ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡ ಬಳಿಕ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬದಲಾವಣೆಗಳು ಆಗುತ್ತಿದೆ. ಹೊಸ ಹೊಸ ಫೀಚರ್ಗಳಿಂದ ಹಿಡಿದು ಉದ್ಯೋಗಿಗಳ ವಜಾದ ವರೆಗೆ ಅನೇಕ ಕಂಪನಿಗಳು ಟ್ವಿಟ್ಟರ್ ದಾರಿಯನ್ನೇ ಹಿಡಿಯುತ್ತಿದೆ. ಟ್ವಿಟ್ಟರ್‌ನಲ್ಲಿ ಕೆಲವು ಸೇವೆಗಳನ್ನು ಪಡೆಯಬೇಕು ಎಂದರೆ ಪಾವತಿ ಮಾಡಬೇಕು ಎಂಬ ನಿರ್ಧಾರ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅದರಲ್ಲೂ ಬ್ಲೂ ಟಿಕ್ ಚಂದಾದಾರಿಕೆ ಮಾತ್ರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇದೀಗ ಇದೇ ಬ್ಲೂ ಟಿಕ್ ವಿಚಾರ ಮೆಟಾ (Meta) ಕಂಪನಿಯಲ್ಲೂ ಸದ್ದು ಮಾಡುತ್ತಿದೆ. ಟ್ವಿಟರ್ ಅನ್ನೇ ಅನುಸರಿಸಿರುವ ಮೆಟಾ ಈಗ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ (Blue Tick) ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೆಟಾ ವೆರಿಫೈಡ್ ಅನ್ನು ಶುರು ಮಾಡಲಿದ್ದದೇವೆ ಎಂದು ಹೇಳಿದ್ದಾರೆ. ಇದು ಒಬ್ಬರ ಖಾತೆಯನ್ನು ದೃಢೀಕರಿಸಲು ತಿಂಗಳಿಗೆ $11.99 ರಿಂದ ಪ್ರಾರಂಭವಾಗುವ ಸೇವೆಯಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 900 ರೂ. ಎನ್ನಬಹುದು. “ಈ ಹೊಸ ಫೀಚರ್ನಿಂದ ನಮ್ಮ ಸೇವೆಗಳನ್ನು ನೀಡುತ್ತೇವೆ. ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸುತ್ತೇವೆ,” ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ್ದಾರೆ.
ಮೆಟಾ ವೆರಿಫೈಡ್ ಮೊದಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಹೊರತರಲಾಗುವುದು ಎಂದು ಮೆಟಾ ಹೇಳಿದೆ. ನಂತರ ಈ ಫೀಚರ್ ಅಮೆರಿಕ ಮತ್ತು ಇತರ ದೇಶಗಳಲ್ಲಿ ಜಾರಿಗೆ ಬರಲಿದೆಯಂತೆ. ಈ ಮೂಲಕ ಹಣ ಪಾವತಿ ಮಾಡಿ ಇನ್‌ಸ್ಟಾಗ್ರಾಮ್ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲಿಸಿದ ಬ್ಯಾಡ್ಜ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೋಸ್ಟ್ ಮಾಡಲಾದ ಯಾವುದೇ ಮಾಹಿತಿಯನ್ನು ಜನರು ಸುಲಭವಾಗಿ ನಂಬಬಹುದಾಗಿದೆ. ಹಾಗೂ ಅವರಿಗೆ ವಿಶೇಷ ಸ್ಥಾನಮಾನ ಸಹ ಸಾಮಾಜಿಕ ವಲಯದಲ್ಲಿ ಇರುತ್ತದೆ.
ಫೆಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಸದ್ಯಕ್ಕೆ ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಬ್ಲೂ ಬ್ಯಾಡ್ಜ್ ಇರುವ ವೆರಿಫೈಡ್ ಅಕೌಂಟ್ ನೀಡಲಾಗುತ್ತಿದ್ದು, ಇನ್ನು ಮುಂದೆ ಟ್ವಿಟ್ವರ್‌ನಂತೆಯೇ ಹಣ ಪಾವತಿಸಿದ ಖಾತೆದಾರರಿಗೆ ಬ್ಲೂ ಟಿಕ್ ನೀಡಲಿದೆ. ಸದ್ಯಕ್ಕೆ ಟ್ವಿಟರ್ ಬ್ಲೂ ಟಿಕ್ ಪಡೆದುಕೊಳ್ಳಲು ತಿಂಗಳಿಗೆ 8 ಡಾಲರ್‌ಗಳನ್ನು ಪಾವತಿಸುವ ಆಯ್ಕೆ ನೀಡಿದೆ.
ಎಲಾನ್ ಮಸ್ಕ್ ಆಗಮನದ ಬಳಿಕ ಟ್ವಿಟ್ಟರ್ ಕ್ಷಿಪ್ರ ಗತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುವಂತಿದೆ. ಟ್ವಿಟ್ಟರ್‌ನಲ್ಲಿ ಪೇಮೆಂಟ್ ಸಿಸ್ಟಂ ಫೀಚರ್ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ವರದಿಗಳ ಪ್ರಕಾರ, ಈ ಆ್ಯಪ್ನಲ್ಲಿ ಕ್ರಿಪ್ಟೋ ಸೇರಿದಂತೆ ಎಲ್ಲಾ ರೀತಿಯ ಕರೆನ್ಸಿಗಳ ವಹಿವಾಟಿಗೂ ಅವಕಾಶ ಇರಲಿದೆ. ಫೈನಾನ್ಷಿಯಲ್ ಟೈಮ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ ಡಾಲರ್, ರೂಪಾಯಿ ಇತ್ಯಾದಿ ಸರ್ಕಾರ ಮಾನ್ಯತೆಯ ಅಧಿಕೃತ ಕರೆನ್ಸಿಗಳ ವಹಿವಾಟಿಗೆ ಆರಂಭದಲ್ಲಿ ಅವಕಾಶ ಕೊಡಲಾಗುತ್ತದೆ. ನಂತರದ ದಿನಗಳಲ್ಲಿ ಕ್ರಿಪ್ಟೋ ಪೇಮೆಂಟ್ನ ಫೀಚರ್ ಕೂಡ ಅಳವಡಿಕೆಯಾಗಬಹುದು ಎನ್ನಲಾಗಿದೆ. ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ ಎಲಾನ್ ಮಸ್ಕ್ ಟ್ವಿಟ್ಟರ್ ಆ್ಯಪ್ನಲ್ಲಿ ಪೇಮೆಂಟ್ ಸಿಸ್ಟಂ ಅಭಿವೃದ್ಧಿಪಡಿಸುವಂತೆ ಡೆವಲಪರುಗಳಿಗೆ ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ತಿಳಿದುಬಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ