Perseverance Rover Video | ನಾಸಾದಿಂದ ವಿಡಿಯೋ ಬಿಡುಗಡೆ, ದೂಳೆಬ್ಬಿಸಿ ಮಂಗಳನಿಗೆ ಮುತ್ತಿಕ್ಕುವ ಕೊನೆಯ ಕ್ಷಣಗಳು ಅದ್ಭುತದಲ್ಲಿ ಅದ್ಭುತ! ಮಾನವ ಜನ್ಮ ಸಾರ್ಥಕ

Mars Mission: ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ಕೂಡ ನಾಸಾ ಹೊಂದಿದೆ.

Perseverance Rover Video | ನಾಸಾದಿಂದ ವಿಡಿಯೋ ಬಿಡುಗಡೆ, ದೂಳೆಬ್ಬಿಸಿ ಮಂಗಳನಿಗೆ ಮುತ್ತಿಕ್ಕುವ ಕೊನೆಯ ಕ್ಷಣಗಳು ಅದ್ಭುತದಲ್ಲಿ ಅದ್ಭುತ! ಮಾನವ ಜನ್ಮ ಸಾರ್ಥಕ
ನಾಸಾ ಬಿಡುಗಡೆ ಮಾಡಿದ ವಿಡಿಯೋ
Follow us
Skanda
|

Updated on:Feb 26, 2021 | 3:17 PM

ಕಳೆದ ಜುಲೈ 30ರಂದು ಬಾಹ್ಯಾಕಾಶಕ್ಕೆ ಜಿಗಿದಿದ್ದ ನಾಸಾ ನೌಕೆ ರೋವರ್, 203 ದಿನಗಳ ಸುದೀರ್ಘ ಪಯಣದ ಬಳಿಕ 472 ಮಿಲಿಯನ್​ ಕಿ.ಮೀ ಆಚೆಗಿನ ಮಂಗಳ ಗ್ರಹವನ್ನು ಫೆಬ್ರವರಿ 19ರಂದು ಯಶಸ್ವಿಯಾಗಿ ಸ್ಪರ್ಶಿಸಿದೆ. ಮಂಗಳನಲ್ಲಿ ಇಳಿದ ನಂತರ ನೌಕೆ ಕಳುಹಿಸಿದ್ದ ಅನೇಕ ಫೋಟೋಗಳು ವೈರಲ್ ಆಗಿದ್ದವು. ಇದೀಗ ನಾಸಾ ಮಂಗಳನಲ್ಲಿ ನೌಕೆ ಇಳಿಯುತ್ತಿರುವ ವಿಡಿಯೋವನ್ನೂ ಬಿಡುಗಡೆ ಮಾಡಿದ್ದು ಜನರು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ವಿಡಿಯೋದಲ್ಲಿ ನೌಕೆ ಮಂಗಳನನ್ನು ಸಮೀಪಿಸುತ್ತಿರುವ ದೃಶ್ಯ ಅತ್ಯಂತ ಸ್ಪಷ್ಟವಾಗಿ ಸೆರೆಯಾಗಿದ್ದು, ಕ್ಷಣಕ್ಷಣಕ್ಕೂ ವಿಜ್ಞಾನಿಗಳು ಅದರ ವಿವರಣೆ ನೀಡುವುದು ಕೇಳಿ ಬರುತ್ತದೆ. ಮಂಗಳನಿಂದ ಇನ್ನೂ ಎಷ್ಟು ದೂರದಲ್ಲಿದೆ? ಎಷ್ಟು ವೇಗವಾಗಿ ಗ್ರಹದತ್ತ ಚಲಿಸುತ್ತಿದೆ? ಸದ್ಯದ ಪರಿಸ್ಥಿತಿ ಏನು? ನೌಕೆಯ ಭಾಗಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ? ಏನೆಲ್ಲಾ ಬದಲಾವಣೆ ಆಗುತ್ತಿದೆ? ಮಂಗಳನಿಗೆ ಮುತ್ತಿಕ್ಕುವ ಕೊನೆಯ ಕ್ಱಣಗಳಲ್ಲಿ ಹೇಗೆ ಧೂಳೆಬ್ಬಿಸಿ ತನ್ನ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತದೆ ಎಂಬಂತಹ ಪ್ರತಿಯೊಂದು ವಿವರಗಳನ್ನೂ ನೀಡುತ್ತಾ ಹೋಗಿದ್ದಾರೆ.

ಕೊನೆಯಲ್ಲಿ ನೌಕೆಯು ಮಂಗಳನ ಅಂಗಳಕ್ಕೆ ಅತ್ಯಂತ ಸಮೀಪ ಆಗುತ್ತಿರುವಂತೆಯೇ ನಾಸಾ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸುತ್ತಾ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲು ಕಾಯುತ್ತಿರುತ್ತಾರೆ. ನೋಡನೋಡುತ್ತಲೇ ಮಂಗಳನ ಮೇಲೆ ಇಳಿಯುವ ನೌಕೆ, ದೂಳೆಬ್ಬಿಸುತ್ತದೆ. ಮಂಗಳನ ಮೇಲೆ ನೌಕೆ ಇಳಿದ ಕೂಡಲೇ ಅಲ್ಲಿರುವ ದೂಳಿನ ಕಣಗಳು ಮೇಲೇಳುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತ್ತ ರೋವರ್​ ಯಶಸ್ವಿಯಾಗಿ ಮಂಗಳನನ್ನು ಸ್ಪರ್ಶಿಸುತ್ತಿದ್ದಂತೆಯೇ ವಿಜ್ಞಾನಿಗಳ ಸಂತಸ ಮುಗಿಲುಮುಟ್ಟುತ್ತೆ. ತಮ್ಮ ಯೋಜನೆಯ ಸಫಲತೆಯನ್ನು ಎಲ್ಲರೂ ಆ ಕ್ಷಣದಲ್ಲಿ ಸಂಭ್ರಮಿಸುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ನಾಸಾ ಈ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದು, ಬಿಡುಗಡೆಯಾದ 11 ಗಂಟೆಯಲ್ಲಿ ಸುಮಾರು 66 ಸಾವಿರಕ್ಕೂ ಅಧಿಕ ರೀಟ್ವೀಟ್​ಗಳಾಗಿವೆ. 1 ಲಕ್ಷ 50 ಸಾವಿರಕ್ಕೂ ಅಧಿಕ ಮಂದಿ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಿಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ಕೂಡ ನಾಸಾ ಹೊಂದಿದೆ. ಇನ್ನು ನೌಕೆ ಮಂಗಳನನ್ನು ಸ್ಪರ್ಶಿಸುವ ವೇಳೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಾಸಾದ ಸಾಧನೆಯ ಕ್ಷಣಗಳನ್ನು ವೀಕ್ಷಿಸಿದ್ದರು.

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಜೀವ ಕುರುಹು ಹುಡುಕುವ ನಾಸಾ ತಂಡದಲ್ಲಿ ಭಾರತ ಸಂಜಾತೆ ಡಾ. ಸ್ವಾತಿ ಮೋಹನ್

ಇದನ್ನೂ ನೋಡಿ : ಮಂಗಳನ ಅಂಗಳದಲ್ಲಿ ಹೆಜ್ಜೆಯೂರಿದ ನಾಸಾ ನೌಕೆ; ತಜ್ಞರ ತಂಡದಲ್ಲಿ ಭಾರತೀಯ ಮೂಲದ ಮಹಿಳೆ!

Published On - 12:52 pm, Tue, 23 February 21