ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

FIFA World Cup 2026: ಫಿಫಾ ವಿಶ್ವಕಪ್​ನ ಪ್ರಿ-ಕ್ವಾರ್ಟರ್ ಫೈನಲ್​ನಲ್ಲಿ ಈಜಿಪ್ಟ್ ವಿರುದ್ಧ ರೋಚಕ ಜಯ ಸಾಧಿಸಿ ಅರ್ಜೆಂಟೀನಾ ಕ್ವಾರ್ಟರ್ ಫೈನಲ್​ಗೆ ತಲುಪಿದೆ. ಅಮೆರಿಕದ ಜಾರ್ಜಿಯಾ ರಾಜ್ಯದ ಅಟ್ಲಾಂಟಾದಲ್ಲಿರುವ 'ಮರ್ಸಿಡಿಸ್-ಬೆಂಜ್ ಸ್ಟೇಡಿಯಂ' ನಲ್ಲಿ ನಡೆದ ಈ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು 3-2 ಅಂತರದಿಂದ ಮಣಿಸುವಲ್ಲಿ ಮೆಸ್ಸಿ ಪಡೆ ಯಶಸ್ವಿಯಾಗಿದೆ. ಈ ಗೆಲುವಿ ಬೆನ್ನಲ್ಲೇ ರೆಫರಿ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ.

ಅರ್ಜೆಂಟೀನಾ ಪರ ಆಡುತ್ತಿರುವ ರೆಫರಿ... ಗಂಭೀರ ಆರೋಪ!
Argentina
Image Credit source: FIFA

Updated on: Jul 08, 2026 | 10:02 AM

2026ರ ಫಿಫಾ ವಿಶ್ವಕಪ್ ಟೂರ್ನಿಯು ರೋಚಕ ಹಂತ ತಲುಪುತ್ತಿದ್ದಂತೆ, ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ಸುತ್ತ ಗಂಭೀರ ವಿವಾದವೊಂದು ಸುತ್ತಿಕೊಂಡಿದೆ. ಟೂರ್ನಿಯಲ್ಲಿ ಅರ್ಜೆಂಟೀನಾ ಆಡಿದ ಪಂದ್ಯಗಳಲ್ಲಿ ರೆಫರಿಗಳು ಆ ತಂಡದ ಪರವಾಗಿಯೇ ತೀರ್ಪು ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರಲಾರಂಭಿಸಿದೆ. ಈ ಹಿಂದೆಯೇ ಇಂತಹ ಆರೋಪ ಕೇಳಿ ಬಂದಿದ್ದರೂ ಈಜಿಪ್ಟ್ ವಿರುದ್ಧದ ಮ್ಯಾಚ್​ ಬಳಿಕ ಇದು ಜಾಗತಿಕ ಫುಟ್​ಬಾಲ್ ವಲಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟು  ಹಾಕಿದೆ. ಅರ್ಜೆಂಟೀನಾ/ರೆಫರಿ ವಿರುದ್ಧ ಕೇಳಿ ಬಂದಿರುವ ಆರೋಪಗಳಾವುವು?

ಅರ್ಜೆಂಟೀನಾ vs ಈಜಿಪ್ಟ್ (ಪ್ರಿ-ಕ್ವಾರ್ಟರ್ ಫೈನಲ್):

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ವಿವಾದಕ್ಕೆ ಕಾರಣವಾದ ಪಂದ್ಯವಿದು. ಈ ಪಂದ್ಯದಲ್ಲಿ ಫ್ರೆಂಚ್ ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಅವರ ತೀರ್ಪುಗಳು ತೀವ್ರ ಟೀಕೆಗೆ ಒಳಗಾಗಿವೆ/

  • ರದ್ದಾದ ಗೋಲು: ಈಜಿಪ್ಟ್ ತಂಡವು 2-0 ಮುನ್ನಡೆ ಸಾಧಿಸುವ ಹಂತದಲ್ಲಿದ್ದಾಗ ಮೊಸ್ತಫಾ ಜಿಕೊ ಗಳಿಸಿದ ಗೋಲನ್ನು VAR (ವಿಡಿಯೋ ಅಸಿಸ್ಟೆಂಟ್ ರೆಫರಿ) ಪರಿಶೀಲನೆ ನಡೆಸಿ ರದ್ದುಗೊಳಿಸಿತು. ಅರ್ಜೆಂಟೀನಾದ ಬಾಕ್ಸ್ ಬಳಿ ಅತ್ಯಂತ ಸಣ್ಣ ಮಟ್ಟದ ಕಾಂಟ್ಯಾಕ್ಟ್ ಇತ್ತು, ಆದರೆ ಪಂದ್ಯ ಮುಂದುವರೆದು ಈಜಿಪ್ಟ್ ತಂಡ ಗೋಲು ದಾಖಲಿಸಿದ ಬಳಿಕ ಅದನ್ನು ಫೌಲ್ ಎಂದು ಪರಿಗಣಿಸಿ ಗೋಲು ನಿರಾಕರಿಸಿದ್ದು ತಪ್ಪು ಎಂದು ಹಲವು ಮಾಜಿ ರೆಫರಿಗಳು ಹಾಗೂ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
  • ಪೆನಾಲ್ಟಿ ನಿರಾಕರಣೆ: ಪಂದ್ಯದ ಕೊನೆಯ ಹಂತಗಳಲ್ಲಿ ಈಜಿಪ್ಟ್‌ನ ಮೊಹಮ್ಮದ್ ಸಲಾಹ್ ಅವರನ್ನು ಬಾಕ್ಸ್ ಒಳಗೆ ಅರ್ಜೆಂಟೀನಾ ಆಟಗಾರ (ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್) ಕಾಲು ತಾಗಿಸಿ ಬೀಳಿಸಿದರೂ ರೆಫರಿ ಪೆನಾಲ್ಟಿ ನೀಡಲಿಲ್ಲ ಮತ್ತು VAR ಪರಿಶೀಲನೆಯನ್ನೂ ಮಾಡಲಿಲ್ಲ. ಇದೇ ತಿರುವು ಅರ್ಜೆಂಟೀನಾ ತಂಡದ ವಿನ್ನಿಂಗ್ ಕೌಂಟರ್-ಅಟ್ಯಾಕ್ ಗೋಲು ಗಳಿಸಲು ಕಾರಣವಾಯಿತು. ಮೇಲ್ನೋಟಕ್ಕೆ ಈಜಿಪ್ಟ್ ಗೋಲು ಗಳಿಸಿದಾಗ ರೆಫರಿ ಫೌಲ್ ನೀಡಿದ ಮಾದರಿಯಲ್ಲೇ ಅರ್ಜೆಂಟೀನಾ ಆಟಗಾರ ಕೂಡ ಫೌಲ್ ಮಾಡಿದ್ದರು. ಇದಾಗ್ಯೂ ಕನಿಷ್ಠ VAR ಪರಿಶೀಲಿಸಲು ಕೂಡ ರೆಫರಿ ಮುಂದಾಗದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
  • ರೆಫರಿ ಜಾಣ ಕುರುಡು: ಇಡೀ ಪಂದ್ಯದುದ್ದಕ್ಕೂ ಅರ್ಜೆಂಟೀನಾ ಆಟಗಾರರು ಹಲವು ಆಕ್ರಮಣಕಾರಿ ಟ್ಯಾಕಲ್‌ಗಳನ್ನು, ಫೌಲ್​ಗಳನ್ನು ಮಾಡಿದರೂ ಮುಖ್ಯ ರೆಫರಿ ಅವರಿಗೆ ಕೇವಲ ಬಾಯಿಮಾತಿನ ಎಚ್ಚರಿಕೆ ನೀಡಿ ಬಿಟ್ಟರೇ ಹೊರತು ಯಾವುದೇ ಯೆಲ್ಲೋ ಕಾರ್ಡ್ ತೋರಿಸಲಿಲ್ಲ. ಅತ್ತ ಈಜಿಪ್ಟ್​ ಆಟಗಾರರು ಮಾಡಿದ ಸಣ್ಣ ಪುಟ್ಟ ತಪ್ಪುಗಳಿಗೆ ರೆಫರಿ ಯೆಲ್ಲೋ ಎತ್ತಿ ಹಿಡಿದಿದ್ದರು. ಅಲ್ಲದೆ ಹಲವು ಬಾರಿ ಈಜಿಪ್ಟ್ ಆಟಗಾರರಿಗೆ ವಾರ್ನಿಂಗ್ ನೀಡಿ, ಒತ್ತಡ ಹೇರಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
  • ಅಧಿಕೃತ ದೂರು: ಪಂದ್ಯ ಮುಗಿದ ತಕ್ಷಣ ಈಜಿಪ್ಟ್ ಕೋಚ್ ಹೊಸಾಮ್ ಹಸ್ಸನ್, “ಈ ವಿಶ್ವಕಪ್ ಅನ್ನು ಅರ್ಜೆಂಟೀನಾ ಪರವಾಗಿಯೇ ನಿರ್ದೇಶಿಸಲಾಗಿದೆ, ಮೆಸ್ಸಿಯನ್ನು ಉಳಿಸಿಕೊಳ್ಳಲು ರೆಫರಿಗಳ ಮೇಲೆ ಒತ್ತಡವಿತ್ತು” ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ಈಜಿಪ್ಟ್ ಫುಟ್‌ಬಾಲ್ ಫೆಡರೇಶನ್ ಫಿಫಾಗೆ (FIFA)  ಈ ಬಗ್ಗೆ ಅಧಿಕೃತ ದೂರು ನೀಡಿದೆ.

ಅರ್ಜೆಂಟೀನಾ vs ಕೇಪ್ ವರ್ಡೆ (ರೌಂಡ್ ಆಫ್ 32):

ಈ ಪಂದ್ಯದಲ್ಲಿ ಕೇಪ್ ವರ್ಡೆ ಆಟಗಾರರಿಗೆ ಸಿಗಬೇಕಾಗಿದ್ದ ಸ್ಪಷ್ಟ ಪೆನಾಲ್ಟಿ ಅವಕಾಶವನ್ನು ರೆಫರಿ ನಿರಾಕರಿಸಿದರು. ಅಲ್ಲದೆ, ಅರ್ಜೆಂಟೀನಾ ಆಟಗಾರರ ಆಕ್ರಮಣಕಾರಿ ಟ್ಯಾಕಲ್‌ಗಳಿಗೆ ರೆಫರಿಗಳು ಕಟ್ಟುನಿಟ್ಟಾದ ಕಾರ್ಡ್‌ಗಳನ್ನು ನೀಡದೆ ಮೃದು ಧೋರಣೆ ತಳೆದರು ಎಂಬ ಆರೋಪ ಕೇಳಿಬಂದಿತ್ತು.

  •  ಸಿದ್ಧಗೊಳ್ಳುವ ಮುನ್ನವೇ ವಿಸಲ್ ಊದಿದ ರೆಫರಿ: ಈ ಪಂದ್ಯದ 72ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಡಿ-ಬಾಕ್ಸ್ ಹತ್ತಿರ ಅತ್ಯಂತ ಅಪಾಯಕಾರಿ ಜಾಗದಲ್ಲಿ ಒಂದು ಫ್ರೀ ಕಿಕ್ ಲಭಿಸಿತು. ಕೇಪ್ ವರ್ಡೆಯ ಆಟಗಾರರು ರೆಫರಿಯತ್ತ ನೋಡುತ್ತಾ ತಮ್ಮ ರಕ್ಷಣಾತ್ಮಕ ಗೋಡೆಯನ್ನು ಜೋಡಿಸುತ್ತಿದ್ದರು. ಗೋಲ್‌ಕೀಪರ್ ವೊಝಿನ್ಹಾ ಅವರು ತಮ್ಮ ಸಹ ಆಟಗಾರರಿಗೆ ಸರಿಯಾಗಿ ನಿಲ್ಲುವಂತೆ ಕೂಗುತ್ತಿದ್ದರು. ಈ ಹಂತದಲ್ಲಿ ಗೋಲ್‌ಕೀಪರ್ ಮತ್ತು ಡಿಫೆಂಡರ್‌ಗಳು ಚೆಂಡಿನ ಕಡೆಗೆ ಗಮನ ಹರಿಸಿರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ರೆಫರಿ ವಿಸಲ್ ಊದಿ ಮೆಸ್ಸಿಗೆ ಕಿಕ್ ಮಾಡಲು ಅನುಮತಿ ನೀಡಿದರು. ರೆಫರಿಯ ಈ ನಿರ್ಧಾರಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು.
  • ಕೈಕೊಟ್ಟ ರೆಫರಿ: ಪಂದ್ಯದ ಹೆಚ್ಚುವರಿ ಸಮಯದ ಕೊನೆಯ ಕ್ಷಣಗಳಲ್ಲಿ (97ನೇ ನಿಮಿಷದಲ್ಲಿ) ಬಾಕ್ಸ್ ಒಳಗೆ ಕೇಪ್ ವರ್ಡೆ ಆಟಗಾರನ ಮೇಲೆ ಅರ್ಜೆಂಟೀನಾದ ಡಿಫೆಂಡರ್ ಮಾಡಿದ ಫೌಲ್‌ಗೆ ರೆಫರಿ ಪೆನಾಲ್ಟಿ ನೀಡಲಿಲ್ಲ.
  • VAR ನಿರ್ಧಾರ: ನಿರ್ಣಾಯಕ ಹಂತದಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಸಹ ಮೈದಾನದ ರೆಫರಿ ನಿರ್ಧಾರವನ್ನೇ ಎತ್ತಿಹಿಡಿದು ಪೆನಾಲ್ಟಿ ನಿರಾಕರಿಸಿತು. ಇದು ಇಡೀ ಫುಟ್‌ಬಾಲ್ ಜಗತ್ತಿನಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಯಿತು.
  • ಸಮಬಲಕ್ಕೆ ಚಾನ್ಸ್​: ಆ ಪೆನಾಲ್ಟಿ ನೀಡಿದ್ದರೆ ಅರ್ಜೆಂಟೀನಾ ವಿರುದ್ಧ ಕೇಪ್​ ವರ್ಡೆ ತಂಡವು 3-3 ಅಂತರದಿಂದ ಸಮಬಲ ಸಾಧಿಸಲು ಅವಕಾಶವಿತ್ತು. ಆದರೆ ಅಂತಿಮ ಹಂತದಲ್ಲಿ ರೆಫರಿ ವಹಿಸಿದ ಜಾಣ ಮೌನದಿಂದಾಗಿ ಕೇಪ್ ವರ್ಡೆ ತಂಡವು ಹೊರಬೀಳುವಂತೆ ಮಾಡಿತು.
  • ಅರ್ಜೆಂಟೀನಾ ಪರ ನಿಂತ ರೆಫರಿ: ಅರ್ಜೆಂಟೀನಾದ ಡಿಫೆಂಡರ್ ನಿಕೋಲಸ್ ಟಾಗ್ಲಿಯಾಫಿಕೊ ಅವರು ತಮ್ಮದೇ ತಂಡದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರೊಂದಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಗಾಯಕ್ಕೆ ಪ್ರಥಮ ಚಿಕಿತ್ಸೆ ಪಡೆಯಲು ಮತ್ತು ರಕ್ತದ ಕಲೆಗಳಿದ್ದ ಜೆರ್ಸಿ ಬದಲಾಯಿಸಲು ಅವರು ಮೈದಾನದಿಂದ ಹೊರಗೆ ಹೋಗಬೇಕಿತ್ತು.  ಇತ್ತ ಕೇಪ್ ವರ್ಡೆ ತಂಡವು ಕಾರ್ನರ್ ಕಿಕ್ ಪಡೆಯಲು ಸಿದ್ಧವಾಗುತ್ತಿದ್ದಾಗ, ಕೆನಡಾದ ರೆಫರಿ ಡ್ರೂ ಥಾಮಸ್ ಫಿಶರ್ ಅವರು ಆಟವನ್ನು ಪುನರಾರಂಭಿಸುವ ಮೊದಲೇ ಟಾಗ್ಲಿಯಾಫಿಕೊ ಅವರನ್ನು ನೇರವಾಗಿ ಮೈದಾನದೊಳಗೆ ಸೇರಿಸಿಕೊಂಡರು. ಫಿಫಾ ನಿಯಮಗಳ ಪ್ರಕಾರ, ಗಾಯಗೊಂಡು ಹೊರಹೋದ ಆಟಗಾರನು ಆಟ ಪುನರಾರಂಭಗೊಂಡ ನಂತರವಷ್ಟೇ ರೆಫರಿಯ ಅನುಮತಿ ಪಡೆದು ಮೈದಾನಕ್ಕೆ ಬರಬೇಕು. ಆದರೆ ಇಲ್ಲಿ ಆಟ ಶುರುವಾಗುವ ಮುನ್ನವೇ ಅವಕಾಶ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಅರ್ಜೆಂಟೀನಾ vs ಅಲ್ಜೀರಿಯಾ (ಲೀಗ್ ಹಂತದ ಪಂದ್ಯ):

ಜೂನ್ 16ರಂದು ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅವರು ಅಲ್ಜೀರಿಯಾದ ಆಟಗಾರನ ಮೇಲೆ ಫೌಲ್ ಮಾಡಿದರೂ ರೆಫರಿ ಹಳದಿ ಕಾರ್ಡ್ ತೋರಿಸಲಿಲ್ಲ ಎಂಬ ಸಣ್ಣ ಮಟ್ಟದ ವಿವಾದ ಉಂಟಾಗಿತ್ತು.

    • ಕಾಣದಂತೆ ನಟಿಸಿದ ರೆಫರಿ: ಪಂದ್ಯದ 30ನೇ ನಿಮಿಷದಲ್ಲಿ ಅಲ್ಜೀರಿಯಾ ತಂಡದ ನಾಯಕ ಐಸ್ಸಾ ಮಂಡಿಅವರ ಬಳಿ ಇದ್ದ ಚೆಂಡನ್ನು ಕಸಿದುಕೊಳ್ಳಲು ಲಿಯೋನೆಲ್ ಮೆಸ್ಸಿ ಪ್ರಯತ್ನಿಸಿದರು. ಈ ವೇಳೆ ಮೆಸ್ಸಿ ಅವರ ಬೂಟಿನ ಮೊಳೆಗಳು  ನೇರವಾಗಿ ಐಸ್ಸಾ ಮಂಡಿ ಅವರ ಬಲಗಾಲಿನ ಮಂಡಿ ಹಾಗೂ ಹಿಮ್ಮಡಿಯ ಭಾಗಕ್ಕೆ ಬಲವಾಗಿ ತಗುಲಿದವು. ಹೀಗಾಗಿ ಇದಕ್ಕೆ ಮೆಸ್ಸಿಗೆ ರೆಡ್ ಕಾರ್ಡ್ ನೀಡಬೇಕಿತ್ತು ಎಂಬ ವಾದಗಳು ಕೇಳಿ ಬಂದಿದ್ದವು.
    • ಯೆಲ್ಲೋ ಕಾರ್ಡ್ ನೀಡದ ರೆಫರಿ: ಇದು ಅತ್ಯಂತ ಅಪಾಯಕಾರಿ ಫೌಲ್ ಆಗಿದ್ದರಿಂದ, ನಿಯಮದ ಪ್ರಕಾರ ಮೆಸ್ಸಿಗೆ ರೆಡ್ ಕಾರ್ಡ್​ ನೀಡಿ ಮೈದಾನದಿಂದ ಹೊರಕಳಿಸಬೇಕಿತ್ತು. ಆದರೆ ಕನಿಷ್ಠ ‘ಯೆಲ್ಲೋ ಕಾರ್ಡ್’ ಕೂಡ ನೀಡದೇ ರೆಫರಿ ಜಾಣ ಕುರುಡು ಪ್ರದರ್ಶಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.
    • ದೂರು ದಾಖಲು: ಈ ಬಗ್ಗೆ ಅಲ್ಜೀರಿಯಾ ಫುಟ್​ಬಾಲ್ ಫೆಡರೇಷನ್ ಫಿಫಾಗೆ ದೂರು ದಾಖಲಿಸಿದ್ದು, ರೆಫರಿ ತಾರತಮ್ಯ ಎಸೆಗಿದ್ದಾರೆ ಎಂಬ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರೆಫರಿ ನೇಮಕದ ವಿವಾದ:

ಫ್ರಾನ್ಸ್ ಮತ್ತು ಮೊರಾಕೊ ನಡುವಿನ ಹೈ-ವೋಲ್ಟೇಜ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಫಿಫಾ ಸಂಪೂರ್ಣವಾಗಿ ಅರ್ಜೆಂಟೀನಾದ ರೆಫರಿಗಳ ತಂಡವನ್ನೇ ನೇಮಿಸಿದೆ. 2026ರ ವಿಶ್ವಕಪ್‌ನಲ್ಲಿ ಒಂದೇ ದೇಶದ ಅಧಿಕಾರಿಗಳ ತಂಡಕ್ಕೆ ಸಂಪೂರ್ಣ ಪಂದ್ಯದ ಜವಾಬ್ದಾರಿ ನೀಡಿರುವುದು ಇದೇ ಮೊದಲು. ಇದು ಫ್ರಾನ್ಸ್ ತಂಡದ ಅಭಿಮಾನಿಗಳು ಮತ್ತು ಫುಟ್‌ಬಾಲ್ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಫಿಫಾ ಇತರ ಪ್ರಮುಖ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಅರ್ಜೆಂಟೀನಾದ ರೆಫರಿಗಳ ತಂಡವನ್ನು ನೇಮಿಸಿರುವುದರ ಹಿಂದೆ ರಾಜಕೀಯ ಪ್ರಭಾವವಿದೆ ಎಂದು ಕೆಲವು ಯುರೋಪಿಯನ್ ಮಾಧ್ಯಮಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ.

ಅರ್ಜೆಂಟೀನಾಗಾಗಿ ವಿಶ್ವಕಪ್?

ಫಿಫಾ, ವೀಕ್ಷಕರ ಸಂಖ್ಯೆ ಮತ್ತು ವಾಣಿಜ್ಯ ಲಾಭಕ್ಕಾಗಿ ಅರ್ಜೆಂಟೀನಾ ಪರವಾಗಿ ನಿಂತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.  ಏಕೆಂದರೆ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡವು ಫೈನಲ್ ತಲುಪಿದರೆ ವಿಶ್ವಕಪ್‌ನ ವೀಕ್ಷಕರ ಸಂಖ್ಯೆ ಜಾಗತಿಕವಾಗಿ ಗರಿಷ್ಠ ಮಟ್ಟ ತಲುಪುತ್ತದೆ. ಇದರಿಂದ ಫಿಫಾಗೆ ಪ್ರಸಾರ ಹಕ್ಕುಗಳು  ಮತ್ತು ಪ್ರಾಯೋಜಕತ್ವದಿಂದ ಶತಕೋಟಿ ಡಾಲರ್ ಹೆಚ್ಚುವರಿ ಆದಾಯ ಹರಿದುಬರುತ್ತದೆ.

ಅಧಿಕೃತ ಪ್ರಸಾರಕರು ಮತ್ತು ಪ್ರಾಯೋಜಕರು ಮೆಸ್ಸಿ ಅವರಂತಹ ಜಾಗತಿಕ ಸೂಪರ್‌ಸ್ಟಾರ್ ಟೂರ್ನಿಯ ಕೊನೆಯವರೆಗೂ ಇರಬೇಕೆಂದು ಬಯಸುತ್ತಾರೆ. ಇದೇ ಕಾರಣಕ್ಕೆ ರೆಫರಿಗಳ ಮೇಲೆ ಹಾಗೂ VAR ರೂಮ್ ಮೇಲೆ ಅಗೋಚರ ಒತ್ತಡ ಹೇರಿ, ತೀರ್ಪುಗಳು ಅರ್ಜೆಂಟೀನಾ ಪರ ಬರುವಂತೆ ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ದಾಖಲೆಗಳ ಮೇಲೆ ದಾಖಲೆ… ಎಲ್ಲವೂ ಕಳಪೆ ದಾಖಲೆ!

ಒಟ್ಟಾರೆಯಾಗಿ ಹೇಳುವುದಾದರೆ, 2026ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪಂದ್ಯಗಳ ಸುತ್ತ ಎದ್ದಿರುವ ಈ ‘ಫಿಕ್ಸಿಂಗ್’ ವಿವಾದಗಳು ಮತ್ತು ತಾರತಮ್ಯದ ಗಂಭೀರ ಆರೋಪಗಳು ಜಾಗತಿಕ ಫುಟ್‌ಬಾಲ್ ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿಸಿವೆ. ಫಿಫಾ  ಈ ಎಲ್ಲಾ ಆರೋಪಗಳನ್ನು ಅಧಿಕೃತವಾಗಿ ತಳ್ಳಿಹಾಕಿ, ತನ್ನ ತಂತ್ರಜ್ಞಾನ ಹಾಗೂ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಸಮರ್ಥಿಸಿಕೊಂಡಿದೆ. ಆದಾಗ್ಯೂ, ಮೈದಾನದಲ್ಲಿ ಸೃಷ್ಟಿಯಾಗಿರುವ ಸರಣಿ ವಿವಾದಾತ್ಮಕ ತೀರ್ಪುಗಳನ್ನು ಗಮನಿಸಿದರೆ, ಈ ಬಾರಿಯ ವಿಶ್ವಕಪ್ ಇತಿಹಾಸದ ಪುಟಗಳಲ್ಲಿ ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ರೆಫರಿಗಳ ತಾರತಮ್ಯದ ವಿವಾದಗಳಿಂದಲೂ ದೀರ್ಘಕಾಲ ನೆನಪಿನಲ್ಲಿ ಉಳಿಯಲಿದೆ ಎಂಬುದಂತೂ ಸತ್ಯ.

 

Follow Us