ಟೊಕಿಯೋ ಒಲಂಪಿಕ್ಸ್ 2020: ಕ್ರೀಡಾಕೂಟಕ್ಕೆ ಸಂಬಂಧಿಸಿದವರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಆಯೋಜಕರಲ್ಲಿ ಆತಂಕ ಹುಟ್ಟಿಸುತ್ತಿದೆ
ರೋಜರ್ ಮತ್ತು ಅವರ ಪಾರ್ಟ್ನರ್ ವೆಸ್ಲೀ ಕೂಲ್ಹಾಫ್ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಸೋಮವಾರ ಆಡಬೇಕಿತ್ತು, ಆದರೆ ಅವರಿಬ್ಬರನ್ನು ಐಸೋಲೇಷನ್ನಲ್ಲಿ ಇಡಲಾಗಿದೆ ಎಂದು ಐಟಿಎಫ್ ಹೇಳಿದೆ
ಟೊಕಿಯೋ ಒಲಂಪಿಕ್ಸ್ 2020 ಅಯೋಜಕರು ಎಷ್ಟೆಲ್ಲ ಜಾಗ್ರತೆ ವಹಿಸಿದರೂ ಒಲಂಪಿಕ್ ಗ್ರಾಮದಲ್ಲಿ ಕೋವಿಡ್ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಲೆಟೆಸ್ಟ್ ಆಗಿ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ನೆದರ್ಲ್ಯಾಂಡ್ಸ್ ಪುರುಷರ ಡಬಲ್ಸ್ ಜೋಡಿಯ ಪೈಕಿ ಒಬ್ಬ ಆಟಗಾರನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಡಬಲ್ಸ್ ಈವೆಂಟ್ನಿಂದ ಹಿಂದೆ ಸರಿದಿದೆ ಎಂದು ಅಂತರರಾಷ್ಟ್ರೀಯ ಟೆನ್ನಿಸ್ ಫೆಡರೇಶನ್ (ಐಟಿಎಫ್) ತಿಳಿಸಿದೆ. ಐಟಿಎಫ್ ಜಾರಿ ಮಾಡಿರುವ ಪ್ರಕಟಣೆಯ ಪ್ರಕಾರ ಜೀನ್ ಜೂಲಿಯನ್ ರೋಜರ್ ಸೋಂಕಿಗೀಡಾಗಿದ್ದಾರೆ.
ಟೊಕಿಯೋ ಒಲಂಪಿಕ್ಸ್ನಲ್ಲಿ ಕೋವಿಡ್ ಸೋಂಕು ತಾಕಿಸಿಕೊಂಡಿರುವ ಮೊದಲ ಟೆನಿಸ್ ಆಟಗಾರ ರೋಜರ್ ಆಗಿದ್ದಾರೆ ಮತ್ತು ನೆದರ್ಲ್ಯಾಂಡ್ಸ್ ಕಂಟಿಂಜೆಂಟ್ನಲ್ಲಿ ಪಿಡುಗಿಗೆ ಈಡಾಗಿರುವ ಆರನೇ ಅಥ್ಲೀಟ್ ಆಗಿದ್ದಾರೆ. ಅವರಲ್ಲಿ ಒಬ್ಬ ಸ್ಕೇಟ್ಬೋರ್ಡರ್, ಒಬ್ಬ ಟೇಕ್ವಾಂಡೊ ಆಟಗಾರ, ಒಬ್ಬ ರೋವರ್ ಮತ್ತು ರೋವಿಂಗ್ ಟೀಮಿನ ಇಬ್ಬರು ಸಪೋರ್ಟ್ ಸ್ಟಾಫ್ನವರು ಸೇರಿದ್ದಾರೆ.
ರೋಜರ್ ಮತ್ತು ಅವರ ಪಾರ್ಟ್ನರ್ ವೆಸ್ಲೀ ಕೂಲ್ಹಾಫ್ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಸೋಮವಾರ ಆಡಬೇಕಿತ್ತು, ಆದರೆ ಅವರಿಬ್ಬರನ್ನು ಐಸೋಲೇಷನ್ನಲ್ಲಿ ಇಡಲಾಗಿದೆ ಎಂದು ಐಟಿಎಫ್ ಹೇಳಿದೆ.
ಅವರ ಎದುರಾಳಿಗಳಾಗಿದ್ದ ನ್ಯೂಜಿಲೆಂಡ್ ಜೋಡಿ ಮಾರ್ಕಸ್ ಡ್ಯಾನೀಲ್ ಮತ್ತು ಮೈಕೆಲ್ ವಿನಸ್ ಅವರಿಗೆ ವಾಕ್ ಓವರ್ ಸಿಕ್ಕಿದ್ದು ಅವರು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ
ಅಂದಹಾಗೆ, ಟೊಕಿಯೋ ಒಲಂಪಿಕ್ಸ್ 2020ಗೆ ಸಂಬಂಧಿಸಿದಂತೆ ಕೋವಿಡ್ ಸೋಂಕಿತರ ಸಂಖ್ಯೆ 148 ಏರಿದೆ. ಸೋಮವಾರದಂದೇ ಮೂರು ಅಥ್ಲೀಟ್ಗಳೂ ಸೇರಿದಂತೆ 16 ಹೊಸ ಸೋಂಕಿನ ಪ್ರಕರಣಳು ಬೆಳಕಿಗೆ ಬಂದಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಅವರು ನೀಡಿರುವ ಮಾಹಿತ ಪ್ರಕಾರ ಸೋಮವಾರ, ಮೂರು ಅಥ್ಲೀಟ್ಗಳು, ನಾಲ್ವರು ಗುತ್ತಿಗೆದಾರರು, ಮತ್ತು ಕ್ರೀಡಾಕೂಟಕ್ಕೆ ಸಂಬಂಧಿಸಿದ ಎಂಟು ಸಿಬ್ಬಂದಿ ವರ್ಗದವರು ಸೋಂಕಿಗೆ ಒಳಗಾಗಿದ್ದಾರೆ. ಒಂದು ಸಮಾಧಾನಕರ ಸಂಗತಿಯೆಂದರೆ, ಸೋಂಕಿಗೊಳಗಾಗಿರುವ ಅಥ್ಲೀಟ್ಗಳು ಒಲಂಪಿಕ್ ಗ್ರಾಮದಲ್ಲಿ ವಾಸವಾಗಿಲ್ಲ. ಕ್ರೀಡಾಕೂಟ ಅರಂಭವಾದಾಗಿನಿಂದ ಒಲಂಪಿಕ್ ಗ್ರಾಮದಲ್ಲಿ 16 ಪ್ರಕರಣಗಳು ಪತ್ತೆಯಾಗಿವೆ,
ಕ್ರೀಡಾಕೂಟಕ್ಕೆ ಸಂಬಂಧಿಸಿದ ಒಬ್ಬ ಸಿಬ್ಬಂದಿ ಮತ್ತೊಬ್ಬ ಗುತ್ತಿಗೆದಾರ ಜಪಾನಿನವರಾಗಿದ್ದು ಸಿಬ್ಬಂದಿ ವರ್ಗಕ್ಕೆ ಹೊಸದಾಗಿ ಸೇರಿಸಲಾಗಿತ್ತು ಅಂತ ಆಯೋಜಕರು ಹೇಳಿದ್ದಾರೆ. ಮೂವರು ಅಥ್ಲೀಟ್ ಮತ್ತು ಕ್ರೀಡಾಕೂಟಕ್ಕೆ ಸಂಬಂಧಿಸಿದ ಏಳು ಸಿಬ್ಬಂದಿ ವರ್ಗದವರನ್ನು 14-ದಿನಗಳ ಕಡ್ಡಾಯ ಕ್ವಾರಂಟೀನ್ಗೆ ಒಳಪಡಿಸಲಾಗಿದೆ.
ಹೊಸ 8 ಪ್ರಕರಣಗಳ ಸೇರ್ಪಡೆಯಿಂದ ಕೋವಿಡ್ ಸೋಂಕಿಗೆ ಒಳಗಾಗಿರುವ ಕ್ರೀಡಾಕೂಟಕ್ಕೆ ಸಂಬಂಧಿಸಿದ ಸಿಬ್ಬಂದಿಯವರ ಸಂಖ್ಯೆ 83 ಕ್ಕೇರಿದೆ.
ಜೆಕ್ ರಿಪಬ್ಲಿಕ್, ಚಿಲಿ, ದಕ್ಷಿಣ ಆಫ್ರಿಕ, ಮತ್ತು ನೆದರ್ಲ್ಯಾಂಡ್ಸ್ ಮತ್ತು ಇನ್ನಿತರ ಕಂಟಿಂಜೆಂಟ್ಗಳ ಅಥ್ಲೀಟ್ಗಳು ಸೋಂಕು ತಾಕಿಸಿಕೊಂಡಿರುವರೆಂದು ಆಯೋಜಕರು ಹೇಳಿದ್ದಾರೆ. ತನ್ನ ಕಂಟಿಂಜೆಂಟ್ನ ನಾಲ್ವರು ಅಥ್ಲೀಟ್ಗಳು ಸೋಂಕಿಗೀಡಾಗಿರುವುದು ಪತ್ತೆಯಾದ ನಂತರ ಜೆಕ್ ರಿಪಬ್ಲಿಕ್, ಕೋವಿಡ್ಗೆ ಸುರಕ್ಷೆಗೆ ಸಂಬಂಧಿಸಿದ ನಿಯಮಾವಳಿಗಳು ಪಾಲನೆ ಆಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಅಥ್ಲೀಟ್ಗಳು ಸೋಂಕಿತರಾಗಿರುವುದು ಗೊತ್ತಾದ ಮೇಲೆ ಅದು ಬೀಚ್ ವಾಲಿಬಾಲ್ ಮತ್ತು ಸೈಕ್ಲಿಂಗ್ ಈವೆಂಟ್ಗಳಿಂದ ಸರಿದಿದೆ.
ಟೊಕಿಯೋ ಒಲಂಪಿಕ್ಸ್ 2020 ಕವರ್ ಮಾಡುತ್ತಿರುವ ಮಾಧ್ಯಮದವರಿಗೆ ಕೊವಿಡ್ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿರುವ ಆಯೋಜಕರು, ನಿಯಮಗಳಿಗೆ ಬದ್ಧರಾಗದ ಘಟನೆಗಳು ಜರುಗುತ್ತಿವೆ ಎಂದು ಹೇಳಿದ್ದಾರೆ. ನಿಯಮಾವಳಿಯನ್ನು ಉಲ್ಲಂಘಿಸುವ ಮಾಧ್ಯಮದವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Tokyo Olympics 2020: ಒಲಂಪಿಕ್ ಗ್ರಾಮದಲ್ಲಿ ಹರಿದಾಡುತ್ತಿರುವ ಸುದ್ದಿ; ಮೀರಾಬಾಯಿಗೆ ಬೆಳ್ಳಿ ಬದಲು ಚಿನ್ನದ ಪದಕ ಸಿಗಲಿದೆ!