ಜಿಮ್ನಾಸ್ಟಿಕ್ಸ್ ಟೀಮ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೇರಿಕದ ಸ್ಟಾರ್ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಅವರು ಮಂಗಳವಾರದಂದು ನಾಟಕೀಯವಾಗಿ ಹಿಂದೆ ಸರಿದು ಆಶ್ಚರ್ಯ ಮೂಡಿಸಿದ್ದು ಉಳಿದ ಈವೆಂಟ್ಗಳಲ್ಲಿ ಭಾಗವಹಿಸುವುದು ಅನುಮಾನಾಸ್ಪದ ಎಂದು ಹೇಳಲಾಗುತ್ತಿದೆ. ಯುಎಸ್ ಜಿಮ್ನಾಸ್ಟ್ ಟೀಮ್ನ ಸಪೋರ್ಟ್ ಸ್ಟಾಫ್ ಮೂಲಕ ಗೊತ್ತಾಗಿರುವ ಅಂಶವೆಂದರೆ, ಆಕೆ ವೈದ್ಯಕೀಯ ಸಮಸ್ಯೆಯಿಂದಾಗಿ ಹಿಂತೆಗೆದಿದ್ದಾರೆ. ಇಂದು ನಡೆದ ಟೀಮ್ ಈವೆಂಟ್ನ ವಾಲ್ಟ್ ಸ್ಪರ್ಧೆಯಲ್ಲಿ ಕಳಾಹೀನ ಪ್ರದರ್ಶನ ನೀಡಿದ ಕೆಲವೇ ಕ್ಷಣಗಳ ನಂತರ ಅವರು ರಂಗದಿಂದ ನಿರ್ಗಮಿಸಿದರು. ಮಿಕ್ಕಿದ ಅನ್ಈವೆನ್ ಬಾರ್ಸ್, ಬೀಮ್ ಮತ್ತು ಫ್ಲೋರ್ ಈವೆಂಟ್ಗಳಿಗೆ ಅಮೇರಿಕ ಸಿಮೋನ್ ಬದಲು ಬೇರೆ ಜಿಮ್ನಾಸ್ಟ್ ಅನ್ನು ಕಣಕ್ಕಿಳಿಸಿತು.
ಯುಎಸ್ಎ ಜಿಮ್ನಾಸ್ಟಿಕ್ಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಅದರ ಪ್ರಕಾರ ಸಿಮೋನ್ ವೈದ್ಯಕೀಯ ಸಮಸ್ಯೆಯೊಂದರಿಂದ ಬಳಲುತ್ತಿದ್ದಾರೆ, ಆಕೆಯ ಆರೋಗ್ಯದ ತಪಾಸಣೆ ಪ್ರತಿದಿನ ನಡೆಸಿ ಒಲಂಪಿಕ್ ಅಭಿಯಾನದದಲ್ಲಿ ಮುಂದುವರಿಯಬಹುದೇ ಎಂಬ ನಿರ್ಧಾರ ತೆಗೆದುಕೊಳ್ಳಲಾಗುವುದು.
‘ವೈದ್ಯಕೀಯ ಕಾರಣವೊಂದರ ಹಿನ್ನೆಲೆಯಲ್ಲಿ ಸಿಮೋನ್ ಅವರು ಟೀಮ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು. ಅವರ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ನಡೆಸಲಾಗುವುದು ಮತ್ತು ಮೆಡಿಕಲ್ ಕ್ಲೀಯರನ್ಸ್ ಸಿಕ್ಕ ನಂತರವೇ ಮುಂದಿನ ಸ್ಪರ್ಧೆಗಳಲ್ಲಿ ಅವರು ಭಾಗವಹಿಸುವರು,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಪರ್ಧೆಯಿಂದ ಹಿಂದೆ ಸರಿದರೂ ಸಿಮೋನ್ ಅಂಕಣದ ಪಕ್ಕ ಕೂತು ತಮ್ಮ ಟೀಮ್ಮೇಟ್ಗಳನ್ನು ಚೀರ್ ಮಾಡುತ್ತಾ ಹುರಿದುಂಬಿಸಿದರು.
ರಿಯೋ ಒಲಂಪಿಕ್ಸ್ 2016ರಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದ ಸಿಮೋನ್ ಅವರು ಎಲ್ಲ ಈವೆಂಟ್ಗಳಲ್ಲಿ ಫೈನಲ್ಗೆ ಅರ್ಹತೆ ಪಡೆದಿದ್ದಾರಾದರೂ, ರವಿವಾರ ನಡೆದ ಪ್ರಾಥಮಿಕ ಸುತ್ತಿನ ಸ್ಪರ್ಧೆಗಳಲ್ಲಿ ಯಾರೂ ನಿರೀಕ್ಷಿಸದ ತಪ್ಪುಗಳನ್ನೆಸಗಿದರು.
ಸೋಮವಾರದಂದು ತನ್ನ ಇನ್ಸ್ಟಾಗ್ರಮ್ ಪೋಸ್ಟ್ನಲ್ಲಿ 24-ವರ್ಷ ವಯಸ್ಸಿನ ಜಿಮ್ನಾಸ್ಟ್ ರವಿವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ತಾನು ಒತ್ತಡದಲ್ಲಿದೆ ಅಂತ ಹೇಳಿಕೊಂಡಿದ್ದಾರೆ.
‘ಇಡೀ ಪ್ರಪಂಚದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದೀನಿ ಅಂತ ನನಗೆ ಒಮ್ಮೊಮ್ಮೆ ಭಾಸವಾಗುತ್ತದೆ ಇದು ಒತ್ತಡವಲ್ಲ, ಅದು ನನ್ನ ಮೇಲೆ ಪ್ರಭಾವ ಬೀರಲಾರದು ಅಂತ ನಾನು ಉದಾಸೀನ ಮಾಡಬಹುದಾದರೂ, ಕೆಲವು ಸಲ ಅದು ಬಹಳ ಕಷ್ಟವೆನಿಸುತ್ತದೆ, ಒಲಂಪಿಕ್ಸ್ ಅನ್ನೋದು ತಮಾಷೆಯಲ್ಲ.’ ಎಂದು ತಮ್ಮ ಪೋಸ್ಟ್ನಲ್ಲಿ ಸಿಮೋನ್ ಬರೆದುಕೊಂಡಿದ್ದಾರೆ.
ಆಕೆ ಟೊಕಿಯೋ ಒಲಂಪಿಕ್ಸ್ನಲ್ಲಿ ಮುಂದುವರಿಯುವುದು ಸಾಧ್ಯವಾಗದೆ ಹೋದರೆ ಅದು ಬಹಳ ಅನಿರೀಕ್ಷಿತ ಬೆಳವಣಿಗೆಯಾಗಲಿದೆ, ಯಾಕೆಂದರೆ ರಿಯೋನಂತೆ ಇಲ್ಲೂ ಆಕೆ ಪದಕಗಳ ಕೊಳ್ಳೆ ಹೊಡೆಯಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು.
ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಆಲ್-ಅರೌಂಡ್ ಪ್ರಶಸ್ತಿಯನ್ನು ಉಳಿಸಿಕೊಂಡ ಪ್ರಥಮ ಮಹಿಳೆ ಎಂಬ ಖ್ಯಾತಿ ತನ್ನದಾಗಿಸಿಕೊಳ್ಳುವತ್ತ ಆಕೆ ಸನ್ನದ್ಧರಾಗಿದ್ದರು ಮತ್ತು ಒಲಂಪಿಕ್ಸ್ನಲ್ಲಿ ಸೋವಿಯತ್ ಜಿಮ್ನಾಸ್ಟ್ ಲರೀಸಾ ಲಟೀನಿಯಾ ಅವರ 9 ಚಿನ್ನದ ಪದಕಗಳ ಸಾಧನೆಯನ್ನು ಸರಿಗಟ್ಟುವ ಉತ್ತಮ ಅವಕಾಶ ಆಕೆಗಿದೆ.
ಅಮೇರಿಕಾದ ಮಾಜಿ ಒಲಂಪಿಕ್ ಟೀಮ್ ವೈದ್ಯ ಲ್ಯಾರಿ ನಾಸ್ಸರ್ನಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವ ನೂರಾರು ಜಿಮ್ನಾಸ್ಟ್ಗಳಲ್ಲಿ ತಾನೂ ಒಬ್ಬಳೆಂದು ಒಲಂಪಿಕ್ಸ್ಕ್ಕಿಂತ ಮೊದಲು ಹೇಳಿಕೊಂಡಿದ್ದ ಸಿಮೋನ್ ಖಿನ್ನತೆ ವಿರುದ್ಧ ಹೋರಾಡುತ್ತಿರುವ ಅಂಶವನ್ನು ಹೊರಗೆಡಹಿದ್ದರು. ನಾಸರ್ಗೆ ತಾನು ಎಸಗಿದ ಕೃತ್ಯಗಳಿಗೆ ಅಜೀವ ಜೈಲುವಾಸದ ಶಿಕ್ಷೆಯಾಗಿದ್ದು ಸೆರೆಮನೆಯೊಂದರಲ್ಲಿ ಕೊಳೆಯುತ್ತಿದ್ದಾನೆ.
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಬಹು-ಭಾಗದ ಸರಣಿಯೊಂದರಲ್ಲಿ ಸಿಮೋನ್ ತಮ್ಮ ಮೊಣಕಾಲಿನ ಸಮಸ್ಯೆಯ ಬಗ್ಗೆ ಸಹ ಹೇಳಿಕೊಂಡಿದ್ದರು. ಮೇ ತಿಂಗಳು ಅವರು ಅಭ್ಯಾಸ ನಿರತರಾಗಿದ್ದ ಸಮಯದಲ್ಲಿ ಲ್ಯಾಂಡ್ ಮಾಡುವಾಗ ಎಸಗಿದ ಪ್ರಮಾದದಿಂದ ಮೊಣಕಾಲಿನ ತೊಂದರೆಗೆ ಗುರಿಯಾಗಿದ್ದರು. ಗಾಯಗೊಂಡಿರುವ ಭಾಗದಲ್ಲಿ ಹೆಚ್ಚುವರಿ ದ್ರವಾಂಶ ಸೇರಿಕೊಂಡಿದೆ ಎಂದು ಅವರು ಹೇಳಿದ್ದರು.
‘ಈ ಸಂದರ್ಭದಲ್ಲಿ ನಾವು ಬೇರೇನೂ ಮಾಡುವುದು ಸಾಧ್ಯವಿಲ್ಲ, ವಿಶ್ರಾಂತಿ ತೆಗೆದುಕೊಳ್ಳಲೂ ನಮಗೆ ಸಮಯವಿಲ್ಲ, ಗಾಯವಾಗಿರುವ ಭಾಗಕ್ಕೆ ಟೇಪ್ ಸುತ್ತಿ ಮುಂದೆ ಸಾಗಬೇಕು,’ ಎಂದು ಆಕೆ ಹೇಳಿದ್ದರು.