ಟೊಕಿಯೋ ಒಲಂಪಿಕ್ಸ್ 2020: ಕ್ವಾರ್ಟರ್ ಫೈನಲ್ ಹಂತ ತಲುಪಬೇಕಾದರೆ ಮಂಗಳವಾರ ಸ್ಪೇನನ್ನು ಭಾರತ ಮಣಿಸಲೇಬೇಕು.
ಭಾರತ ತಂಡದ ಭಾಗವಾಗಿರುವ ಹರ್ಮನ್ಪ್ರೀತ್ ಸಿಂಗ್, ರೂಪಿಂದರ್ ಸಿಂಗ್ ಪಾಲ್ ಮತ್ತು ಅಮಿತ್ ರೋಹಿದಾಸ್ ವಿಶ್ವದರ್ಜೆಯ ಡ್ರ್ಯಾಗ್ ಫ್ಲಿಕ್ಕರ್ಗಳೆಂದು ಹೆಸರು ಮಾಡಿದ್ದರೂ, ರವಿವಾರದಂದು ಭಾರತಕ್ಕೆ ದೊರೆತ 6 ಪೆನಾಲ್ಟಿ ಕಾರ್ನರ್ಗಳಲ್ಲೀ ಒಂದನ್ನೂ ಗೋಲಾಗಿ ಪರಿವರ್ತಿಸಲಿಲ್ಲ.
ಆಸ್ಟ್ರೇಲಿಯಾ ವಿರುದ್ಧ ದಯನೀಯ ಸೋಲು ಅನುಭವಿಸಿದ ಭಾರತದ ಪುರುಷರ ಹಾಕಿ ತಂಡ ಈ ಆಘಾತದಿಂದ ಚೇತರಿಸಿಕೊಂಡು ಮುಂದಿನ ಪಂದ್ಯಗಳಿಗೆ ಮಾನಸಿಕ ಸ್ಥೈರ್ಯ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕಾದರೆ ನಾಳೆ (ಮಂಗಳವಾರ) ನಡೆಯುವ ಗ್ರೂಪ್ ಎ ಪಂದ್ಯದಲ್ಲಿ ಸ್ಪೇನ್ ಅನ್ನು ಸೋಲಿಸಲೇಬೇಕಿದೆ. ನ್ಯೂಜಿಲೆಂಡ್ ವಿರುದ್ಧ 3-2 ಅಂತರದ ಪ್ರಯಾಸಕರ ಗೆಲುವು ದಾಖಲಿಸಿದ್ದ ಮನ್ಪ್ರೀತ್ ಸಿಂಗ್ ಪಡೆ ಎರಡನೇ ಪಂದ್ಯದಲ್ಲಿ ಆಸ್ಸೀಗಳ ವಿರುದ್ಧ 1-7 ಅಂತರದ ಹೀನಾಯ ಸೋಲು ಅನುಭವಿಸಿತ್ತು. ಭಾರತೀಯ ಪಡೆಯ ರಕ್ಷಣೆಯನ್ನು ಅನಾಯಾಸದಿಂದ ಪದೇಪದೆ ಬೇಧಿಸಿದ ಕಾಂಗರೂಗಳು ಗೋಲುಗಳ ಸುರಿಮಳೆಗೈದರು. ಆಸ್ಟ್ರೇಲಿಯಾದ ಗ್ರಹಾಂ ರೀಡ್ ಅವರು 2019ರಲ್ಲಿ ಭಾರತ ಹಾಕಿ ಟೀಮಿನ ಕೋಚ್ ಅಗಿ ನೇಮಕಗೊಂಡ ನಂತರ ಭಾರತ ಅನುಭವಿಸಿರುವ ಅತಿದೊಡ್ಡ ಸೋಲು ಇದಾಗಿದೆ.
ಭಾರತದ ವಿರುದ್ಧ ಆಟ ಆರಂಭಗೊಳ್ಳುತ್ತಿದ್ದಂತೆಯೇ ಆಕ್ರಮಣಕಾರಿ ಆಟಕ್ಕಿಳಿದ ಆಸ್ಸೀಗಳು ಮೊದಲಾರ್ಧದಲ್ಲಿ 4 ಮತ್ತು ದ್ವಿತೀಯಾರ್ಧದಲ್ಲಿ 3 ಗೋಲು ಬಾರಿಸಿದರು. ಅವರ ನಿರಂತರ ಆಕ್ರಮಣದಿಂದ ಕಂಗೆಟ್ಟ ಭಾರತೀಯರು ತಾವು ಆಕ್ರಮಣ ನಡೆಸಬೇಕೆನ್ನುವ ಅಂಶವನ್ನೇ ಮರೆತರಂತೆ ಆಡಿದರು. ಆದರೆ ಗಮನಿಸಬೇಕಿರುವ ಸಂಗತಿಯೆಂದರೆ, ಕಳಪೆ ಪ್ರದರ್ಶನಗಳ ನಂತರ ಚೇತರಿಸಿಕೊಂಡು ಸಾಂಘಿಕ ಹೋರಾಟ ನಡೆಸುವ ಪ್ರವೃತ್ತಿ ಭಾರತೀಯರಲ್ಲಿದೆ. ಮಂಗಳವಾರ ವಿಶ್ವದ 9ನೇ ಕ್ರಮಾಂಕದ ಸ್ಪೇನ್ ವಿರುದ್ಧ ಆಡುವಾಗ ಭಾರತ ಈ ದೋರಣೆಯನ್ನು ಪ್ರದರ್ಶಿಸುವ ವಿಶ್ವಾಸವನ್ನು ಕೋಚ್ ಗ್ರಹಾಂ ರೀಡ್ ಹೊಂದಿದ್ದಾರೆ.
ಅಂಕಗಳ ವಿಷಯಕ್ಕೆ ಬಂದರೆ, ಗ್ರೂಪ್ ಎ ನಲ್ಲಿ ಭಾರತ 4 ನೇ ಸ್ಥಾನದಲ್ಲಿದೆ. ಭಾರತದ ವಿರುದ್ಧ ಸೋತ ನ್ಯೂಜಿಲೆಂಡ್ ಒಂದು ಸ್ಥಾನ ಮೇಲಿದೆ. ಈ ಗುಂಪಿನಲ್ಲಿ ಆಡಿರುವ 2 ಪಂದ್ಯಗಳಿಂದ 4 ಅಂಕ ಸಂಪಾದಿಸಿರುವ ಆಸ್ಟ್ರೇಲಿಯ ಅಗ್ರಸ್ಥಾನದಲ್ಲಿದೆ. ಕಳೆದ ಬಾರಿಯ ಚಾಂಪಿಯನ್ಸ್ ಅರ್ಜೆಂಟೀನಾ ಸಹ ಆಡಿರುವ 2 ಪಂದ್ಯಗಳಲ್ಲಿ ಜಯ ಗಳಿಸಿದೆಯಾದರೂ, ಆಸ್ಟ್ರೇಲಿಯಕ್ಕಿಂತ ಕಡಿಮೆ ಗೋಲು ಬಾರಿಸಿರುವುದರಿಂದ ಎರಡನೇ ಸ್ಥಾನದಲ್ಲಿದೆ.
ಸ್ಪೇನ್ ಮತ್ತು ಅತಿಥೇಯ ರಾಷ್ಟ್ರ ಜಪಾನ್ ಸಹ ಎರಡೆರಡು ಪಂದ್ಯಗಳನ್ನಾಡಿವೆಯಾದರೂ ಗೆಲುವು ದಾಖಲಿಸದ ಕಾರಣ ಅಂಕಗಳ ಖಾತೆ ಆರಂಭಿಸಿಲ್ಲ. ಎ ಮತ್ತು ಬಿ ಗುಂಪಿನಲ್ಲಿ ತಲಾ 6 ಟೀಮುಗಳಿದ್ದು ಮೊದಲ 4 ಸ್ಥಾನ ಪಡೆಯುವ ಟೀಮ್ಗಳು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಲಿವೆ.
ಭಾರತ ತಂಡದ ಭಾಗವಾಗಿರುವ ಹರ್ಮನ್ಪ್ರೀತ್ ಸಿಂಗ್, ರೂಪಿಂದರ್ ಸಿಂಗ್ ಪಾಲ್ ಮತ್ತು ಅಮಿತ್ ರೋಹಿದಾಸ್ ವಿಶ್ವದರ್ಜೆಯ ಡ್ರ್ಯಾಗ್ ಫ್ಲಿಕ್ಕರ್ಗಳೆಂದು ಹೆಸರು ಮಾಡಿದ್ದರೂ, ರವಿವಾರದಂದು ಭಾರತಕ್ಕೆ ದೊರೆತ 6 ಪೆನಾಲ್ಟಿ ಕಾರ್ನರ್ಗಳಲ್ಲೀ ಒಂದನ್ನೂ ಗೋಲಾಗಿ ಪರಿವರ್ತಿಸಲಿಲ್ಲ.
ಫಾರ್ವರ್ಡ್ ಲೈನ್ನಲ್ಲಿ ಅಡುವ ಮಂದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಉಪಾಧ್ಯಾಯ ಮತ್ತು ದಿಲ್ಪ್ರೀತ್ ಸಿಂಗ್ ಸಹ ಸಹ ರವಿವಾರದ ಪಂದ್ಯದಲ್ಲಿ ಕಾಲುಗಳು ಜೋಮು ಹಿಡಿದವರಂತೆ ಆಡಿದರು. ಮಿಡ್ಫೀಲ್ಡ್ನಲ್ಲಿ ಸದಾ ಮಿಂಚುವ ನಾಯಕ ಮನ್ಪ್ರೀತ್ ಸಿಂಗ್ ಅವರು ಕೇವಲ ತೇಪೆಗಳಲ್ಲಿ ಉತ್ಕೃಷ್ಟತೆ ಮೆರೆದರು. ಆಸ್ಟ್ರೇಲಿಯನ್ನರ ಅಕ್ರಮಣಕಾರಿ ಆಟ, ಭಾರತದ ಬ್ಯಾಕ್ಲೈನ್ ಅನ್ನು ಅಕ್ಷರಶಃ ಛಿದ್ರಗೊಳಿಸಿತು.
ಗೋಲ್ ಕೀಪರ್ ಪಿಆರ್ ರಾಜೇಶ್ ಟೀಮಿನ ಅತ್ಯಂತ ಅನುಭವಿ ಆಟಗಾರ. ಭಾರತಕ್ಕೆ ಹಲವಾರ ವರ್ಷಗಳಿಂದ ಸೇವೆ ಒದಗಿಸುತ್ತಾ ಬಂದಿರುವ ರಾಜೇಶ್ ಸಹ ಆಸ್ಸೀಗಳ ಆರ್ಭಟದೆದುರು ಕೈ ಚೆಲ್ಲಿದರು.