AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Javelin Throw Final: ಚಿನ್ನಕ್ಕಾಗಿ ಭಾರತ- ಪಾಕ್ ನಡುವೆ ಫೈಟ್; ಫೈನಲ್ ಸುತ್ತು ಎಷ್ಟು ಗಂಟೆಗೆ ಆರಂಭ?

World Athletics 2023 Javelin final: ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್‌ ಸ್ಪರ್ಧೆಯ ಫೈನಲ್ ಸುತ್ತು ಇಂದು (ಆ.27) ನಡೆಯಲ್ಲಿದೆ. ಭಾರತೀಯ ಕಾಲಮಾನ ರಾತ್ರಿ 11:45 ರಿಂದ ಈ ಫೈನಲ್ ಸುತ್ತು ಆರಂಭವಾಗಲಿದೆ.

Javelin Throw Final: ಚಿನ್ನಕ್ಕಾಗಿ ಭಾರತ- ಪಾಕ್ ನಡುವೆ ಫೈಟ್; ಫೈನಲ್ ಸುತ್ತು ಎಷ್ಟು ಗಂಟೆಗೆ ಆರಂಭ?
ನೀರಜ್ ಚೋಪ್ರಾ, ಡಿಪಿ ಮನು ಮತ್ತು ಕಿಶೋರ್ ಜೆನಾ
ಪೃಥ್ವಿಶಂಕರ
|

Updated on:Aug 27, 2023 | 1:03 PM

Share

ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ (World Athletics 2023 Javelin final) ಜಾವೆಲಿನ್‌ ಸ್ಪರ್ಧೆಯ ಫೈನಲ್ ಸುತ್ತು ಇಂದು (ಆ.27) ನಡೆಯಲ್ಲಿದೆ. ಭಾರತೀಯ ಕಾಲಮಾನ ರಾತ್ರಿ 11:45 ರಿಂದ ಈ ಫೈನಲ್ ಸುತ್ತು ಆರಂಭವಾಗಲಿದೆ. ಆಗಸ್ಟ್ 25 ರಂದು ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ಭಾರತದ ಮೂವರು ಸ್ಪರ್ಧಿಗಳು ಸ್ಪರ್ಧಿಸಿದ್ದರು. ಇದರಲ್ಲಿ ಮೂವರು ಕೂಡ ಅರ್ಹತಾ ಸುತ್ತಿನಲ್ಲಿ ಗೆಲುವು ದಾಖಲಿಸಿ, ಫೈನಲ್​ಗೆ ಮುನ್ನಡೆದಿದ್ದಾರೆ. ಈ ಮೂವರಲ್ಲಿ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ (Neeraj Chopra), ಕನ್ನಡಿಗ ಡಿಪಿ ಮನು (DP Manu) ಹಾಗೂ ಕಿಶೋರ್ ಜೆನಾ ಕೂಡ ಸೇರಿದ್ದಾರೆ. ಹೀಗಾಗಿ ಈ ಮೂವರಲ್ಲಿ ಯಾರು ಭಾರತಕ್ಕೆ ಪದಕ ಗೆದ್ದುಕೊಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಇದಲ್ಲದೆ, ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಕೂಡ ಈ ಫೈನಲ್ ಸುತ್ತಿಗೆ ಆಯ್ಕೆಯಾಗಿರುವುದರಿಂದ ಸ್ಪರ್ಧೆಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಮೊದಲ ಸುತ್ತಿನಲ್ಲೇ ಗೆದ್ದ ನೀರಜ್‌

ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 88.77 ಮೀಟರ್ ದೂರ ಭರ್ಜಿ ಎಸೆದ ನೀರಜ್, ಗುಂಪುಗಳಲ್ಲಿ ಮೊದಲ ಸ್ಥಾನ ಪಡೆಯುವುದರೊಂದಿಗೆ ಫೈನಲ್ ಪ್ರವೇಶಿಸಿದ್ದರು. ವಾಸ್ತವವಾಗಿ ಜಾವೆಲಿನ್ ವಿಭಾಗದಲ್ಲಿ ಫೈನಲ್​ಗೆ ಅರ್ಹತೆ ಪಡೆಯಬೇಕೆಂದರೆ, 83 ಮೀ ದೂರ ಜಾವೆಲಿನ್‌ ಎಸೆಯಲೇಬೇಕು. ಹೀಗಾಗಿ ತಮ್ಮ ಮೊದಲ ಎಸೆತದಲ್ಲೇ ಈ ಗಡಿ ಮೀರಿದ ನೀರಜ್, ನೇರವಾಗಿ ಫೈನಲ್ ಪ್ರವೇಶಿಸಿದರು. ಇದಲ್ಲದೆ ಮುಂದಿನ ವರ್ಷ ಅಂದರೆ 2024ರಲ್ಲಿ ನಡೆಯಲ್ಲಿರುವ ಪ್ಯಾರಿಸ್ ಒಲಂಪಿಕ್ಸ್​ಗೂ ಅರ್ಹತೆ ಗಿಟ್ಟಿಸಿಕೊಂಡರು.

ಜಾವೆಲಿನ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟ ಕನ್ನಡಿಗ ಡಿಪಿ ಮನು; ಚಾಂಪಿಯನ್ ಪಟ್ಟಕ್ಕಾಗಿ ನೀರಜ್- ಅರ್ಷದ್ ನಡುವೆ ಪೈಪೋಟಿ!

ಈ ಫೈನಲ್ ಭಾರತಕ್ಕೆ ಇನ್ನಷ್ಟು ವಿಶೇಷ

ಇವರಲ್ಲದೆ ಭಾರತದ ಇನ್ನಿಬ್ಬರು ಸ್ಪರ್ಧಿಗಳಾದ ಡಿಪಿ ಮನು (81.31) ಮತ್ತು ಕಿಶೋರ್ ಜೆನಾ (80.55) ಕೂಡ ಫೈನಲ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಮೊದಲ ಬಾರಿಗೆ ಭಾರತದ ಮೂವರು ಅಥ್ಲೀಟ್‌ಗಳು ಫೈನಲ್‌ನಲ್ಲಿ ಭಾಗವಹಿಸುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತೊಂದೆಡೆ, ಎರಡು ತಿಂಗಳ ಹಿಂದೆ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾಕಿಸ್ತಾನದ ಅರ್ಷದ್ ಕೂಡ ತಮ್ಮ ಕೊನೆಯ ಪ್ರಯತ್ನದಲ್ಲಿ 86.79 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಫೈನಲ್ ಪ್ರವೇಶಿಸಿದರು.

ಇತಿಹಾಸ ಸೃಷ್ಟಿಸುವ ತವಕದಲ್ಲಿ ನೀರಜ್

2021 ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದಾಗಿನಿಂದ, ನೀರಜ್ ತಮ್ಮ ಅದ್ಭುತ ಆಟವನ್ನು ಇತರೆ ಕ್ರೀಡಾಕೂಟದಲ್ಲಿ ಪ್ರದರ್ಶಿಸುತ್ತಾ ಬಂದಿದ್ದಾರೆ. ಒಲಂಪಿಕ್ಸ್ ಬಳಿಕ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ನೀರಜ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದೀಗ ಈ ಬಾರಿಯ ಚಾಂಪಿಯನ್‌ಶಿಪ್​ನಲ್ಲಿ ನೀರಜ್ ಚಿನ್ನದ ಪದಕ ಗೆದ್ದರೆ, 2009 ರ ನಂತರ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಜಾವೆಲಿನ್ ಎಸೆತಗಾರ ಎಂಬ ದಾಖಲೆಯನ್ನು ನೀರಜ್ ಮುರಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಲಿದ್ದಾರೆ.

ಫೈನಲ್ ಸುತ್ತು ಯಾವಾಗ ಆರಂಭ

ಈ ಫೈನಲ್ ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 11.45 ನಿಮಿಷಕ್ಕೆ ಆರಂಭವಾಗಲಿದೆ. ಇದನ್ನು ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Sun, 27 August 23