ಕ್ರಿಕೆಟ್ ಪಂಟರ್ಗಳಂತೆ ಬ್ಯಾಟ್ ಬೀಸ್ತಾಳೆ ಈ 6 ವರ್ಷದ ಪೋರಿ; ವಿಡಿಯೋ ನೋಡಿ ನೀವೂ ಮೂಗಿನ ಮೇಲೆ ಬೆರಳಿಡ್ತೀರಾ..!
ತನ್ನ ತಂದೆ ಕೇವಲ ತನ್ನ ಸಹೋದರನಿಗೆ ತರಬೇತಿ ನೀಡುತ್ತಿರುವುದನ್ನು ಗಮನಿಸಿದ ಫಾತಿಮಾ, ನಾನು ಹುಡುಗಿಯಾಗಿದ್ದರಿಂದ ನೀವು ನನಗೆ ಕಲಿಸುತ್ತಿಲ್ಲವೇ? ಎಂದು ತನ್ನ ತಂದೆಗೆ ಪ್ರಶ್ನೆ ಮಾಡಿದ್ದಳಂತೆ.
ಕ್ರಿಕೆಟ್ ಎಂಬುದು ಭಾರತೀಯರ ರಕ್ತದಲ್ಲಿ ಸೇರಿಹೋಗಿರುವ ಒಂದು ಕ್ರೀಡೆಯಾಗಿದ್ದು, ಇದು ಹೆಚ್ಚಿನ ಮಕ್ಕಳಿಗೆ ವೃತ್ತಿಯ ಸ್ಪಷ್ಟ ಆಯ್ಕೆಯಾಗಿದೆ. ಭಾರತದಲ್ಲಿ ಪುರುಷರ ಕ್ರಿಕೆಟ್ ಯಾವಾಗಲೂ ಪ್ರವರ್ಧಮಾನಕ್ಕೆ ಬರುತ್ತಿದ್ದರೂ, ಇತ್ತೀಚೆಗೆ ಮಹಿಳೆಯರ ಕ್ರಿಕೆಟ್ ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದೆ. ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಪುಟ್ಟ ಪೋರಿಯೊಬ್ಬಳು ಯಾವ ಕ್ರಿಕೆಟರ್ಗಳಿಗೂ ಕಡಿಮೆ ಇಲ್ಲವೆಂಬಂತೆ ಬ್ಯಾಟ್ ಬೀಸಿದ್ದಾಳೆ. ಈ ಬಾಲೆಯ ಕ್ರಿಕೆಟಿಂಗ್ ಶಾಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಸ್ಟ್ರೈಟ್ ಡ್ರೈವ್ ಮತ್ತು ಪುಲ್ ಶಾಟ್ ಕೇರಳ ಕೋಚಿಕ್ಕೋಡ್ ಮೂಲದ ಆರು ವರ್ಷದ ಮೆಹಕ್ ಫಾತಿಮಾ ಅನುಭವಿ, ದಿಟ್ಟ ಬ್ಯಾಟ್ಸ್‌ಮನ್‌ಗಳಂತೆ ಬ್ಯಾಟ್ ಬೀಸುತ್ತಿರುವ ಈ ವಿಡಿಯೋ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋದಲ್ಲಿ ಸ್ಟಂಪ್ಸ್ ಮುಂದೆ ಹೆಲ್ಮೆಟ್ ಧರಿಸಿ, ಗ್ಲೌಸ್ ಹಾಕಿ, ಬ್ಯಾಟ್ ಬೀಸುತ್ತಿರುವ ಈ ಹುಡುಗಿ ಥೇಟ್ ದೊಡ್ಡ ಆಟಗಾರರಂತೆಯೇ ಕ್ರಿಕೆಟ್ ಕೌಶಲಗಳನ್ನು ಪ್ರದರ್ಶಿಸಿದ್ದಾಳೆ. ಕ್ರಿಕೆಟ್‌ನಲ್ಲಿ ಅನುಭವಿ ಆಟಗಾರರು ಆಡುವ ಅಪರೂಪದ ಶಾಟ್‌ಗಳನ್ನು ಹುಡುಗಿ ಆಡುತ್ತಿದ್ದಾಳೆ. ಸ್ಟ್ರೈಟ್ ಡ್ರೈವ್‌ಗಳು ಮತ್ತು ಪುಲ್ ಶಾಟ್‌ಗಳನ್ನು ನೀರು ಕುಡಿದಂತೆ ಬಾರಿಸುವ ಈಕೆಯ ಆಟಕ್ಕೆ ಈಗ ನೆಟ್ಟಿಗರು ಶಹಬ್ಬಾಸ್ ಎನ್ನುತ್ತಿದ್ದಾರೆ.
ನಾನು ಹುಡುಗಿಯಾಗಿದ್ದರಿಂದ ನೀವು ನನಗೆ ಕಲಿಸುತ್ತಿಲ್ಲವೇ? ಫಾತಿಮಾ ಏಳು ತಿಂಗಳ ಹಿಂದೆ ತನ್ನ ತಂದೆ ತನ್ನ 3 ವರ್ಷದ ಸಹೋದರನಿಗೆ ತರಬೇತಿ ನೀಡುವುದನ್ನು ನೋಡಿದಾಗ ಆಟವನ್ನು ಆಡಲು ಪ್ರಾರಂಭಿಸಿದಳು. ಆದರೆ ತನ್ನ ತಂದೆ ಕೇವಲ ತನ್ನ ಸಹೋದರನಿಗೆ ತರಬೇತಿ ನೀಡುತ್ತಿರುವುದನ್ನು ಗಮನಿಸಿದ ಫಾತಿಮಾ, ನಾನು ಹುಡುಗಿಯಾಗಿದ್ದರಿಂದ ನೀವು ನನಗೆ ಕಲಿಸುತ್ತಿಲ್ಲವೇ? ಎಂದು ತನ್ನ ತಂದೆಗೆ ಪ್ರಶ್ನೆ ಮಾಡಿದ್ದಳಂತೆ ಎಂಬ ವಿಚಾರವನ್ನು ಫಾತಿಮಾಳ ತಾಯಿ ಖದೀಜಾ ತಿಳಿಸಿದ್ದಾರೆ.
ಅಂದಿನಿಂದ, ಫಾತಿಮಾ ಔಪಚಾರಿಕ ಕ್ರಿಕೆಟ್ ತರಬೇತಿಗಾಗಿ ಹೋಗುತ್ತಿದ್ದಾರೆ-ಕೋವಿಡ್ -19 ಲಾಕ್ಡೌನ್ ಅನ್ನು ಮತ್ತೆ ರಾಜ್ಯದಲ್ಲಿ ಹೇರಲಾಗಿದ್ದರಿಂದ ಅವರು ಕೇವಲ ಮೂರು ತಿಂಗಳು ಮಾತ್ರ ತರಬೇತಿ ಪಡೆದಿದ್ದಾಳೆ. ಆದರೆ ತನ್ನ ಮಗಳ ಪ್ರತಿಭೆಯನ್ನು ಕಂಡ ಇತರ ಕೋಚಿಂಗ್ ಅಕಾಡೆಮಿಗಳು ತರಬೇತಿ ನೀಡಲು ಮುಂದೆ ಬಂದಿವೆ ಎಂದು ಖಾದಿಜಾ ಹೇಳುತ್ತಾರೆ.
ಫಾತಿಮಾಗೆ ಸ್ಮೃತಿ ಮಂದಾನ ನೆಚ್ಚಿನ ಕ್ರಿಕೆಟರ್ ವಾಸ್ತವವಾಗಿ ಕ್ರಿಕೆಟ್ ಆಟ ಫಾತಿಮಾ ಕುಟುಂಬಕ್ಕೆ ಹೊಸತೆನಲ್ಲ. ಫಾತಿಮಾ ಅವರ ತಂದೆ ಮುನೀರ್ ಅವರು 13 ವರ್ಷದವರಾಗಿದ್ದಾಗ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಕ್ರಿಕೆಟ್ ಆಡಿದ್ದಾರೆ. ಫಾತಿಮಾ ಸಹೋದರ ಕೂಡ 18 ತಿಂಗಳ ನವಿರಾದ ವಯಸ್ಸಿನಲ್ಲಿ ಬ್ಯಾಟ್ ಮತ್ತು ಚೆಂಡಿನೊಂದಿಗೆ ಆಟವಾಡಲು ಪ್ರಾರಂಭಿಸಿದ್ದ. ಫಾತಿಮಾ ಈಗ ಕ್ರೀಡೆಗೆ ಎಷ್ಟು ಸಮರ್ಪಿತಳಾಗಿದ್ದಾಳೆಂದರೆ, ಆಕೆಯ ತಂದೆಯೊಂದಿಗೆ ಇಡೀ ದಿನ ಅವರ ಮನೆಯೊಳಗೆ ಆಟವಾಡುವುದನ್ನು ಕಾಣಬಹುದು. ಅವರು ಭವಿಷ್ಯದಲ್ಲಿ ಕ್ರಿಕೆಟಿಗರಾಗಬೇಕೆಂಬ ಆಸೆ ಇದೆ. ಜೊತೆಗೆ ಫಾತಿಮಾಗೆ ಸ್ಮೃತಿ ಮಂದಾನ ನೆಚ್ಚಿನ ಕ್ರಿಕೆಟರ್ ಆಗಿದ್ದಾರೆ. ಹಾಗಾಗಿ ಫಾತಿಮಾ ಮಂದನ ಅವರ ಆಟವನ್ನು ಯಾವಾಗಲೂ ಮೊಬೈಲ್ನಲ್ಲಿ ವೀಕ್ಷಿಸುತ್ತಿರುತ್ತಾಳೆ ಎಂದು ಖಾದಿಜಾ ಹೇಳುತ್ತಾರೆ.