ಯುವಕರ ನಿದ್ದೆ ಕೆಡಿಸಿದ್ದ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ನ ಆ್ಯಪ್ ಸ್ಟೋರ್‌ನಿಂದ ಕಣ್ಮರೆಯಾಗಿದೆ. ಗುರುವಾರ ರಾತ್ರಿ ಈ ಎರಡೂ ಆ್ಯಪ್ ಸ್ಟೋರ್‌ನಿಂದ ಪ್ರಸಿದ್ಧ ಗೇಮ್ ಅನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೆಕ್ ಗೇಂಟ್ಸ್ ವರದಿ ಮಾಡಿದೆ. ಆದರೆ, ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಈಗಾಗಲೇ ಈ ಗೇಮ್ ಅನ್ನು ಇನ್ಸ್ಟಾಲ್ ಮಾಡಿ ಆಡುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗಿದೆ.
ಗೇಮ್ ಡೆವಲಪಿಂಗ್ ಕಂಪನಿ ಕ್ರಾಫ್ಟನ್ ಈ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು ಭಾರತಕ್ಕೆ ಪರಿಚಯಿಸಿತು. ದೇಶದಲ್ಲಿ ಪಬ್ಜಿ ನಿಷೇಧವಾದ ಬಳಿಕ ಹುಟ್ಟುಕೊಂಡ ನೂತನ ವರ್ಷನ್ ಇದಾಗಿದೆ. ಜುಲೈ 2, 2021 ರಂದು ಇದು ಭಾರತದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಯಿತು.
“ನಮಗೆ ಬಂದ ಆದೇಶದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಕೆಲ ಡೆವಲಪರ್‌ಗೆ ಸೂಚನೆಯನ್ನು ಕೂಡ ನೀಡಿದ್ದೇವೆ ಮತ್ತು ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ,” ಎಂದು ಗೂಗಲ್ ವಕ್ತಾರರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಆ್ಯಪಲ್ ಕೂಡ ತನ್ನ ಆ್ಪ್ಯ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ. ಆದರೆ, ಕ್ರಾಫ್ಟನ್ ಇನ್ನೂ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲಿಲ್ಲ.
ಈ ತಿಂಗಳ ಆರಂಭದಲ್ಲಿ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ನಾವು 100 ಮಿಲಿಯನ್ ಬಳಕೆದಾರರನ್ನು ತಲುಪಿದ್ದೇವೆ ಎಂಬ ಮಾಹಿತಿ ನೀಡಿತ್ತು. ಕಳೆದ ಒಂದು ವರ್ಷದಿಂದ ಭಾರತೀಯರು ಅತಿ ಹೆಚ್ಚು ಇಷ್ಟಪಟ್ಟ ಗೇಮ್ ಇದಾಗಿದೆ ಎಂದು ಹೇಳಿತ್ತು. ಕಳೆದ ವರ್ಷ ಈ ಗೇಮ್ ಅನ್ನು ಅಭಿವೃದ್ದಿ ಪಡಿಸಲು ಕ್ರಾಫ್ಟನ್ ಕಂಪನಿ ಸಾಕಷ್ಟು ಹಣ ಸುರಿದಿತ್ತು. ಗೇಮರ್ಗಳಿಗೆ ನೈಜ್ಯ ಅನುಭವವನ್ನ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿತ್ತು. ಆದರೀಗ ಪ್ರಸಿದ್ಧ ಗೇಮ್ ಗೂಗಲ್ ಪ್ಲೇ ಸ್ಟೋರ್‌ನಿಂದ ಮತ್ತು ಆ್ಯಪಲ್ ಸ್ಟೋರ್‌ನಿಂದ ನಿಷೇಧವಾಗಿದೆ.
Published On - 12:15 pm, Fri, 29 July 22