Twitter Crypto: ಟ್ವಿಟ್ಟರ್ನಲ್ಲಿ ಹೊಸ ಪೇಮೆಂಟ್ ಸಿಸ್ಟಂ? ಕ್ರಿಪ್ಟೋ ಪಾವತಿಗೂ ಅವಕಾಶ?
Elon Musk- ಟ್ವಿಟ್ಟರ್ನಲ್ಲಿ ಕ್ರಿಪ್ಟೋ ಕರೆನ್ಸಿ ಪಾವತಿಗೆ ಅವಕಾಶ ಇರುವಂತಹ ಪೇಮೆಂಟ್ ಸಿಸ್ಟಂ ಅನ್ನು ರೂಪಿಸಲು ಎಲಾನ್ ಮಸ್ಕ್ ತಮ್ಮ ಆ್ಯಪ್ ಡೆಲವಪರುಗಳಿಗೆ ಸೂಚಿಸಿದ್ದಾರೆ.
ನವದೆಹಲಿ: ಎಲಾನ್ ಮಸ್ಕ್ ಆಗಮನದ ಬಳಿಕ ಟ್ವಿಟ್ಟರ್ ಕ್ಷಿಪ್ರ ಗತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುವಂತಿದೆ. ಟ್ವಿಟ್ಟರ್ನಲ್ಲಿ ಪೇಮೆಂಟ್ ಸಿಸ್ಟಂ (Payment System) ಫೀಚರ್ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ವರದಿಗಳ ಪ್ರಕಾರ ಈ ಆ್ಯಪ್ನಲ್ಲಿ ಕ್ರಿಪ್ಟೋ ಸೇರಿದಂತೆ ಎಲ್ಲಾ ರೀತಿಯ ಕರೆನ್ಸಿಗಳ ವಹಿವಾಟಿಗೂ ಅವಕಾಶ ಇರಲಿದೆ. ಫೈನಾನ್ಷಿಯಲ್ ಟೈಮ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ ಡಾಲರ್, ರೂಪಾಯಿ ಇತ್ಯಾದಿ ಸರ್ಕಾರ ಮಾನ್ಯತೆಯ ಅಧಿಕೃತ ಕರೆನ್ಸಿಗಳ ವಹಿವಾಟಿಗೆ ಆರಂಭದಲ್ಲಿ ಅವಕಾಶ ಕೊಡಲಾಗುತ್ತದೆ. ನಂತರದ ದಿನಗಳಲ್ಲಿ ಕ್ರಿಪ್ಟೋ ಪೇಮೆಂಟ್ನ ಫೀಚರ್ ಕೂಡ ಅಳವಡಿಕೆಯಾಗಬಹುದು ಎನ್ನಲಾಗಿದೆ.
ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ ಎಲಾನ್ ಮಸ್ಕ್ ಟ್ವಿಟ್ಟರ್ ಆ್ಯಪ್ನಲ್ಲಿ ಪೇಮೆಂಟ್ ಸಿಸ್ಟಂ ಅಭಿವೃದ್ಧಿಪಡಿಸುವಂತೆ ಡೆವಲಪರುಗಳಿಗೆ ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ತಿಳಿದುಬಂದಿದೆ.
ವಿಚ್ಯಾಟ್ ಮಾದರಿಯಲ್ಲಿ ಟ್ವಿಟ್ಟರ್?
ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಮಾಡುವ ಸಂದರ್ಭದಲ್ಲೇ ಚೀನಾದ ವಿಚ್ಯಾಟ್ ಮಾದರಿಯಲ್ಲಿ ಆ್ಯಪ್ ಅಭಿವೃದ್ಧಿಪಡಿಸುವ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ವೀಚ್ಯಾಟ್ ಮಾದರಿಯಲ್ಲಿ ಎಕ್ಸ್ ಎಂಬ ಆ್ಯಪ್ ಮಾಡುವುದು ಮಸ್ಕ್ ಕನಸು. ಟ್ವಿಟ್ಟರ್ ಖರೀದಿಸಿದಾಗ ಅದನ್ನೇ ಎಕ್ಸ್ ಆ್ಯಪ್ ಆಗಿ ಮಾರ್ಪಡಿಸುವ ಉದ್ದೇಶ ಮಸ್ಕ್ ಅವರಿಗಿದ್ದಂತಿದೆ. ಅದಕ್ಕೆ ಇಂಬು ಕೊಡುವಂತೆ ಮಸ್ಕ್ ಪ್ರವೇಶವಾದ ಬಳಿಕ ಟ್ವಿಟ್ಟರ್ನಲ್ಲಿ ಬದಲಾವಣೆಗಳ ಮಹಾಪೂರವಾಗಿ ಆಗಿದೆ. ಈ ಪೇಮೆಂಟ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಎಲಾನ್ ಮಸ್ಕ್ ಅವರು ಚೀನಾದ ವೀಚ್ಯಾಟ್ ಆ್ಯಪ್ನ ಅಭಿಮಾನಿಯೇ ಆಗಿದ್ದಾರೆ. ಟ್ವಿಟ್ಟರ್ ಎಂಬುದು ಸರ್ವಕಾರ್ಯಗಳಿಗೆ ಒಂದೇ ಪ್ಲಾಟ್ಫಾರ್ಮ್ ಆಗಬೇಕೆಂಬುದು ಅವರ ಗುರಿ. ಅಂದರೆ ಸೋಷಿಯಲ್ ಮೀಡಿಯಾ ನೆಟ್ವರ್ಕಿಂಗ್ ಮಾತ್ರವಲ್ಲ, ಪೇಮೆಂಟ್, ಗೇಮಿಂಗ್, ಮಾರ್ಕೆಟ್ ಪ್ಲೇಸ್ ಇತ್ಯಾದಿ ಎಲ್ಲ ಫೀಚರ್ಗಳು ಈ ಟ್ವಿಟ್ಟರ್ ಎಕ್ಸ್ ಆ್ಯಪ್ನಲ್ಲಿ ಇರಲಿದೆ.