India vs Australia Test Series | ಇಲ್ಲದ ಕ್ರಿಕೆಟ್ ಜ್ಞಾನ ಪ್ರದರ್ಶಿಸುವ ಭರದಲ್ಲಿ ಟ್ರೋಲ್​ ಆದ ಬಾಬುಲ್ ಸುಪ್ರಿಯೊ

ತೊಡೆಸಂದಿ ಸಮಸ್ಯೆಯಿಂದ ಬಳಲುತ್ತಿದ್ದರೂ ಟೀಮನ್ನು ಸೋಲಿನಿಂದ ಪಾರು ಮಾಡಲು ನೋವು ನಿವಾರಕ ಮಾತ್ರೆಗಳನ್ನು ನುಂಗಿ ಮೈದಾನದಲ್ಲಿ ಬ್ಯಾಟ್​ ಮಾಡುತ್ತಿದ್ದ ಹನುಮ ವಿಹಾರಿಯನ್ನು ಬಾಬುಲ್ ಸುಪ್ರಿಯೋ ಕಟುವಾಗಿ ಟೀಕಿಸಿದ್ದಾರೆ.

India vs Australia Test Series | ಇಲ್ಲದ ಕ್ರಿಕೆಟ್ ಜ್ಞಾನ ಪ್ರದರ್ಶಿಸುವ ಭರದಲ್ಲಿ ಟ್ರೋಲ್​ ಆದ ಬಾಬುಲ್ ಸುಪ್ರಿಯೊ
ಬಾಬುಲ್ ಸುಪ್ರಿಯೋ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 11, 2021 | 7:37 PM

ಜನಪ್ರಿಯ ಗಾಯಕ, ಟಿವಿ ನಿರೂಪಕ, ಸಕ್ರಿಯ ರಾಜಕಾರಣಿ ಮತ್ತು ಕೇಂದ್ರ ಸಚಿವರೂ ಅಗಿರುವ ಬಾಬುಲ್ ಸುಪ್ರಿಯೋ ಹಿತಕರವಲ್ಲದ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿರುಚಿಯ ಒಂದೆರಡು ರಂಗಗಳಲ್ಲಿ ಹೆಸರು ಮಾಡಿರುವ ಸುಪ್ರಿಯೋ ತಮಗೆ ಗೊತ್ತಿರದ ಕ್ರಿಕೆಟ್​ ಕ್ಷೇತ್ರದಲ್ಲೂ ಜನಪ್ರಿಯತೆ ಗಿಟ್ಟಿಸುವ ಹಮ್ಮಿಗೆ ಬಿದ್ದಂತಿದೆ.

ಕ್ರಿಕೆಟ್​ ಪ್ರೇಮಿಗಳಿಗೆ ಸಿಡ್ನಿಯಲ್ಲಿ ಇಂದು ಏನು ನಡೆಯಿತು ಎನ್ನುವುದು ಗೊತ್ತಿದೆ. ನಂಬಲಸದಳ ಧೈರ್ಯ, ಸಾಹಸ ಪ್ರದರ್ಶಿಸಿದ ಟೀಮ್ ಇಂಡಿಯಾದ ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಭಾರತವನ್ನು ಸೋಲಿನಿಂದ ಪಾರು ಮಾಡಿ ಪಂದ್ಯ ಡ್ರಾ ಆಗುವಂತೆ ಮಾಡಿದರು. ಅವರು ವಿಕೆಟ್ ಮಧ್ಯೆ ತೋರಿದ ಪರಾಕ್ರಮವನ್ನು ಇಡೀ ದೇಶವೇ ಪ್ರಶಂಸಿಸುತ್ತಿದೆ. ಆಸ್ಸೀ ಬೌಲರ್​ಗಳು ಅಲ್ಪ ಅಂತರದ ಸಮಯದಲ್ಲಿ ರಿಷಭ್ ಪಂತ್ ಮತ್ತು ಚೇತೇಶ್ವರ್ ಪೂಜಾರಾರನ್ನು ಔಟ್ ಮಾಡಿ ಪಂದ್ಯದ ಮೇಲೆ ಸಂಪೂರ್ಣ ಹತೋಟಿ ಸಾಧಿಸಿದ್ದರು, ಗೆಲುವಿನ ವಾಸನೆ ಅವರ ಮೂಗಿಗೆ ಬಡಿಯಲಾರಂಭಿಸಿತ್ತು.

ತೊಡೆಸಂದಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ವಿಹಾರಿ, ನೋವು ಅದುಮುವುದಕ್ಕೋಸ್ಕರ ಮಾತ್ರೆಗಳನ್ನು ನುಂಗಿ ಟೀಮನ್ನು ಸೋಲಿನಿಂದ ಪಾರು ಮಾಡಲು ಮೈದಾನದಲ್ಲಿ ಬ್ಯಾಟ್​ ಮಾಡುತ್ತಿದ್ದರು. ವಿಹಾರಿಯನ್ನು ಸುಪ್ರಿಯೋ ಕಟುವಾಗಿ ಟೀಕಿಸಿದ್ದಾರೆ. ಅವರಿಗೆ ವಿಹಾರಿ ಹೆಸರು ಸಹ ಸರಿಯಾಗಿ ಗೊತ್ತಿಲ್ಲ, ತಮ್ಮ ಟ್ವೀಟ್​ನಲ್ಲಿ ಬಿಹಾರಿ ಅಂತ ಬರೆದಿದ್ದಾರೆ! ಅವರ ಟ್ವೀಟ್ ವಿಹಾರಿಯ ಧೀರೋದಾತ್ತ ಆಟವನ್ನು ಸಮಾಧಿ ಮಾಡಿದಂತಿದೆ. ವಿಹಾರಿ ಕ್ರಿಕೆಟ್ ಆಟವನ್ನು ಕೊಂದಿದ್ದಾರೆಂದು ಹೇಳಿರುವುದು ಕ್ರಿಕೆಟ್​ ಬಲ್ಲವರಿಗೆ ಸಹ್ಯವಾಗುತ್ತಿಲ್ಲ.

ಹನುಮ ವಿಹಾರಿ ಮತ್ತು ಬಾಬುಲ್ ಸುಪ್ರಿಯೋ

‘ಸುಪ್ರಿಯೊ ತಮ್ಮ ಮೊದಲ ಟ್ಟೀಟ್​ನಲ್ಲಿ, 109 ಎಸೆತಗಳಲ್ಲಿ ವಿಹಾರಿ ಕೇವಲ 7 ರನ್ ಗಳಿಸಿದ್ದು ಅತ್ಯಂತ ಕಳಪೆಮಟ್ಟದ ಬ್ಯಾಟಿಂಗ್ ಪ್ರದರ್ಶನ, ಅವರು ಭಾರತ ಐತಿಹಾಸಿಕ ಗೆಲುವು ಸಾಧಿಸುವ ಅವಕಾಶವನ್ನು ನಾಶಗೊಳಿಸುವ ಜೊತೆಗೆ ಕ್ರಿಕೆಟ್​ ಹತ್ಯೆಗೈದರು. ಗೆಲ್ಲುವ ಬಗ್ಗೆ ಕಿಂಚಿತ್ತೂ ಯೋಚಿಸದಿರುವುದು ಅಪರಾಧವಲ್ಲದೆ ಮತ್ತೇನೂ ಅಲ್ಲ’ ಎಂದು ಸುಪ್ರಿಯೋ ಟ್ವೀಟ್ ಮಾಡಿದ ನಂತರ ಜನ ಅವರನ್ನು ಟೀಕಿಸಲಾರಂಭಿದರು.

ಚೇತನ್ ಭಟ್​ ಎನ್ನುವವರು, ‘ಸಂಗೀತ ಇಲ್ಲವೇ ರಾಜಕೀಯಕ್ಕೆ ಅಂಟಿಕೊಂಡಿರಿ, ಕ್ರಿಕೆಟ್​ನ ಗಂಧವೇ ನಿಮಗಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಖ್ಯಾತ ಕ್ರಿಕೆಟ್ ವಿಶ್ಲೇಷಕ ಬೊರಿಯಾ ಮಾಜುಮ್ದಾರ್ ತಮ್ಮ ಟ್ಚೀಟ್​ನಲ್ಲಿ, ‘ಓ ಹೌದಾ? ನೀವು ತಮಷೆ ಮಾಡುತ್ತಿರುವಿರಿ ಎಂದು ಭಾವಿಸಿತ್ತೇನೆ. ನನ್ನ ಪ್ರಕಾರ ಹನುಮ ವಿಹಾರಿ ಒಬ್ಬ ಟೆಸ್ಟ್​ ಆಟಗಾರನಾಗಿ ಇವತ್ತು ಮರುಹುಟ್ಟು ಪಡೆದಿದ್ದಾರೆ. ಅವರ ದೇಹಸ್ಥಿತಿಯ ಬಗ್ಗೆ ಗೊತ್ತಿದ್ದರೆ ನೀವು ಹೀಗೆ ಹೇಳುತ್ತಿರಲಿಲ್ಲ’ ಅಂತ ಹೇಳಿದ್ದಾರೆ.

ಮಯುಕ್ ಬಸು ಎನ್ನುವವರು ತಮ್ಮ ಟ್ವೀಟ್​ನಲ್ಲಿ, ‘ಏನಾದರೂ ಹೇಳುವ ಮೊದಲು ಕೊಂಚ ಯೋಚಿಸಿ ಬಾಬುಲ್​ ಜೀ. ನಿಮಗೆ ಕ್ರೀಡೆಯ ಬಗ್ಗೆ ಗೊತ್ತೇ ಇಲ್ಲ. ಅವರ ಹ್ಯಾಮ್​ಸ್ಟ್ರಿಂಗ್ ನೋವಿನಿಂದ ಬಳಲುತ್ತಿದ್ದರೂ, ಟೆಸ್ಟ್​ ಉಳಿಸಲು ಮೈದಾನದಲ್ಲಿದ್ದರು, ಗಾಯದ ತೀವ್ರತೆ ಎಷ್ಟಿದೆಯೆಂದರೆ ಕೆಲ ತಿಂಗಳುಗಳವರೆಗೆ ಕ್ರಿಕೆಟ್​ ದೂರ ಇರಬೇಕಾಗಬಹುದು, ತಮ್ಮ ಕರೀಯರ್​ ಅನ್ನು ಅವರು ಅಪಾಯಕ್ಕೆ ಸಿಲುಕಿಸಿದ್ದಾರೆ, ಎಂದು ಹೇಳಿದ್ದಾರೆ.

ತಮ್ಮ ಟ್ವೀಟ್ ಭಯಂಕರ ಟ್ರೋಲ್ ಆಗುತ್ತಿರುವುದನ್ನು ಗಮನಿಸಿದ ಸುಪ್ರಿಯೋ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ‘ಯಾರೂ ಊಹಿಸದ ರೀತಿಯಲ್ಲಿ ಪಂತ್ ಬ್ಯಾಟ್​ ಮಾಡಿದ್ದರಿಂದ, ಹನಮ ತಾವು ನಿಂತ ಸ್ಥಳದಿಂದಲೇ ದುರ್ಬಲ ಎಸೆತಗಳನ್ನು ಬಾರಿಸಿದ್ದರೆ ಭಾರತಕ್ಕೆ ಐತಿಹಾಸಿಕ ಗೆಲುವ ಸಾಧಿಸುವ ಅವಕಾಶವಿತ್ತು. ನಾನು ಪುನರುಚ್ಛರಿಸುತ್ತಿದ್ದೇನೆ, ಅವರ ದುರ್ಬಲ ಎಸೆತಗಳನ್ನು ಮಾತ್ರ ದಂಡಿಸಿದ್ದರೆ ಸಾಕಿತ್ತು, ಅವರು ಆದಾಗಲೇ ಸೆಟ್ ಬ್ಯಾಟ್ಸ್​ಮನ್ ಆಗಿದ್ದರು’ ಎಂದು ಟ್ವೀಟ್​ ಮಾಡಿದ್ದಾರೆ. ನನಗೆ ಕ್ರಿಕೆಟ್​ ಬಗ್ಗೆ ಜ್ಞಾನವಿಲ್ಲ ಅಂತಲೂ ಅವರು ಕೊನೆಯಲ್ಲಿ ಬರೆದುಕೊಂಡಿದ್ದಾರೆ.

India vs Australia Test Series | ಆಶ್ವಿನ್ ಮತ್ತು ವಿಹಾರಿ ಉತ್ತಮ ಆಟ, ನೆನಪಾಯ್ತು 1981ರ ಅಡಿಲೇಡ್ ಟೆಸ್ಟ್

Published On - 7:14 pm, Mon, 11 January 21