Virat Kohli Profile: ಆಂಗ್ಲರ ನಾಡಲ್ಲಾದರೂ ನೀಗುತ್ತಾ ಕೊಹ್ಲಿಯ ಶತಕಗಳ ಬರ; ಇಂಗ್ಲೆಂಡ್ನಲ್ಲಿ ವಿರಾಟ್ ಆಟ ಹೇಗಿದೆ ಗೊತ್ತಾ?
ICC World Test Championship 2021: ಇಂಗ್ಲೆಂಡ್ ನೆಲದಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರಾಟ್ 20 ಇನ್ನಿಂಗ್ಸ್ನಲ್ಲಿ ಒಟ್ಟು 727 ರನ್ ಗಳಿಸಿದ್ದಾರೆ.
ಕೊರೊನಾದಿಂದಾಗಿ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ತಾತ್ಕಾಲಿಕವಾಗಿ ರದ್ದಾಗಿದೆ. ಹೀಗಾಗಿ ಎಲ್ಲರ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದತ್ತ ಇದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಈ ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜೂನ್ 18ರಿಂದ ಆರಂಭವಾಗಲಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಗೆಲ್ಲುವುದರ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಮೊದಲ ಐಸಿಸಿ ಟ್ರೋಫಿಯೊಂದನ್ನು ಗೆಲ್ಲುವ ತವಕದಲ್ಲಿದ್ದಾರೆ.
ನಾಯಕನಾಗಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಈಗಾಗಲೇ ಸಾಕಷ್ಟು ಸರಣಿಗಳಲ್ಲಿ ಜಯ ಸಾಧಿಸಿದ್ದು ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಟೀಂ ಇಂಡಿಯಾ ವಶಪಡಿಸಿಕೊಂಡಿತ್ತು. ಆದರೆ ಈಗ ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಆಡಬೇಕಿದೆ. ಅದರಲ್ಲೂ ಆಂಗ್ಲರನ್ನು ಅವರ ನೆಲದಲ್ಲೇ ಎದುರಿಸುತ್ತಿರುವುದು ವಿರಾಟ್ ಬಳಗಕ್ಕೆ ದೊಡ್ಡ ಸವಾಲು ಆಗಿದೆ. ಜತೆಗೆ ನ್ಯೂಜಿಲ್ಯಾಂಡ್ ವಿರುದ್ಧ ಕೊಹ್ಲಿಯ ಗೆಲುವಿನ ಸೂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್ ಕೊಹ್ಲಿ- ಭಾರತದಲ್ಲಿ ತಾಯ್ನಾಡಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 5 ಪಂದ್ಯಗಳನ್ನು ಆಡಿರುವ ಕೊಹ್ಲಿ 65.13 ಸರಾಸರಿಯಲ್ಲಿ 521 ರನ್ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 2 ಅರ್ಧ ಶತಕ ಕೂಡ ಸೇರಿವೆ. ಅಲ್ಲದೆ ಒಂದು ದ್ವಿಶತಕವನ್ನು ಬಾರಿಸಿದ್ದು, 211 ವೈಯಕ್ತಿಕ ಅತ್ಯಧಿಕ ಸ್ಕೋರ್ ಆಗಿದೆ. ಅಲ್ಲದೆ ಕೊಹ್ಲಿ 56.69 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಕೊಹ್ಲಿ- ನ್ಯೂಜಿಲ್ಯಾಂಡ್ನಲ್ಲಿ ನ್ಯೂಜಿಲ್ಯಾಂಡ್ ನೆಲದಲ್ಲಿ ಕಿವೀಸ್ ವಿರುದ್ಧ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 36 ರ ಸರಾಸರಿಯಲ್ಲಿ 252 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧ ಶತಕ ಕೂಡ ಸೇರಿದೆ. ಇದರಲ್ಲಿ ಔಟಾಗಾದೆ 105 ರನ್ ಬಾರಿಸಿರುವುದು ಕೊಹ್ಲಿಯ ಅತ್ಯಧಿಕ ರನ್ ಆಗಿದೆ.
ಇಂಗ್ಲೆಂಡ್ ವಿರುದ್ಧ ಕೊಹ್ಲಿ ವಿರಾಟ್ ಕೊಹ್ಲಿ 2018 ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಒಳಗೊಂಡಂತೆ 593 ರನ್ ಗಳಿಸಿದರು ಮತ್ತು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆದರೆ 2014 ರಲ್ಲಿ ಕೊಹ್ಲಿಯ ಫಾರ್ಮ್ ಕಳಪೆಯಾಗಿತ್ತು ಕೇವಲ 13.4 ರ ಸರಾಸರಿಯಲ್ಲಿ 134 ರನ್ ಗಳಿಸಿದ್ದರು. ಇದು ಇಂಗ್ಲೆಂಡ್ನಲ್ಲಿ ಅವರ ಕಡಿಮೆ ಸರಾಸರಿಗೆ ಪ್ರಾಥಮಿಕ ಕಾರಣವಾಗಿದೆ. ಆದರೆ ಹಳೆಯ ಕಳಪೆ ಆಟವನ್ನು ಮರೆತು ಮುಂದಿನ ಪ್ರವಾಸದಲ್ಲಿ ಅವರು ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಸಾಧನೆ ಇಂಗ್ಲೆಂಡ್ ನೆಲದಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರಾಟ್ 20 ಇನ್ನಿಂಗ್ಸ್ನಲ್ಲಿ ಒಟ್ಟು 727 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 3 ಅರ್ಧ ಶತಕಗಳಿದ್ದರೆ ವೈಯಕ್ತಿಕ ಅತ್ಯಧಿಕ ಸ್ಕೋರ್ 149 ರನ್ ಆಗಿದೆ. ಜೊತೆಗೆ 55. 37 ಸ್ಟ್ರೈಕ್ ಧರದಲ್ಲಿ ಬ್ಯಾಟ್ ಬೀಸಿರುವ ವಿರಾಟ್ 36.35 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಹಾಗೆಯೇ ಇಂಗ್ಲೆಂಡ್ ನೆಲದಲ್ಲಿ 2 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಭಾರತದ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಸಾಧನೆ ಜೊತೆಗೆ ಭಾರತದ ನೆಲದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 56.39 ಸರಾಸರಿಯಲ್ಲಿ 1015 ರನ್ ಕಲೆಹಾಕಿದ್ದು ಇದರಲ್ಲಿ 3 ಶತಕ ಹಾಗೂ 4 ಅರ್ಧಶತಕವನ್ನು ಸಹ ಸಿಡಿಸಿದ್ದಾರೆ. ಅಲ್ಲದೆ 235 ರನ್ಗಳ ಅಮೋಘ ದ್ವಿಶತಕವನ್ನು ಬಾರಿಸಿದ್ದಾರೆ. ಜೊತೆಗೆ ಭಾರತದ ನೆಲದಲ್ಲಿ ಆಂಗ್ಲರ ವಿರುದ್ಧ ವಿರಾಟ್ 3 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಸಾಧನೆ
ಆವೃತ್ತಿ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ದ್ವಿ ಶತಕ | ಅರ್ಧ ಶತಕ |
ಟೆಸ್ಟ್ | 91 | 7490 | 254 | 52.38 | 27 | 7 | 25 |
ಏಕದಿನ | 254 | 12169 | 183 | 59.07 | 43 | 0 | 62 |
T20 | 89 | 3159 | 94 | 52.65 | 0 | 0 | 28 |
ಇದನ್ನೂ ಓದಿ: ಪ್ಯಾಟ್ ಕಮ್ಮಿನ್ಸ್ರ ವಿಶ್ವದ ಅತ್ಯುತ್ತಮ ಟೆಸ್ಟ್ ಇಲೆವೆನ್ನಲ್ಲಿ ವಿಲಿಯಮ್ಸನ್, ಸ್ಮಿತ್ ಜೊತೆ ಕೊಹ್ಲಿಗೆ ಸ್ಥಾನ
ಕೊಹ್ಲಿ ದಾಖಲೆಯನ್ನು ಮುರಿಯುವುದಿರಲಿ.. ನಮ್ಮಿಂದ ಟಚ್ ಕೂಡ ಮಾಡಲಾಗುವುದಿಲ್ಲ; ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್