
ಜಪಾನ್‌ನಲ್ಲಿ ಇತ್ತೀಚೆಗೆ ನಡೆದ ಜೂನಿಯರ್ ಮಹಿಳಾ ಏಷ್ಯಾಕಪ್ (Asia Cup) ಹಾಕಿ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ರಿಪಬ್ಲಿಕ್ ಆಫ್ ಕೊರಿಯಾ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿ ಭಾರತ ಮಹಿಳಾ ಜೂನಿಯರ್ ತಂಡ ಈ ಸಾಧನೆ ಮಾಡಿತ್ತು. ಈ ಐತಿಹಾಸಿಕ ಸಾಧನೆ ಮಾಡಿದ ಜೂನಿಯರ್ ಮಹಿಳಾ ಹಾಕಿ ತಂಡವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ಸನ್ಮಾನಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹಾಕಿ ತಂಡವನ್ನು SAI ಅಧಿಕಾರಿಗಳು ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಂಡರು. ಮಂಗಳವಾರ ಮಧ್ಯಾಹ್ನ SAI NCOE ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂನಿಯರ್ ಹಾಕಿ ತಂಡವನ್ನು ಗೌರವಿಸಲಾಯಿತು.
ಈ ತಂಡದಲ್ಲಿ ಒಟ್ಟು 17 ಖೇಲೋ ಇಂಡಿಯಾ ಅಥ್ಲೀಟ್‌ಗಳಿದ್ದರು. ಇವರೆಲ್ಲರೂ ವಿವಿಧ SAI ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ನ ಭಾಗವಾಗಿರುವರು ಎಂಬುದು ವಿಶೇಷ. ಅಲ್ಲದೆ ಈ ತಂಡದ ಆಯ್ಕೆಗಾಗಿ ನಡೆಸಲಾದ ಮೌಲ್ಯಮಾಪನಗಳು ಮತ್ತು ಪ್ರಯೋಗಗಳು SAI NCOE ಬೆಂಗಳೂರಿನಲ್ಲಿ ನಡೆದಿದ್ದವು. ಇದೀಗ ಅದೇ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
“ನಾವು ಉತ್ತಮವಾಗಿ ಹೋರಾಡಿದ್ದೇವೆ. ಒಂದು ತಂಡವಾಗಿ ಒಟ್ಟಿಗೆ ಆಡಿದ್ದೇವೆ. ಅನುಭವಿ ಮತ್ತು ಯುವ ಆಟಗಾರರ ಮಿಶ್ರಣವಿದ್ದರೂ ನಾವು ಚೆನ್ನಾಗಿ ಬೆರೆತಿದ್ದೇವೆ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರ ನಿರಂತರ ಬೆಂಬಲಕ್ಕಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿ ಸಾಯಿ ಕೇಂದ್ರಕ್ಕೆ ಕೇವಲ ಒಂದು ಫೋನ್ ಕರೆ ಮಾಡಿದ್ರೆ ಸಾಕಿತ್ತು. ಹೀಗೆ ಪ್ರತಿ ಹಂತದಲ್ಲೂ ನಮ್ಮೆಲ್ಲರ ನೆರವಿಗೆ ನಿಂತ ಬೆಂಗಳೂರಿನ SAI ಕೇಂದ್ರದಲ್ಲಿನ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ, ”ಎಂದು ಜೂನಿಯರ್ ಮಹಿಳಾ ತಂಡದ ನಾಯಕಿ ಪ್ರೀತಿ ಹೇಳಿದರು.
ಅಜೇಯ ನಾಗಾಲೋಟ:
ವಿಶೇಷ ಎಂದರೆ ಈ ಬಾರಿಯ ಟೂರ್ನಿಯಲ್ಲಿ ಭಾರತದ ಜೂನಿಯರ್ ಮಹಿಳಾ ಹಾಕಿ ತಂಡವು ಒಂದೇ ಒಂದು ಪಂದ್ಯ ಸೋತಿಲ್ಲ. ಫೈನಲ್‌ವರೆಗೆ ಆಡಿದ 6 ಪಂದ್ಯಗಳಲ್ಲಿ ಭಾರತ 5 ರಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇನ್ನು ತಂಡದ ಯುವ ಪ್ರತಿಭೆ ಅಣ್ಣು ಇಡೀ ಪಂದ್ಯಾವಳಿಯಲ್ಲಿ ಒಟ್ಟು 9 ಗೋಲುಗಳೊಂದಿಗೆ ಅಗ್ರ ಗೋಲ್‌ಸ್ಕೋರರ್ ಆಗಿ ಮಿಂಚಿದ್ದರು.
ಜೂನಿಯರ್ ಮಹಿಳಾ ಹಾಕಿ ಏಷ್ಯಾ ಕಪ್‌ನಲ್ಲಿನ ಈ ಗೆಲುವು ಯುವ ಕ್ರೀಡಾಪಟುಗಳ ಅಪಾರ ಪ್ರತಿಭೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುವುದಲ್ಲದೆ, ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠ ಕೇಂದ್ರವು ನೀಡುವ ಅಸಾಧಾರಣ ತರಬೇತಿ ಮೂಲಸೌಕರ್ಯ ಮತ್ತು ಬೆಂಬಲಕ್ಕೆ ಸಾಕ್ಷಿಯಾಗಿದೆ. ಈ ಗೆಲುವು ಹಾಕಿ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಅಭಿವೃದ್ಧಿಪಡಿಸುವ ಕೇಂದ್ರವಾಗಿ ಕೇಂದ್ರದ ಸ್ಥಾನವನ್ನು ಗಟ್ಟಿಗೊಳಿಸುತ್ತದೆ. ಅಂತರರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಬಲವಾದ ನೆಲೆಯನ್ನು ಸೃಷ್ಟಿಸುತ್ತದೆ.
ಜೂನಿಯರ್ ಪುರುಷರ ಹಾಕಿ ತಂಡವು ಸಹ, ಈ ಹಿಂದೆ ಒಮಾನ್‌ನ ಸಲಾಲಾದಲ್ಲಿ ನಡೆದ ಏಷ್ಯಾ ಕಪ್ 2023 ಅನ್ನು ಗೆದ್ದುಕೊಂಡಿತ್ತು. ಇಲ್ಲೂ ವಿಶೇಷ ಎಂದರೆ ಜೂನಿಯರ್ ಪುರುಷರ ತಂಡವೂ ಸ್ಪರ್ಧೆಯಲ್ಲಿ ಅಜೇಯವಾಗಿ ಉಳಿದಿದೆ. ಅಂದರೆ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ.
ಭಾರತ ಜೂನಿಯರ್ ಪುರಷರ ಹಾಗೂ ಮಹಿಳಾ ತಂಡಗಳು ಅಜೇಯ ನಾಗಾಲೋಟದೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಕಳೆದ ಕೆಲ ವರ್ಷಗಳಿಂದ ಹಿಮ್ಮುಖದತ್ತ ಸಾಗುತ್ತಿದ್ದ ಹಾಕಿ ಕ್ರೀಡೆಗೆ ಯುವ ಆಟಗಾರರ ಹೊಸ ಚೈತನ್ಯ ತುಂಬುವ ಭರವಸೆ ಮೂಡಿಸಿದ್ದಾರೆ.