CWG 2022: ಕಾಮನ್‌ವೆಲ್ತ್ ಗೇಮ್ಸ್ಗೆ ತೆರಳಿದ್ದ ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ಬರ್ಮಿಂಗ್‌ಹ್ಯಾಮ್‌ನಿಂದ ನಾಪತ್ತೆ..!
CWG 2022: ಈ ಹಿಂದೆ, ದೇಶ್ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಆಟಗಾರರು ಕೂಡ ಬರ್ಮಿಂಗ್ಹ್ಯಾಮ್‌ನಲ್ಲಿ ನಾಪತ್ತೆಯಾಗಿದ್ದರು. ಇದಾದ ಬಳಿಕ ಏಳು ಆಟಗಾರರು ಒಬ್ಬೊಬ್ಬರಾಗಿ ನಾಪತ್ತೆಯಾಗಿದ್ದು ಶ್ರೀಲಂಕಾ ತಂಡದ ಸಂಕಷ್ಟವನ್ನು ಹೆಚ್ಚಿಸಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ (Commonwealth Games) ಅದ್ಧೂರಿ ತೆರೆಬಿದ್ದಿದೆ. ಕ್ರೀಡೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ತಾವು ಗೆದ್ದ ಪದಕಗಳನ್ನು ಹಿಡಿದು ತಮ್ಮ ತಮ್ಮ ದೇಶಗಳತ್ತ ತೆರೆಳುತ್ತಿದ್ದಾರೆ. ಆದರೆ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ಮಾತ್ರ ಕಾಮನ್‌ವೆಲ್ತ್ ಕ್ರೀಡಾ ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಒಕ್ಕೂಟ ಬುಧವಾರ ಈ ಮಾಹಿತಿ ನೀಡಿದೆ. ಪಾಕಿಸ್ತಾನ ಬಾಕ್ಸಿಂಗ್ ಫೆಡರೇಶನ್ (PBF) ಕಾರ್ಯದರ್ಶಿ ನಾಸರ್ ಟಾಂಗ್ ಮಾತನಾಡಿ, ಬಾಕ್ಸರ್ಗಳಾದ ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲಾ ಅವರು ಇಸ್ಲಾಮಾಬಾದ್‌ಗೆ ತೆರಳುವ ಗಂಟೆಗಳ ಮೊದಲು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಆಟಗಾರರ ಪಾಸ್‌ಪೋರ್ಟ್‌ಗಳು ಫೆಡರೇಶನ್ ಬಳಿ ಇವೆ
ಬಾಕ್ಸಿಂಗ್ ತಂಡದೊಂದಿಗೆ ಕ್ರೀಡಾಕೂಟಕ್ಕೆ ತೆರಳಿದ್ದ ಫೆಡರೇಶನ್ ಅಧಿಕಾರಿಗಳ ಬಳಿ ಅವರ ಪಾಸ್‌ಪೋರ್ಟ್ ಸೇರಿದಂತೆ ಅವರ ಪ್ರಯಾಣದ ದಾಖಲೆಗಳು ಇನ್ನೂ ಇವೆ ಎಂದು ಫೆಡರೇಶನ್ ಅಧಿಕಾರಿ ಟಾಂಗ್ ಹೇಳಿದರು. ಸುಲೇಮಾನ್ ಮತ್ತು ನಜೀರುಲ್ಲಾ ನಾಪತ್ತೆಯಾಗಿರುವ ಬಗ್ಗೆ ತಂಡದ ಆಡಳಿತ ಮಂಡಳಿ ಯುಕೆಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಮತ್ತು ಲಂಡನ್‌ನಲ್ಲಿರುವ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದರು. ಕಾಮನ್‌ವೆಲ್ತ್‌ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಪದಕ ಗೆಲ್ಲಲಾಗಲಿಲ್ಲ. ವೇಟ್ ಲಿಫ್ಟಿಂಗ್ ಮತ್ತು ಜಾವೆಲಿನ್ ಎಸೆತದಲ್ಲಿ ಎರಡು ಚಿನ್ನ ಸೇರಿದಂತೆ ಈ ಕ್ರೀಡೆಗಳಲ್ಲಿ ದೇಶ ಎಂಟು ಪದಕಗಳನ್ನು ಗೆದ್ದಿದೆ.
ಬಾಕ್ಸರ್‌ಗಳಿಗಾಗಿ ಹುಡುಕಾಟ ಶುರು
ಕಾಣೆಯಾದ ಬಾಕ್ಸರ್ ದಾಖಲೆಗಳನ್ನು ಪಾಕಿಸ್ತಾನದಿಂದ ಬರುವ ಎಲ್ಲಾ ಆಟಗಾರರಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ ಇರಿಸಲಾಗಿದೆ ಎಂದು ಟಾಂಗ್ ಹೇಳಿದ್ದಾರೆ. ಕಾಣೆಯಾದ ಬಾಕ್ಸರ್‌ಗಳ ಪ್ರಕರಣದ ತನಿಖೆಗಾಗಿ ಪಾಕಿಸ್ತಾನ ಒಲಿಂಪಿಕ್ ಅಸೋಸಿಯೇಷನ್ (POA) ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ. ಹಂಗೇರಿಯಲ್ಲಿ ನಡೆದ FINA ವಿಶ್ವ ಚಾಂಪಿಯನ್‌ಶಿಪ್‌ನಿಂದ ರಾಷ್ಟ್ರೀಯ ಈಜುಗಾರ ಫೈಜಾನ್ ಅಕ್ಬರ್ ನಾಪತ್ತೆಯಾದ ಎರಡು ತಿಂಗಳ ನಂತರ ಈ ಘಟನೆ ಮತ್ತೆ ಮರುಕಳಿಸಿದೆ. ಆದರೆ ಈ ಹಿಂದೆ ಕಾಣೆಯಾಗಿದ್ದ ಅಕ್ಬರ್, ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧೆ ಕೂಡ ಮಾಡಲಿಲ್ಲ. ಅಕ್ಬರ್ ಬುಡಾಪೆಸ್ಟ್‌ಗೆ ಬಂದ ಕೆಲವು ಗಂಟೆಗಳ ನಂತರ ತನ್ನ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳೊಂದಿಗೆ ಕಣ್ಮರೆಯಾಗಿದ್ದರು. ಜೂನ್ ತಿಂಗಳಲ್ಲಿ ನಾಪತ್ತೆಯಾಗಿದ್ದ ಅಕ್ಬರ್ ಸುಳಿವು ಇಲ್ಲಿವರೆಗೂ ಪತ್ತೆಯಾಗಿಲ್ಲ.
ಶ್ರೀಲಂಕಾ ಆಟಗಾರರೂ ನಾಪತ್ತೆ
ಈ ಹಿಂದೆ, ದೇಶ್ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಆಟಗಾರರು ಕೂಡ ಬರ್ಮಿಂಗ್ಹ್ಯಾಮ್‌ನಲ್ಲಿ ನಾಪತ್ತೆಯಾಗಿದ್ದರು. ಶ್ರೀಲಂಕಾದ ಮೊದಲ ಜೂಡೋ ಆಟಗಾರ್ತಿ ಚಮಿಲಾ ದಿಲಾನಿ, ಆಕೆಯ ಮ್ಯಾನೇಜರ್ ಅಸೆಲಾ ಡಿ ಸಿಲ್ವಾ ಮತ್ತು ಕುಸ್ತಿಪಟು ಶಾನಿತ್ ಬರ್ಮಿಂಗ್ಹ್ಯಾಮ್‌ನಲ್ಲಿ ನಾಪತ್ತೆಯಾಗಿದ್ದಾರೆ. ಇದಾದ ಬಳಿಕ ಏಳು ಆಟಗಾರರು ಒಬ್ಬೊಬ್ಬರಾಗಿ ನಾಪತ್ತೆಯಾಗಿದ್ದು ಶ್ರೀಲಂಕಾ ತಂಡದ ಸಂಕಷ್ಟವನ್ನು ಹೆಚ್ಚಿಸಿದೆ. ಈ ಎಲ್ಲಾ ಆಟಗಾರರ ಪಾಸ್‌ಪೋರ್ಟ್‌ಗಳು ಅಧಿಕೃತ ತಂಡದ ಬಳಿ ಮಾತ್ರ ಇವೆ. ನಾಪತ್ತೆಯಾದ ಅಷ್ಟೂ ಸ್ಪರ್ಧಿಗಳು ಪ್ರಸ್ತುತ ಆರು ತಿಂಗಳ ವೀಸಾ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಈ ಆಟಗಾರರು ಕೆಲಸ ಮಾಡುವ ಉದ್ದೇಶದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ತಂಗಿದ್ದಾರೆ ಎಂದು ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
Published On - 4:00 pm, Thu, 11 August 22