
2026ರ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ, ರೊನಾಲ್ಡೊಗೆ ನಿವೃತ್ತಿ ಮತ್ತು ಫಾರ್ಮ್ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಕ್ರಿಸ್ಟಿಯಾನೊ ಖಡಕ್ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
ಪೋರ್ಚುಗಲ್ ತಂಡದ ಆರಂಭಿಕ ಆಟಗಾರರ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವ ಕುರಿತು ಕೇಳಿಬರುತ್ತಿರುವ ನಿರಂತರ ಟೀಕೆಗಳು ಮತ್ತು ಸಂಶಯಗಳನ್ನು ನೀವು ಹೇಗೆ ಎದುರಿಸುತ್ತೀರಿ? ಎಂದು ಕೇಳಲಾಗಿತ್ತು.
ಇಈ ಪ್ರಶ್ನೆಗೆ ಕುಪಿತಗೊಂಡ ಕ್ರಿಸ್ಟಿಯಾನೊ ರೊನಾಲ್ಡೊ, ನೀವು ಕಳೆದ 23 ವರ್ಷಗಳಿಂದ ನನ್ನನ್ನು ಮುಗಿಸಲು (ಆಟದ ವೃತ್ತಿಜೀವನವನ್ನು ಅಂತ್ಯಗೊಳಿಸಲು) ಪ್ರಯತ್ನಿಸುತ್ತಿದ್ದೀರಿ. ಆದರೆ ಅದು ವ್ಯರ್ಥ ಹಾಗೂ ಸಮಯದ ಪೋಲು ಎಂಬುದು ಈಗ ನಿಮಗೇ ಅರ್ಥವಾಗಿರಬೇಕು ಎಂದು ಗುಡುಗಿದ್ದಾರೆ.
41ನೇ ವಯಸ್ಸಿನಲ್ಲಿ ವಿಶ್ವಕಪ್ ಆಡುವುದು, ಇದರಲ್ಲಿ ನಿಮಗೆ ಎದುರಾಗುವ ಅತ್ಯಂತ ಕಠಿಣವಾದ ಸವಾಲು ಅಥವಾ ಕಷ್ಟದ ವಿಷಯ ಏನು ಎಂದು ಕೇಳಿದಾಗ, ನಾನು ಮೊದಲಿನಂತೆಯೇ ಆಡುತ್ತಿಲ್ಲ ನಿಜ, ಆದರೆ ನಾನೇನು ಕೆಟ್ಟದಾಗಿ ಆಡುತ್ತಿಲ್ಲ. ಈ ವಿಶ್ವಕಪ್‌ನಲ್ಲೇ ಈಗಾಗಲೇ 3 ಗೋಲುಗಳನ್ನು ಬಾರಿಸಿದ್ದೇನೆ ಎಂದು ನೆನಪಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪ್ರಸಿದ್ಧ ಪತ್ರಕರ್ತ ಮಾರ್ಸೆಲೊ ಬೆಕ್ಲರ್ ಅವರನ್ನು ಗುರುತಿಸಿದ ರೊನಾಲ್ಡೊ, “ಆ ಹುಡುಗನಿಗೆ ಮೈಕ್ ಕೊಡಿ, ಅವನಿಗೆ ನಾನೆಂದರೆ ಇಷ್ಟವಿಲ್ಲ. ನನಗೆ ಜನರ ಮುಖಗಳು ಚೆನ್ನಾಗಿ ನೆನಪಿರುತ್ತವೆ ಎಂದು ನಗುತ್ತಲೇ ಕಾಲೆಳೆದರು.
ಇನ್ನು ನಿವೃತ್ತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ, ಮಾಧ್ಯಮಗಳ ಒತ್ತಡಕ್ಕೆ ಮಣಿದು ತಾನು ನಿವೃತ್ತಿ ಘೋಷಿಸುವುದಿಲ್ಲ. ನನಗೆ ಸರಿ ಎನಿಸಿದಾಗ ಮಾತ್ರ ಆಟದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು. ಇದಾಗ್ಯೂ ಇದು ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯಾವಳಿ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ತನ್ನ ಮೇಲೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ ರೊನಾಲ್ಡೊ, ಈ ವಯಸ್ಸಿನಲ್ಲೂ ನನ್ನ ಮೇಲಾಗುವ ದಾಳಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಯಾಕಂದರೆ ಈ ಟೀಕೆಗಳೇ ನೀವು ಇನ್ನಷ್ಟು ಬೆಳೆಯಲು ಸಹಾಯ ಮಾಡುತ್ತವೆ ಎಂದು ಭಾವುಕರಾಗಿ ನುಡಿದರು.
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಈ ಉತ್ತರಗಳು ಅವರನ್ನು ಟೀಕಿಸುವರಿಗೆ ಮತ್ತು ಗುರಿಯಾಗಿಸುವವರಿಗೆ ನೀಡಿದ ತಿರುಗೇಟಷ್ಟೇ ಅಲ್ಲ. ಅದು ಅವರ 23 ವರ್ಷಗಳ ಅಪ್ರತಿಮ ಫುಟ್‌ಬಾಲ್ ಪಯಣದ ಹಠ ಮತ್ತು ಬದ್ಧತೆಯ ಸಂಕೇತವಾಗಿದೆ.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
41ನೇ ವಯಸ್ಸಿನಲ್ಲೂ ವಿಮರ್ಶಕರ ನಕಾರಾತ್ಮಕತೆಯನ್ನು ತಮಗೆ ಪ್ಲಸ್ ಪಾಯಿಂಟ್ ಮಾಡಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿಯ ವಿಶ್ವಕಪ್ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ನಿವೃತ್ತಿ ಘೋಷಿಸುವ ಇರಾದೆಯಲ್ಲಿದ್ದಾರೆ. ಇದಕ್ಕಾಗಿ ಪೋರ್ಚುಗಲ್ ಪಡೆ ಇನ್ನೂ 4 ಪಂದ್ಯಗಳನ್ನು ಗೆಲ್ಲಬೇಕಿದೆ.