iPhone 15: ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತ ಬೆಂಗಳೂರಿಗರು
ಆ್ಯಪಲ್ ಐಫೋನ್ 15 ಸರಣಿ ಶುಕ್ರವಾರ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಸರಣಿಯ ಐಫೋನ್ ಖರೀದಿಸಲು ಜನರು ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತಿರುವ ದೃಶ್ಯ ಕಂಡುಬಂದಿದೆ.
ಆ್ಯಪಲ್ ನೂತನ ಸರಣಿಯ ಐಫೋನ್ ಇಂದಿನಿಂದ ದೇಶದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಭ್ಯವಾಗುತ್ತಿದೆ. ಹೊಸ ಸರಣಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದೆ. ನೂತನ ಐಫೋನ್ ಆ್ಯಪಲ್ ಸ್ಟೋರ್ ಮಾತ್ರವಲ್ಲದೇ, ಆನ್ಲೈನ್ನಲ್ಲೂ ದೊರೆಯುತ್ತಿದೆ. ಆದರೆ, ಹೊಸ ಸರಣಿಯ ಫೋನ್ಗಳನ್ನು ಕೊಳ್ಳಲು ಶುಕ್ರವಾರ ಆ್ಯಪಲ್ ಸ್ಟೋರ್ ಮುಂದೆ ಜನಸಂದಣಿ ಕಂಡುಬಂದಿದೆ.
ಬೆಂಗಳೂರಿನ ಆ್ಯಪಲ್ ಸ್ಟೋರ್ಗಳಲ್ಲಿ ಫುಲ್ ರಶ್
ನೂತನ ಐಫೋನ್ 15 ಸರಣಿ ಖರೀದಿಗೆ ಜನರು ಬೆಂಗಳೂರಿನಲ್ಲಿ ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತಿದ್ದಾರೆ. ಆ್ಯಪಲ್ ಭಾರತದ ಮುಂಬೈ ಮತ್ತು ನವದೆಹಲಿಯಲ್ಲಿ ಅಧಿಕೃತ ಮಾರಾಟ ಮಳಿಗೆ ಹೊಂದಿದೆ. ಈ ಸ್ಟೋರ್ಗಳ ಮುಂಭಾಗದಲ್ಲೂ ಭಾರೀ ಜನಸಂದಣಿ ಕಂಡುಬಂದಿದೆ.
ಬೆಂಗಳೂರಿನಲ್ಲಿ ಆ್ಯಪಲ್ ಪ್ರೀಮಿಯಂ ರಿಸೆಲ್ಲರ್ ಮೂಲಕ ಆ್ಯಪಲ್ ಐಫೋನ್ ಮತ್ತು ಇತರ ಉತ್ಪನ್ನಗಳು ಮಾರಾಟವಾಗುತ್ತಿದೆ. ನೂತನ ಐಫೋನ್ ಅನ್ನು ಮೊದಲ ದಿನವೇ ಖರೀದಿಸಬೇಕು ಎಂಬ ಉತ್ಸಾಹದಲ್ಲಿ ಬೆಂಗಳೂರಿನ ಜನರು ಆ್ಯಪಲ್ ಸ್ಟೋರ್ ಮುಂಭಾಗದಲ್ಲಿ ಕ್ಯೂ ನಿಂತು ಖರೀದಿಸಿದ್ದಾರೆ. ಜತೆಗೆ ಹೊಸ ಐಫೋನ್ ನೋಡುವ ತವಕದಲ್ಲಿ ಆ್ಯಪಲ್ ಸ್ಟೋರ್ಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ.
ತುಂಬಿ ತುಳುಕಿದ ಆ್ಯಪಲ್ ಸ್ಟೋರ್
ಆ್ಯಪಲ್ ಐಫೋನ್ ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ, ಜನರನ್ನು ನಿಯಂತ್ರಿಸಲು ಸ್ಟೋರ್ ಸಿಬ್ಬಂದಿ ಪರದಾಡುವಂತಾಯಿತು. ಆ್ಯಪಲ್ ಸ್ಟೋರ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಹೊಸ ಐಫೋನ್ ಖರೀದಿ ಕ್ರೇಜ್ನಿಂದಾಗಿ ಜನರು ಸ್ಟೋರ್ಗಳಲ್ಲಿ ಹಲವು ತಾಸು ಸರದಿಯಲ್ಲಿ ಕಾಯುವಂತಾಯಯಿತು.
₹79,990 ಆರಂಭಿಕ ದರ ಹೊಂದಿರುವ ಐಫೋನ್ 15
ದೇಶದಲ್ಲಿ ನೂತನ ಸರಣಿಯ ಐಫೋನ್ 15- 128GB- ₹79,900, ಐಫೋನ್ 15- 256GB- ₹89,900, ಐಫೋನ್ 15- 512GB- ₹1,09,900, ಐಫೋನ್ 15 ಪ್ಲಸ್- 128GB – ₹89,900, ಐಫೋನ್ 15 ಪ್ಲಸ್- 256GB – ₹99,900 ನಿಗದಿ ಮಾಡಲಾಗಿದೆ.
ಇನ್ನು ಐಫೋನ್ 15 ಪ್ರೊ 128GB ಸ್ಟೋರೇಜ್ ಮಾಡೆಲ್‌ಗೆ ₹1,34,900, 256GB ಗೆ ₹1,44,900, 512GB ಗೆ ₹1,64,900 ಮತ್ತು 1TB ಮಾದರಿಗೆ ₹1,84,900 ರೂ. ಇದೆ. ಐಫೋನ್ 15 ಪ್ರೊ ಮ್ಯಾಕ್ಸ್ ಬೇಸ್ 256GB ಸ್ಟೋರೇಜ್ ಮಾಡೆಲ್‌ಗೆ ₹1,59,900, 512GB ಗೆ ₹1,79,900 ಮತ್ತು 1TB ಆವೃತ್ತಿಗೆ ₹1,99,900 ನಿಗದಿ ಮಾಡಲಾಗಿದೆ. ಎಚ್ಡಿಎಫ್ಸಿ ಕಾರ್ಡ್ ಬಳಕೆಗೆ ₹6,000 ವರೆಗೆ ಡಿಸ್ಕೌಂಟ್, ಇಎಂಐ ಕೊಡುಗೆ ಲಭ್ಯವಿದೆ. ಜತೆಗೆ ಆ್ಯಪಲ್ ಸ್ಟೋರ್ ಮೂಲಕ ಎಕ್ಸ್ಚೇಂಜ್ ಪ್ರಯೋಜನ ಪಡೆಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 22 September 23