ಮಂಗಳನ ಮೇಲೆ ಹೆಲಿಕಾಪ್ಟರ್ ಹಾರಿಸಲು ಮುಂದಾದ ನಾಸಾ ವಿಜ್ಞಾನಿಗಳ ಪಡೆ
ಕಳೆದ ಏಪ್ರಿಲ್ 11ರಂದೇ ಇದು ಕೈಗೂಡಬೇಕಿತ್ತಾದರೂ ಸಮಯ ಹೊಂದಾಣಿಕೆಯಲ್ಲಿ ತುಸು ಏರುಪೇರಾದ ಕಾರಣ ಇಂದು ಪ್ರಯೋಗ ನಡೆಯಲಿದೆ. ಒಂದು ವೇಳೆ ಈ ಹೆಲಿಕಾಪ್ಟರ್ ಹಾರಾಟ ಯಶಸ್ವಿಯಾದಲ್ಲಿ ಮಂಗಳನ ಮೇಲೆ ಇಂಥದ್ದೊಂದು ಪ್ರಯೋಗ ಮಾಡಿ ಯಶಸ್ಸು ಪಡೆದ ಮೊದಲಿಗರು ಎಂಬ ಹೆಗ್ಗಳಿಕೆಗೆ ನಾಸಾ ವಿಜ್ಞಾನಿಗಳು ಪಾತ್ರರಾಗಲಿದ್ದಾರೆ.
ಮಂಗಳನ ಮೇಲೆ ನಿರಂತರ ಅಧ್ಯಯನ ನಡೆಸುವಲ್ಲಿ ನಿರತರಾಗಿರುವ ವಿಜ್ಞಾನಿಗಳು ಪ್ರತಿ ಬಾರಿಯೂ ಒಂದಲ್ಲೊಂದು ಹೊಸ ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಕಳೆದ ಆರು ವರ್ಷಗಳಿಂದಲೂ ಕೆಂಪು ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಿಸಬೇಕೆಂಬ ತವಕದಲ್ಲಿರುವ ನಾಸಾ ವಿಜ್ಞಾನಿಗಳ ಪಡೆ ಇದೀಗ ಕಾರ್ಯಸಾಧನೆಗೆ ಮುಂದಾಗಿದ್ದು, ತಾವೇ ಅಭಿವೃದ್ಧಿಪಡಿಸಿದ ಹೆಲಿಕಾಪ್ಟರನ್ನು ಮಂಗಳನ ಮೇಲೆ ಹಾರಿಸಲು ಸಜ್ಜಾಗಿದ್ದಾರೆ. ಇದಕ್ಕೆ ಮಾರ್ಸ್ ಹೆಲಿಕಾಪ್ಟರ್ ಇನ್ಜೆನ್ಯುಟಿ ಎಂದು ಹೆಸರಿಸಲಾಗಿದ್ದು, ಭಾರತೀಯ ಕಾಲಮಾನದಲ್ಲಿ ಇಂದು (ಏಪ್ರಿಲ್ 19) ಮಧ್ಯಾಹ್ನ 3.45ರ ಸುಮಾರಿಗೆ ವಿಜ್ಞಾನಿಗಳ ಬಹುದಿನದ ಈ ಕನಸು ಮಂಗಳನ ಮೇಲೆ ರೆಕ್ಕೆ ಬಿಚ್ಚಲಿದೆ.
ಅತ್ಯಂತ ಹಗುರವಾಗಿರುವ ರೋಬೋಟ್ ತಂತ್ರಜ್ಞಾನದ ಈ ಹೆಲಿಕಾಪ್ಟರ್ ಹಾರಾಟದ ಬಗ್ಗೆ ವಿಜ್ಞಾನಿಗಳು ಬಹು ಕುತೂಹಲಿಗಳಾಗಿದ್ದು, ತಮ್ಮ ಪ್ರಯತ್ನ ಯಶಸ್ವಿಯಾಗಲೆಂದು ಬಯಸಿ ಕಾದುಕುಳಿತಿದ್ದಾರೆ. ಕಳೆದ ಏಪ್ರಿಲ್ 11ರಂದೇ ಇದು ಕೈಗೂಡಬೇಕಿತ್ತಾದರೂ ಸಮಯ ಹೊಂದಾಣಿಕೆಯಲ್ಲಿ ತುಸು ಏರುಪೇರಾದ ಕಾರಣ ಇಂದು ಪ್ರಯೋಗ ನಡೆಯಲಿದೆ. ಒಂದು ವೇಳೆ ಈ ಹೆಲಿಕಾಪ್ಟರ್ ಹಾರಾಟ ಯಶಸ್ವಿಯಾದಲ್ಲಿ ಮಂಗಳನ ಮೇಲೆ ಇಂಥದ್ದೊಂದು ಪ್ರಯೋಗ ಮಾಡಿ ಯಶಸ್ಸು ಪಡೆದ ಮೊದಲಿಗರು ಎಂಬ ಹೆಗ್ಗಳಿಕೆಗೆ ನಾಸಾ ವಿಜ್ಞಾನಿಗಳು ಪಾತ್ರರಾಗಲಿದ್ದಾರೆ.
ಹೆಲಿಕಾಪ್ಟರ್ ಹಾರಾಟ ಹೇಗೆ? ಚಲಾಯಿಸುವವರು ಯಾರು? ಹೆಲಿಕಾಪ್ಟರ್ ಎಂದಾಕ್ಷಣ ನಮಗೆ ದೊಡ್ಡ ರೆಕ್ಕೆಗಳನ್ನು ತಿರುಗಿಸುತ್ತಾ ದೂಳೆಬ್ಬಿಸುವ ದೈತ್ಯಕಾಯ ನೆನಪಾಗುತ್ತದೆ. ಆದರೆ, ಭೂಮಿ ಮೇಲೆ ಹಾರಾಟ ನಡೆಸುವ ಅಷ್ಟು ದೊಡ್ಡ ಹೆಲಿಕಾಪ್ಟರ್ ಅನ್ನು ಮಂಗಳನಿಗೆ ಕಳುಹಿಸುವುದು ಕಷ್ಟಸಾಧ್ಯವಾಗಿರುವುದರಿಂದ ಅಲ್ಲಿಗಾಗಿಯೇ ಅತ್ಯಂತ ಹಗುರವಾಗಿರುವ ವಿಶೇಷ ಹೆಲಿಕಾಪ್ಟರನ್ನು ನಾಸಾ ವಿಜ್ಞಾನಿಗಳು ತಯಾರಿಸಿದ್ದಾರೆ. ಭೂಮಿಯಿಂದಲೇ ನಿಯಂತ್ರಿಸಲ್ಪಡುವ ಈ ಹೆಲಿಕಾಪ್ಟರ್ ಮಂಗಳನ ವಾತಾವರಣದಲ್ಲಿ ಹೇಗೆ ಹಾರಲಿದೆ ಎನ್ನುವುದಕ್ಕೆ ಸ್ವತಃ ವಿಜ್ಞಾನಿಗಳೂ ಕುತೂಹಲಿಗಳಾಗಿದ್ದು, ಈ ಪ್ರಯತ್ನ ವಿಫಲವಾದರೂ ಕೈಬಿಡುವುದಿಲ್ಲ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಮಾರ್ಸ್ ಪರ್ಸಿವರೆನ್ಸ್ ರೋವರ್ ಕಳುಹಿಸಿದೆ ನೋಡಿ.. ಚೊಚ್ಚಲ ಬಾಟ್ ಸೆಲ್ಫಿ! ನಾಸಾ ಬಿಡುಗಡೆಗೊಳಿಸಿದೆ ಆಕಾಶಗಂಗೆಯ ಅಮೋಘ ಚಿತ್ರ; ನೆಟ್ಟಿಗರು ಫುಲ್ ಫಿದಾ
(Mars Helicopter Ingenuity is ready for its first Flight)