ಟೊಕಿಯೋ ಒಲಂಪಿಕ್ಸ್ 2020: ಕ್ರೀಡಾಕೂಟಕ್ಕೆ ಸಂಬಂಧಿಸಿದವರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಆಯೋಜಕರಲ್ಲಿ ಆತಂಕ ಹುಟ್ಟಿಸುತ್ತಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2021 | 9:35 PM

ರೋಜರ್ ಮತ್ತು ಅವರ ಪಾರ್ಟ್​ನರ್ ವೆಸ್ಲೀ ಕೂಲ್ಹಾಫ್ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಸೋಮವಾರ ಆಡಬೇಕಿತ್ತು, ಆದರೆ ಅವರಿಬ್ಬರನ್ನು ಐಸೋಲೇಷನ್​ನಲ್ಲಿ ಇಡಲಾಗಿದೆ ಎಂದು ಐಟಿಎಫ್ ಹೇಳಿದೆ

ಟೊಕಿಯೋ ಒಲಂಪಿಕ್ಸ್ 2020: ಕ್ರೀಡಾಕೂಟಕ್ಕೆ ಸಂಬಂಧಿಸಿದವರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಆಯೋಜಕರಲ್ಲಿ ಆತಂಕ ಹುಟ್ಟಿಸುತ್ತಿದೆ
ಡಚ್​ ಟೆನಿಸ್ ಆಟಗಾರ ಜೀನ್ ಜೂಲಿಯನ್ ರೋಜರ್
Follow us on

ಟೊಕಿಯೋ ಒಲಂಪಿಕ್ಸ್ 2020 ಅಯೋಜಕರು ಎಷ್ಟೆಲ್ಲ ಜಾಗ್ರತೆ ವಹಿಸಿದರೂ ಒಲಂಪಿಕ್ ಗ್ರಾಮದಲ್ಲಿ ಕೋವಿಡ್ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಲೆಟೆಸ್ಟ್​ ಆಗಿ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ನೆದರ್​ಲ್ಯಾಂಡ್ಸ್ ಪುರುಷರ ಡಬಲ್ಸ್ ಜೋಡಿಯ ಪೈಕಿ ಒಬ್ಬ ಆಟಗಾರನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಡಬಲ್ಸ್ ಈವೆಂಟ್​ನಿಂದ ಹಿಂದೆ ಸರಿದಿದೆ ಎಂದು ಅಂತರರಾಷ್ಟ್ರೀಯ ಟೆನ್ನಿಸ್ ಫೆಡರೇಶನ್ (ಐಟಿಎಫ್) ತಿಳಿಸಿದೆ. ಐಟಿಎಫ್ ಜಾರಿ ಮಾಡಿರುವ ಪ್ರಕಟಣೆಯ ಪ್ರಕಾರ ಜೀನ್ ಜೂಲಿಯನ್ ರೋಜರ್ ಸೋಂಕಿಗೀಡಾಗಿದ್ದಾರೆ.

ಟೊಕಿಯೋ ಒಲಂಪಿಕ್ಸ್​ನಲ್ಲಿ ಕೋವಿಡ್​ ಸೋಂಕು ತಾಕಿಸಿಕೊಂಡಿರುವ ಮೊದಲ ಟೆನಿಸ್ ಆಟಗಾರ ರೋಜರ್ ಆಗಿದ್ದಾರೆ ಮತ್ತು ನೆದರ್​ಲ್ಯಾಂಡ್ಸ್ ಕಂಟಿಂಜೆಂಟ್​ನಲ್ಲಿ ಪಿಡುಗಿಗೆ ಈಡಾಗಿರುವ ಆರನೇ ಅಥ್ಲೀಟ್​ ಆಗಿದ್ದಾರೆ. ಅವರಲ್ಲಿ ಒಬ್ಬ ಸ್ಕೇಟ್​ಬೋರ್ಡರ್, ಒಬ್ಬ ಟೇಕ್ವಾಂಡೊ ಆಟಗಾರ, ಒಬ್ಬ ರೋವರ್ ಮತ್ತು ರೋವಿಂಗ್ ಟೀಮಿನ ಇಬ್ಬರು ಸಪೋರ್ಟ್ ಸ್ಟಾಫ್​ನವರು ಸೇರಿದ್ದಾರೆ.

ರೋಜರ್ ಮತ್ತು ಅವರ ಪಾರ್ಟ್​ನರ್ ವೆಸ್ಲೀ ಕೂಲ್ಹಾಫ್ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಸೋಮವಾರ ಆಡಬೇಕಿತ್ತು, ಆದರೆ ಅವರಿಬ್ಬರನ್ನು ಐಸೋಲೇಷನ್​ನಲ್ಲಿ ಇಡಲಾಗಿದೆ ಎಂದು ಐಟಿಎಫ್ ಹೇಳಿದೆ.

ಅವರ ಎದುರಾಳಿಗಳಾಗಿದ್ದ ನ್ಯೂಜಿಲೆಂಡ್​ ಜೋಡಿ ಮಾರ್ಕಸ್ ಡ್ಯಾನೀಲ್ ಮತ್ತು ಮೈಕೆಲ್ ವಿನಸ್ ಅವರಿಗೆ ವಾಕ್ ಓವರ್ ಸಿಕ್ಕಿದ್ದು ಅವರು ಕ್ವಾರ್ಟರ್​ ಫೈನಲ್ ಹಂತ ಪ್ರವೇಶಿಸಿದ್ದಾರೆ

ಅಂದಹಾಗೆ, ಟೊಕಿಯೋ ಒಲಂಪಿಕ್ಸ್ 2020ಗೆ ಸಂಬಂಧಿಸಿದಂತೆ ಕೋವಿಡ್​ ಸೋಂಕಿತರ ಸಂಖ್ಯೆ 148 ಏರಿದೆ. ಸೋಮವಾರದಂದೇ ಮೂರು ಅಥ್ಲೀಟ್​ಗಳೂ ಸೇರಿದಂತೆ 16 ಹೊಸ ಸೋಂಕಿನ ಪ್ರಕರಣಳು ಬೆಳಕಿಗೆ ಬಂದಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಅವರು ನೀಡಿರುವ ಮಾಹಿತ ಪ್ರಕಾರ ಸೋಮವಾರ, ಮೂರು ಅಥ್ಲೀಟ್​ಗಳು, ನಾಲ್ವರು ಗುತ್ತಿಗೆದಾರರು, ಮತ್ತು ಕ್ರೀಡಾಕೂಟಕ್ಕೆ ಸಂಬಂಧಿಸಿದ ಎಂಟು ಸಿಬ್ಬಂದಿ ವರ್ಗದವರು ಸೋಂಕಿಗೆ ಒಳಗಾಗಿದ್ದಾರೆ. ಒಂದು ಸಮಾಧಾನಕರ ಸಂಗತಿಯೆಂದರೆ, ಸೋಂಕಿಗೊಳಗಾಗಿರುವ ಅಥ್ಲೀಟ್​ಗಳು ಒಲಂಪಿಕ್ ಗ್ರಾಮದಲ್ಲಿ ವಾಸವಾಗಿಲ್ಲ. ಕ್ರೀಡಾಕೂಟ ಅರಂಭವಾದಾಗಿನಿಂದ ಒಲಂಪಿಕ್ ಗ್ರಾಮದಲ್ಲಿ 16 ಪ್ರಕರಣಗಳು ಪತ್ತೆಯಾಗಿವೆ,

ಕ್ರೀಡಾಕೂಟಕ್ಕೆ ಸಂಬಂಧಿಸಿದ ಒಬ್ಬ ಸಿಬ್ಬಂದಿ ಮತ್ತೊಬ್ಬ ಗುತ್ತಿಗೆದಾರ ಜಪಾನಿನವರಾಗಿದ್ದು ಸಿಬ್ಬಂದಿ ವರ್ಗಕ್ಕೆ ಹೊಸದಾಗಿ ಸೇರಿಸಲಾಗಿತ್ತು ಅಂತ ಆಯೋಜಕರು ಹೇಳಿದ್ದಾರೆ. ಮೂವರು ಅಥ್ಲೀಟ್​ ಮತ್ತು ಕ್ರೀಡಾಕೂಟಕ್ಕೆ ಸಂಬಂಧಿಸಿದ ಏಳು ಸಿಬ್ಬಂದಿ ವರ್ಗದವರನ್ನು 14-ದಿನಗಳ ಕಡ್ಡಾಯ ಕ್ವಾರಂಟೀನ್​ಗೆ ಒಳಪಡಿಸಲಾಗಿದೆ.

ಹೊಸ 8 ಪ್ರಕರಣಗಳ ಸೇರ್ಪಡೆಯಿಂದ ಕೋವಿಡ್ ಸೋಂಕಿಗೆ ಒಳಗಾಗಿರುವ ಕ್ರೀಡಾಕೂಟಕ್ಕೆ ಸಂಬಂಧಿಸಿದ ಸಿಬ್ಬಂದಿಯವರ ಸಂಖ್ಯೆ 83 ಕ್ಕೇರಿದೆ.

ಜೆಕ್ ರಿಪಬ್ಲಿಕ್, ಚಿಲಿ, ದಕ್ಷಿಣ ಆಫ್ರಿಕ, ಮತ್ತು ನೆದರ್​ಲ್ಯಾಂಡ್ಸ್ ಮತ್ತು ಇನ್ನಿತರ ಕಂಟಿಂಜೆಂಟ್​ಗಳ ಅಥ್ಲೀಟ್​ಗಳು ಸೋಂಕು ತಾಕಿಸಿಕೊಂಡಿರುವರೆಂದು ಆಯೋಜಕರು ಹೇಳಿದ್ದಾರೆ. ತನ್ನ ಕಂಟಿಂಜೆಂಟ್​ನ ನಾಲ್ವರು ಅಥ್ಲೀಟ್​ಗಳು ಸೋಂಕಿಗೀಡಾಗಿರುವುದು ಪತ್ತೆಯಾದ ನಂತರ ಜೆಕ್ ರಿಪಬ್ಲಿಕ್, ಕೋವಿಡ್​ಗೆ ಸುರಕ್ಷೆಗೆ ಸಂಬಂಧಿಸಿದ ನಿಯಮಾವಳಿಗಳು ಪಾಲನೆ ಆಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಅಥ್ಲೀಟ್​ಗಳು ಸೋಂಕಿತರಾಗಿರುವುದು ಗೊತ್ತಾದ ಮೇಲೆ ಅದು ಬೀಚ್ ವಾಲಿಬಾಲ್ ಮತ್ತು ಸೈಕ್ಲಿಂಗ್ ಈವೆಂಟ್​ಗಳಿಂದ ಸರಿದಿದೆ.

ಟೊಕಿಯೋ ಒಲಂಪಿಕ್ಸ್ 2020 ಕವರ್​ ಮಾಡುತ್ತಿರುವ ಮಾಧ್ಯಮದವರಿಗೆ ಕೊವಿಡ್​​ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿರುವ ಆಯೋಜಕರು, ನಿಯಮಗಳಿಗೆ ಬದ್ಧರಾಗದ ಘಟನೆಗಳು ಜರುಗುತ್ತಿವೆ ಎಂದು ಹೇಳಿದ್ದಾರೆ. ನಿಯಮಾವಳಿಯನ್ನು ಉಲ್ಲಂಘಿಸುವ ಮಾಧ್ಯಮದವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Tokyo Olympics 2020: ಒಲಂಪಿಕ್ ಗ್ರಾಮದಲ್ಲಿ ಹರಿದಾಡುತ್ತಿರುವ ಸುದ್ದಿ; ಮೀರಾಬಾಯಿಗೆ ಬೆಳ್ಳಿ ಬದಲು ಚಿನ್ನದ ಪದಕ ಸಿಗಲಿದೆ!