
ಜುಲೈ 19, 2026 ರಂದು ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ, 2026ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಯಾವುದೇ ಗೋಲು ಬಾರಿಸಿರಲಿಲ್ಲ. ಆ ಬಳಿಕ ನಡೆದ ಹೆಚ್ಚುವರಿ ನಿಮಿಷದಲ್ಲಿ ಪಂದ್ಯ ಫಲಿತಾಂಶ ನಿರ್ಧಾರವಾಯಿತು.
ಪರಿಣಾಮ ಅರ್ಜೆಂಟೀನಾ ತಂಡವು ಸ್ಪೇನ್ ಮುಂದೆ ಶರಣಾಗಲೇಬೇಕಾಯಿತು. ಅದರಂತೆ ಫೆರಾನ್ ಟೊರೆಸ್ ಬಾರಿಸಿದ ಐತಿಹಾಸಿಕ ಗೋಲಿನೊಂದಿಗೆ ಸ್ಪೇನ್ ತಂಡವು ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಸ್ಪೇನ್ ಪುರುಷರ ತಂಡ ಗೆದ್ದ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2010 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಫುಟ್‌ಬಾಲ್ ಇತಿಹಾಸದಲ್ಲೇ ಒಂದೇ ಸಮಯದಲ್ಲಿ ಪುರುಷರ ಮತ್ತು ಮಹಿಳೆಯರ (2023) ವಿಶ್ವಕಪ್ ಟ್ರೋಫಿಗಳನ್ನು ಹೊಂದಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಗಿದೆ.
ಫೈನಲ್ನಲ್ಲಿ ಸ್ಪೇನ್ ತಂಡವನ್ನು ಮಣಿಸಿ ಅರ್ಜೆಂಟೀನಾ ಹೊಸ ಇತಿಹಾಸ ನಿರ್ಮಿಸುವ ಇರಾದೆಯಲ್ಲಿತ್ತು. ಅಂದರೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕೇವಲ 2 ತಂಡಗಳು ಮಾತ್ರ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆ ತಂಡಗಳೆಂದರೆ ಇಟಲಿ (1934, 1938 ) ಮತ್ತು ಬ್ರೆಝಿಲ್ (1958, 1962).
ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!
ಇದಾದ ಬಳಿಕ ಕಳೆದ 60 ವರ್ಷಗಳಿಂದ ಯಾವುದೇ ತಂಡ ಬ್ಯಾಕ್ ಟು ಬ್ಯಾಕ್ ವಿಶ್ವಕಪ್ ಗೆದ್ದಿಲ್ಲ. 2022 ರಲ್ಲಿ ವರ್ಲ್ಡ್ ಕಪ್ ಎತ್ತಿ ಹಿಡಿದಿದ್ದ ಅರ್ಜೆಟೀನಾ ಈ ಬಾರಿ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿ ಹೊಸ ಇತಿಹಾಸ ಬರೆಯುವ ಇರಾದೆಯಲ್ಲಿತ್ತು. ಆದರೆ ಸ್ಪೇನ್ ತಂಡ ಶಿಸ್ತಿನ ಆಟದ ಮುಂದೆ ಸೋಲೊಪ್ಪಿಕೊಳ್ಳದೇ ವಿಧಿಯಿರಲಿಲ್ಲ ಎನ್ನಬಹುದು.