Tokyo Olympics: ಹಾಕಿಯಲ್ಲಿ ಭಾರತ ಪುರುಷರ ತಂಡಕ್ಕೆ ರೋಚಕ ಜಯ: ಕ್ವಾರ್ಟರ್ ಫೈನಲ್ಗೆ ಮನ್ಪ್ರೀತ್ ಪಡೆ
India vs Argentina Hockey: 2016ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟಿನಾವನ್ನು ಮನ್ಪ್ರೀತ್ ಸಿಂಗ್ ಪಡೆ 3-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
ಟೋಕಿಯೋ ಒಲಿಂಪಿಕ್ಸ್ನ ಏಳನೇ ದಿನ ಭಾರತ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಈಗಾಗಲೇ ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಅವರು ಗೆದ್ದು ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಇದರ ಬೆನ್ನಲ್ಲೇ ಸದ್ಯ ಭಾರತದ ಪುರುಷರ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ರೋಚಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.
2016ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟಿನಾವನ್ನು ಮನ್ಪ್ರೀತ್ ಸಿಂಗ್ ಪಡೆ 3-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ಪರುಷರ ಹಾಕಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತ ಕ್ವಾರ್ಟರ್ ಫೈನಲ್ನಲ್ಲಿ ಜುಲೈ 30 ರಂದು ಜಪಾನ್ ವಿರುದ್ಧ ಸೆಣೆಸಾಡಲಿದೆ.
ಈ ಪಂದ್ಯದ ಮೊದಲೆರಡು ಕ್ವಾರ್ಟರ್‌ನಲ್ಲಿ ಇತ್ತಂಡಗಳು ಯಾವುದೇ ಗೋಲ್ ಬಾರಿಸದೆ ತೀವ್ರ ಪೈಪೋಟಿ ನಡೆಸುತ್ತಿದ್ದವು. ಮೂರನೇ ಕ್ವಾರ್ಟರ್‌ನ ಕೊನೆಯ ಹಂತದಲ್ಲಿ ಭಾರತದ ಪರ ವರುಣ್ ಕುಮಾರ್ ಮೊದಲನೆಯ ಗೋಲನ್ನು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ನಾಲ್ಕನೇ ಕ್ವಾರ್ಟರ್ ಶುರುವಾದ ಕೂಡಲೇ ಅರ್ಜೆಂಟಿನಾದ ಮಿಯಾಕೋ ತಮ್ಮ ತಂಡದ ಪರ ಮೊದಲ ಗೋಲು ಸಿಡಿಸಿದರು. ಹೀಗೆ ಭಾರತ ಮತ್ತು ಅರ್ಜೆಂಟಿನಾ ತಂಡಗಳೆರಡೂ ತಲಾ ಒಂದೊಂದು ಗೋಲು ಬಾರಿಸಿ ನಾಲ್ಕನೇ ಕ್ವಾರ್ಟರ್‌ನ ಕೊನೆಯ ಹಂತದವರೆಗೂ ತೀವ್ರ ಜಿದ್ದಾಜಿದ್ದಿ ನಡೆಸಿದವು. ಕೊನೆ ಹಂತದಲ್ಲಿ ವಿವೇಕ್ ಸಾಗರ್ ಮತ್ತು ಹರ್ಮನ್ ಪ್ರೀತ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವುದರ ಮೂಲಕ ಭಾರತಕ್ಕೆ 3-1 ಅಂತರದ ಜಯ ಸಾಧಿಸಲು ಸಾಧ್ಯವಾಯಿತು.
ಇನ್ನೂ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ಟ್ ವಿರುದ್ಧ ರೌಂಡ್ 16 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು. ಮಿಯಾ ವಿರುದ್ಧ 21-15, 21-13 ಅಂಕಗಳ ಅಂತರದಲ್ಲಿ ಸಿಂಧೂ ಅವರು ಮೇಲುಗೈ ಸಾಧಿಸಿದರು. ಸುಮಾರು 40 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಸಿಂಧೂ ಮೊದಲ ಸೆಟ್ ನಲ್ಲಿ 21-15ರಲ್ಲಿ ಮುನ್ನಡೆ ಸಾಧಿಸಿದರು. ಬಳಿಕ 2ನೇ ಸೆಟ್ ನಲ್ಲಿ ಮಿಯಾ ಕೊಂಚ ವಿರೋಧ ತೋರಿದರಾದೂ 2ನೇ ಸೆಟ್ ಅನ್ನೂ ಕೂಡ ಸಿಂಧು 21-13 ಅಂತರದಲ್ಲಿ ತಮ್ಮದಾಗಿಸಿಕೊಂಡು ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು
ಇತ್ತ ರೋಯಿಂಗ್ ವಿಭಾಗದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಅರ್ಜುನ್ ಮತ್ತು ಅರವಿಂದ್ ಜೋಡಿಯ ಭಾರತದ ರೋಯಿಂಗ್ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ. ಭಾರತಕ್ಕೆ ಇಲ್ಲಿ ಪದಕ ಗೆಲ್ಲುವ ಅವಕಾಶ ಕೈತಪ್ಪಿತಾದರೂ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮುಟ್ಟದಂತಹ ಸ್ಥಾನವನ್ನು ಅರ್ಜುನ್ ಮತ್ತು ಅರವಿಂದ್ ಜೋಡಿ ಮುಟ್ಟಿ ನೂತನ ದಾಖಲೆ ಬರೆದರು.
Published On - 7:47 am, Thu, 29 July 21