India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್ಗಳು
ಸಾಮಾನ್ಯವಾಗಿ ಸ್ಪಿನ್ನರ್ಗಳ ವಿರುದ್ಧ ಚೆನ್ನಾಗಿ ಆಡುವ ಭಾರತದ ಬ್ಯಾಟ್ಸ್ಮನ್ಗಳು ಎಡಗೈ ಸ್ಪಿನ್ನರ್ಗಳ ವಿರುದ್ಧ ಶಸ್ತ್ರ ಚೆಲ್ಲಿರುವ ಸಂದರ್ಭಗಳಿವೆ. ಈಗ ಇಂಗ್ಲೆಂಡ್ ಭಾರತ ಪ್ರವಾಸದಲ್ಲಿರುವುದರಿಂದ ಭಾರತೀಯ ಬ್ಯಾಟ್ಸ್ಮನ್ಗಳನ್ನು ಗೋಳುಹೊಯ್ದುಕೊಂಡ ಇಂಗ್ಲಿಷ್ ಬೌಲರ್ಗಳ ಬಗ್ಗೆ ಸ್ವಲ್ಪ ವಿವರ ಇಲ್ಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 4 ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ (ಫೆ.5) ಚೆನೈನ ಚೆಪಾಕ್ ಮೈದಾನದಲ್ಲಿ ಶುರುವಾಗಲಿದೆ. ಎರಡೂ ತಂಡದ ಮ್ಯಾನೇಜ್ಮೆಂಟ್ಗಳು ಆಡುವ ಎಲೆವೆನ್ ಬಗ್ಗೆ ತಲೆ ಬಿಸಿಮಾಡಿಕೊಂಡಿವೆ. ಉಪಖಂಡದ ಪಿಚ್ಗಳು ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್ಗೆ ನೆರವಾಗುವುದರಿಂದ ಭಾರತ ಮೂರು ಸ್ಪಿನ್ನರ್ಗಳನ್ನು (ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್) ಆಡಿಸಿದರೆ ಆಶ್ಚರ್ಯವಿಲ್ಲ.
ಕ್ರಿಕೆಟ್ ಪಂದ್ಯಗಳನ್ನು ಬಹಳ ದಿನಗಳಿಂದ ಫಾಲೊ ಮಾಡಿಕೊಂಡು ಬಂದಿರುವವರಿಗೆ ಎಡಗೈ ಸ್ಪಿನ್ನರ್ಗಳು (left-arm orthodox) ಕ್ರೀಡೆಯ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಗೊತ್ತಿರುತ್ತದೆ. ಹಿಂದೆ, ಇವರು ಎಲ್ಲ ರಾಷ್ಟ್ರೀಯ ತಂಡಗಳ ಅವಿಭಾಜ್ಯ ಅಂಗವಾಗಿರುತ್ತಿದ್ದರು. ಪ್ರತಿ ಟೀಮು ಕನಿಷ್ಠ ಒಬ್ಬ ಎಡಗೈ ಸ್ಪಿನ್ನರ್ನನ್ನು ಹೊಂದಿರುತ್ತಿತ್ತು. ಆದರೆ ಈ ಸಮುದಾಯದ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದು ಈಗ ಅವರನ್ನು ಹುಡುಕುವುದೇ ಕಷ್ಟವಾಗಿದೆ.
ಬಾಪು ನಾಡಕರ್ಣಿ, ಸಲೀಮ್ ದುರಾನಿ ಮೊದಲಾದವರಿಂದ ಹಿಡಿದು ಈಗಿನ ರವೀಂದ್ರ ಜಡೇಜಾವರೆಗೆ ಹಲವಾರು ವಿಶ್ವ ದರ್ಜೆಯ ಎಡಗೈ ಸ್ಪಿನ್ನರ್ಗಳು ಭಾರತಕ್ಕಾಗಿ ಆಡಿದ್ದಾರೆ.
ಇದನ್ನೂ ಓದಿ: ಫೆ.5ರಿಂದ ಆರಂಭವಾಗುವ ಟೆಸ್ಟ್ ಪಂದ್ಯದ ನೇರ ಪ್ರಸಾರ ಯಾವ ಚಾನೆಲ್ನಲ್ಲಿ?
ಹಲವು ಖ್ಯಾತನಾಮರು ಬಿಷನ್ ಸಿಂಗ್ ಬೇಡಿ, ದಿಲಿಪ್ ದೋಷಿ, ರವಿ ಶಾಸ್ತ್ರೀ, ಮಣೀಂದರ್ ಸಿಂಗ್, ವೆಂಕಟಪತಿರಾಜು, ಸುನಿಲ್ ಜೋಷಿ, ಕಾರ್ತೀಕ್ ಮುರಳಿ ಮೊದಲಾದವರೆಲ್ಲ ಭಾರತವನ್ನು ಪ್ರತಿನಿಧಿಸಿದ ಖ್ಯಾತ ಲೆಫ್ಟ್ ಆರ್ಮ್ ಸ್ಪಿನ್ನರ್ಗಳಲ್ಲಿ ಪ್ರಮುಖರು. ಬಲಗೈ ಬ್ಯಾಟ್ಸ್ಮನ್ಗಳು ಎಡಗೈ ಸ್ಪಿನ್ನರ್ಗಳನ್ನು ಎದುರಿಸಿ ಆಡುವಾಗ ಸ್ವಲ್ಪ ಪರದಾಡುತ್ತಾರೆ. ಯಾಕೆಂದರೆ ಅವರು ಬೌಲ್ ಮಾಡುವಾಗ ಸೃಷ್ಟಿಸುವ ಆ್ಯಂಗಲ್ ಬಲಗೈ ಬ್ಯಾಟ್ಸ್ಮನ್ನನ್ನು ತೊಂದರೆಗೆ ಈಡುಮಾಡುತ್ತದೆ. ಅಲ್ಲದೆ ಎಡಗೈ ಸ್ಪಿನ್ನರ್ಗಳು ಬೌಲಿಂಗ್ ಕ್ರೀಸನ್ನು ಆದ್ಭುತವಾಗಿ ಉಪಯೋಗಿಸಿಕೊಳ್ಳುತ್ತಾರೆ. ಹಾಗಾಗೇ, ಅವರು ಬ್ಯಾಟ್ಸ್ಮನ್ಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕೋನವನ್ನು ಸೃಷ್ಟಿಸಿತ್ತಾರೆ. ಬಲಗೈ ಬ್ಯಾಟ್ಸ್ಮನ್ಗಳಿಗೆ ಪಿಚ್ ಆಗಿ ತಮ್ಮತ್ತ ಬರುವ ಎಸೆತವನ್ನು ಎದುರಿಸಿ ಆಡುವುದು ಸುಲಭ, ಆದರೆ ಅವರಿಂದ ದೂರಕ್ಕೆ ಸ್ಪಿನ್ ಆಗುವ ಎಸೆತಗಳನ್ನು ಬಹಳ ಜಾಗರೂಕತೆಯಿಂದ ಆಡಬೇಕಾಗುತ್ತದೆ.
ಸಾಮಾನ್ಯವಾಗಿ ಸ್ಪಿನ್ನರ್ಗಳ ವಿರುದ್ಧ ಚೆನ್ನಾಗಿ ಆಡುವ ಭಾರತದ ಬ್ಯಾಟ್ಸ್ಮನ್ಗಳು ಸಹ ಎಡಗೈ ಸ್ಪಿನ್ನರ್ಗಳ ವಿರುದ್ಧ ಶಸ್ತ್ರ ಚೆಲ್ಲಿದ ಸಂದರ್ಭಗಳಿವೆ. ಈಗ ಇಂಗ್ಲೆಂಡ್ ಭಾರತ ಪ್ರವಾಸದಲ್ಲಿರುವುದರಿಂದ ಭಾರತೀಯ ಬ್ಯಾಟ್ಸ್ಮನ್ಗಳನ್ನು ಗೋಳುಹೊಯ್ದುಕೊಂಡ ಇಂಗ್ಲಿಷ್ ಬೌಲರ್ಗಳ ಬಗ್ಗೆ ಒಂದಿಷ್ಟು ಚರ್ಚಿಸುವ.
ಬಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಇಂಗ್ಲೆಂಡ್ ಮೂರು ಬಾರಿ ಭಾರತದಲ್ಲಿ ಸರಣಿ ಜಯ ಸಾಧಿಸಿದೆ. 1976-77ರಲ್ಲಿ (3-1), 1984-85ರಲ್ಲಿ (2-1) ಮತ್ತು 2012-13ರಲ್ಲಿ ಇಂಗ್ಲೀಷರು ಭಾರತದ ನೆಲದ ಮೇಲೆ ಸರಣಿ ಗೆದ್ದಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಈ ಜಯಗಳಲ್ಲಿ ಇಂಗ್ಲೆಂಡ್ನ ಎಡಗೈ ಸ್ಪಿನ್ನರ್ಗಳು ನಿರ್ಣಾಯಕ ಪಾತ್ರ ನಿರ್ವಹಿಸಿರುವುದು.
ಅದು ಈ ಸಮುದಾಯದ ಬೌಲರ್ಗಳ ವಿರುದ್ಧ ಬಾರತೀಯ ಬ್ಯಾಟ್ಸ್ಮನ್ಗಳ ದೌರ್ಬಲ್ಯವನ್ನು ತೋರಿಸುತ್ತದೆ. 1976-77 ಸರಣಿಯಲ್ಲಿ ಇಂಗ್ಲೆಂಡ್ನ ವಿಖ್ಯಾತ ಎಡಗೈ ಸ್ಪಿನ್ನರ್ ಡೆರಿಕ್ ಅಂಡರ್ವುಡ್ 29 ವಿಕೆಟ್ಗಳನ್ನು ಪಡೆದಿದ್ದರು, 1984-85ರಲ್ಲಿ ಫಿಲ್ ಎಡ್ಮಂಡ್ಸ್ 14 ಮತ್ತು 2012-13 ರಲ್ಲಿ ಭಾರತೀಯ ಮೂಲದ ಮಾಂಟಿ ಪನೆಸಾರ್ 17 ವಿಕೆಟ್ ಕಬಳಿಸಿದ್ದರು.
2000ನೇ ವರ್ಷದಿಂದೀಚೆಗೆ 4ಬಾರಿ ಭಾರತ ಪ್ರವಾಸ ಬಂದಿರುವ ಇಂಗ್ಲೆಂಟ್ ಕೇವಲ ಒಮ್ಮೆ ಮಾತ್ರ (2016-17 ರ ಸರಣಿ) ಎಡಗೈ ಸ್ಪಿನ್ನರ್ನನ್ನು ಕರೆತಂದಿರಲಿಲ್ಲ. ಆ ಸರಣಿಯನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ 4-0 ಅಂತರದಿಂದ ಸುಲಭವಾಗಿ ಗೆದ್ದಿತ್ತು. ಆಗ ಮೋಯಿನ್ ಅಲಿ (ಆಫ್ ಸ್ಫಿನ್ನರ್ ) ಮತ್ತು ಅದಿಲ್ ರಶೀದ್ (ಲೆಗ್ ಸ್ಪಿನ್ನರ್) ಇಂಗ್ಲೆಂಡ್ ತಂಡದ ಭಾಗವಾಗಿದ್ದರು.
ಈ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಎಡಗೈ ಸ್ಪಿನ್ನರ್ಗಳನ್ನು ಅಷ್ಟು ಚೆನ್ನಾಗಿ ಅಡಲಾರರು ಎನ್ನುವುದನ್ನು ಮನಗಂಡಿರುವ ಇಂಗ್ಲೆಂಡ್, ಜ್ಯಾಕ್ ಲೀಚ್ ಹೆಸರಿನ ಅಷ್ಟೇನೂ ಅನುಭವಿಯಲ್ಲದ (12 ಟೆಸ್ಟ್ ಆಡಿದ್ದಾರೆ) ಎಡಗೈ ಸ್ಪಿನ್ನರ್ನನ್ನು ಕರೆತಂದಿದೆ. ಅವರಿಗೆ ಜೊತೆಗಾರರಾಗಿ ಆಫ್-ಸ್ಪಿನ್ನರ್ ಡಾಮ್ ಬೆಸ್ ಆಡಲಿದ್ದಾರೆ. ಮೊನ್ನೆಯಷ್ಟೇ ಮುಕ್ತಾಯಗೊಂಡ 2-ಟೆಸ್ಟ್ಗಳ ಶ್ರೀಲಂಕಾ ಸರಣಿಯಲ್ಲಿ ಲೀಚ್ 10 ವಿಕೆಟ್ ಪಡೆದರೆ, ಬೆಸ್ 12 ವಿಕೆಟ್ಗಳನ್ನು ಕಬಳಿಸಿದರು. ಪಿಚ್ ಸ್ವಲ್ಪ ಹಳೆಯದಾದ ನಂತರ ಅದನ್ನು ಟೀಮಿನ ಪ್ರಯೋಜನಕ್ಕೆ ಬಳಸುವ ಕ್ಷಮತೆಯನ್ನು ಇವರಿಬ್ಬರು ಶ್ರೀಲಂಕಾದಲ್ಲಿ ಪ್ರದರ್ಶಿಸಿದರು. ಆಫ್-ಸ್ಪಿನ್ ಮತ್ತು ಎಡಗೈ ಸ್ಪಿನ್ನರ್ಗಳ ಜೋಡಿಯಾಗಿದ್ದ ಪನೆಸಾರ್ ಮತ್ತು ಗ್ರೇಮ್ ಸ್ವ್ಯಾನ್ ಜೋಡಿಯು 2012-13 ಸರಣಿಯಲ್ಲಿ ಭಾರತದ ಬ್ಯಾಟ್ಸ್ಮನ್ಗಳ ವಿರುದ್ಧ ಮೇಲುಗೈ ಸಾಧಿಸಿದ್ದರಿಂದ ಇಂಗ್ಲೆಂಡ್, ಲೀಚ್ ಮತ್ತು ಬೆಸ್ ಮೇಲೆ ಹೆಚ್ಚು ವಿಶ್ವಾಸವಿಟ್ಟು ಎಲ್ಲ ಪಂದ್ಯಗಳಲ್ಲೂ ಆಡಿಸಬೇಕಿದೆ.
ಓಕೆ, ಎಡಗೈ ಸ್ಪಿನ್ನರುಗಳ ಪ್ರಸಕ್ತ ಚಿತ್ರಣವನ್ನು ಒಮ್ಮೆ ಗಮನಿಸಿದರೆ, ಈ ಕಲೆಯನ್ನು ಅಳವಡಸಿಕೊಂಡವರ ಸಂಖ್ಯೆ ತೀವ್ರವಾಗಿ ಇಳಮುಖಗೊಂಡಿರುವುದು ವೇದ್ಯವಾಗುತ್ತದೆ. 2010 ರಿಂದೀಚೆಗೆ ಶ್ರೀಲಂಕಾದ ರಂಗನಾ ಹೆರಾತ್ ಅವರನ್ನು ಹೊರತುಪಡಿಸಿ ಭಾರತದ ರವೀಂದ್ರ ಜಡೇಜಾ ಮತ್ತು ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್- ಇವರಿಬ್ಬರನ್ನು ಬಿಟ್ಟರೆ ಗಮನಸೆಳೆಯುವಂಥ ಪ್ರದರ್ಶನಗಳನ್ನು ಯಾವುದೇ ಎಡಗೈ ಸ್ಪಿನ್ನರ್ ನೀಡಿಲ್ಲ.
ಇಂಗ್ಲೆಂಡ್ ಆಟಗಾರರೂ ಎಡಗೈ ಸ್ಪಿನ್ರ್ಗಳನ್ನು ಸಮರ್ಥವಾಗಿ ಆಡುವುದಿಲ್ಲವಾದ್ದರಿಂದ, ಭಾರತ ಗಾಯಗೊಂಡಿರುವ ಜಡೇಜಾ ಸ್ಥಾನದಲ್ಲಿ ಅಕ್ಸರ್ ಪಟೇಲ್ರನ್ನು ಆಡಿಸಲು ನಿರ್ಧರಿಸಿದೆ. ಓದುಗರು ಒಂದು ಸಂಗತಿಯನ್ನು ನೆನಪಿಟ್ಟಕೊಳ್ಳಬೇಕು, ಕುಲ್ದೀಪ್ ಯಾದವ್ ಸಹ ಎಡಗೈ ಸ್ಪಿನರ್ ಎನ್ನುವುದು ನಿಜವಾದರೂ ಅವರು ಚೈನಾಮನ್ಗಳನ್ನು ಬೌಲ್ ಮಾಡುತ್ತಾರೆ.
ಎರಡೂ ತಂಡಗಳಿಗೆ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ದೃಷ್ಟಿಯಿಂದ ಈ ಸರಣಿ ಬಹಳ ಮಹತ್ವಪೂರ್ಣದ್ದಾಗಿದೆ. ಪ್ರಸಕ್ತ ಸೈಕಲ್ನ ಫೈನಲ್ ಜೂನ್ನಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು ನ್ಯೂಜಿಲೆಂಡ್ ಈಗಾಗಲೇ ಫೈನಲ್ ಆಡುವ ಅರ್ಹತೆ ಗಿಟ್ಟಿಸಿದೆ. ಅದರೊಂದಿಗೆ ಸೆಣೆಸಲು ಭಾರತ-ಇಂಗ್ಲೆಂಡ್-ಆಸ್ಟ್ರೇಲಿಯ ನಡುವೆ ತ್ರಿಕೋನದ ಪೈಪೋಟಿ ಜಾರಿಯಲ್ಲಿದೆ.
India vs England Test Series | ವಿರಾಟ್ ಕೊಹ್ಲಿಗೆ ಸಲಹೆ ನೀಡುತ್ತಾ ನೆರವಾಗುವುದೇ ನನ್ನ ಕೆಲಸ: ಅಜಿಂಕ್ಯಾ ರಹಾನೆ
Published On - 6:49 pm, Thu, 4 February 21