ ಜಯಿಸಿತ್ತು.

Published On - 6:12 pm, Fri, 12 August 22