
ಗ್ಲ್ಯಾಸ್ಗೋದಲ್ಲಿ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕ್ರೀಡಾಕೂಟದ ಅಂತ್ಯಕ್ಕೆ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನೊಂದಿಗೆ ಒಟ್ಟು 39 ಪದಕಗಳನ್ನು ಗೆದ್ದ ಭಾರತೀಯ ಅಥ್ಲೀಟ್‌ಗಳು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದು 2022ರ ಬರ್ಮಿಂಗ್‌ಹ್ಯಾಮ್ ಕೂಟದ ಪ್ರದರ್ಶನಕ್ಕೆ ಹೋಲಿಸಿದರೆ ತುಂಬಾ ಕಮ್ಮಿ. ಏಕೆಂದರೆ ಕಳೆದ ಬಾರಿ ಬರೋಬ್ಬರಿ 61 ಪದಕಗಳನ್ನು ಮುಡಿಗೇರಿಸಿಕೊಂಡಿದ್ದ ಭಾರತ, ಈ ಬಾರಿ ಕೇವಲ 39 ಪದಕಗಳಿಗಷ್ಟೇ ತೃಪ್ತಿಪಡಬೇಕಾಗಿ ಬಂದಿದೆ.
ಆದರೆ, ಪದಕಗಳ ಈ ಕುಸಿತಕ್ಕೆ ಕ್ರೀಡಾಪಟುಗಳ ವೈಫಲ್ಯ ಖಂಡಿತಾ ಕಾರಣವಲ್ಲ, ಬದಲಿಗೆ ಕ್ರೀಡಾಕೂಟದ ಹೊಸ ನಿಯಮಾವಳಿಗಳೇ ಕಾರಣ! ಈ ಬಾರಿ ಭಾರತಕ್ಕೆ ಪದಕದ ಗ್ಯಾರಂಟಿ ನೀಡುತ್ತಿದ್ದ ಹಲವು ಪ್ರಮುಖ ಕ್ರೀಡೆಗಳನ್ನು ಕೂಟದಿಂದ ಕೈಬಿಟ್ಟಿರುವುದು ಒಟ್ಟಾರೆ ಪದಕಗಳ ಸಂಖ್ಯೆಯಲ್ಲಿ ಇಷ್ಟೊಂದು ಭಾರಿ ವ್ಯತ್ಯಾಸ ಉಂಟಾಗಲು ಅಸಲಿ ಕಾರಣವಾಗಿದೆ.
ಆತಿಥೇಯ ನಗರವಾದ ಗ್ಲ್ಯಾಸ್ಗೋ ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ಬಾರಿ ಕ್ರೀಡಾಕೂಟವನ್ನು ಕೇವಲ 10 ಕ್ರೀಡೆಗಳಿಗೆ ಸೀಮಿತಗೊಳಿಸಿತು. ಈ ನಿರ್ಧಾರದಿಂದಾಗಿ ಭಾರತಕ್ಕೆ ನೂರಕ್ಕೆ ನೂರು ಪದಕ ತಂದುಕೊಡುತ್ತಿದ್ದ 9 ಪ್ರಮುಖ ಕ್ರೀಡೆಗಳನ್ನು ಕೂಟದಿಂದ ಸಂಪೂರ್ಣವಾಗಿ ಹೊರಗಿಡಲಾಯಿತು.
ಅಂದರೆ ಕಳೆದ ಬಾರಿಯ 61 ಪದಕಗಳಲ್ಲಿ ಬರೋಬ್ಬರಿ 30 ಪದಕಗಳು ಬಂದಿದ್ದು ಇದೇ ಕ್ರೀಡೆಗಳಿಂದ. ಆದರೆ ಈ ಬಾರಿ ಕ್ರೀಡಾಕೂಟ ಆರಂಭವಾಗುವ ಮುನ್ನವೇ ಭಾರತ ತನ್ನ ಅರ್ಧದಷ್ಟು ಪದಕದ ಅವಕಾಶಗಳನ್ನು ಕಳೆದುಕೊಂಡಿತ್ತು. ಜೊತೆಗೆ, ಭಾರತದ ಸಾಂಪ್ರದಾಯಿಕ ಕ್ರೀಡೆಗಳಾದ ಶೂಟಿಂಗ್ ಮತ್ತು ಆರ್ಚರಿ ಕೂಡ ಈ ಬಾರಿ ಇರಲಿಲ್ಲ.
ಕ್ರೀಡೆಗಳ ಸಂಖ್ಯೆ ಕಡಿತಗೊಂಡಿದ್ದರಿಂದ ಸಹಜವಾಗಿಯೇ ಭಾರತೀಯ ಕ್ರೀಡಾಪಟುಗಳ ಸಂಖ್ಯೆಯೂ ಇಳಿಮುಖವಾಯಿತು. 2022ರಲ್ಲಿ ಭಾರತದಿಂದ 210 ಅಥ್ಲೀಟ್‌ಗಳು ಭಾಗವಹಿಸಿದ್ದರೆ, ಈ ಬಾರಿ ಕೇವಲ 122 ಅಥ್ಲೀಟ್‌ಗಳಷ್ಟೇ ಗ್ಲ್ಯಾಸ್ಗೋಗೆ ತೆರಳಿದ್ದರು. ಸ್ಪರ್ಧಿಸುವ ಅವಕಾಶಗಳೇ ಕಮ್ಮಿಯಾದಾಗ ಪದಕಗಳ ಸಂಖ್ಯೆ ತಗ್ಗುವುದು ಅನಿವಾರ್ಯವಾಯಿತು.
ಪದಕಗಳ ಒಟ್ಟು ಸಂಖ್ಯೆ ಕಡಿಮೆಯಾಗಿದ್ದರೂ, ಲಭ್ಯವಿದ್ದ 10 ಕ್ರೀಡೆಗಳಲ್ಲಿ ಭಾರತೀಯರು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಕಮ್ಮಿಯಾಗಿರಬಹುದು, ಆದರೆ ಕ್ರೀಡಾಪಟುಗಳ ಛಲ ಮತ್ತು ಹೋರಾಟದ ಗುಣ ಮಾತ್ರ ಕಿಂಚಿತ್ತೂ ಕಮ್ಮಿಯಾಗಿರಲಿಲ್ಲ. ಪ್ರತಿಕೂಲ ಪರಿಸ್ಥಿತಿ ಮತ್ತು ಸೀಮಿತ ಅವಕಾಶಗಳ ನಡುವೆಯೂ ಭಾರತ ತನ್ನ 4ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1
2022ರಲ್ಲಿ ಹಲವು ಪ್ರಮುಖ ಕ್ರೀಡೆಗಳ ಬೆಂಬಲದೊಂದಿಗೆ 4ನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಅತ್ಯಂತ ಕಡಿಮೆ ಕ್ರೀಡೆ ಹಾಗೂ ಸೀಮಿತ ಅಥ್ಲೀಟ್‌ಗಳಿದ್ದರೂ ಅದೇ ರ‍್ಯಾಂಕಿಂಗ್ ಉಳಿಸಿಕೊಂಡಿರುವುದು ನಿಜಕ್ಕೂ ಭಾರತೀಯ ಕ್ರೀಡಾಲೋಕದ ಸಾಧನೆಗೆ ಸಾಕ್ಷಿಯಾಗಿದೆ.