Poco M3 Pro 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ; 1 ಟಿಬಿ ಸಂಗ್ರಹಣಾ ಸಾಮರ್ಥ್ಯ ಬೆಂಬಲಿಸುವ ಕಡಿಮೆ ಬೆಲೆಯ ಫೋನ್
ಇದರ ಹೆಚ್ಚುಗಾರಿಕೆಯೆಂದರೆ ಸಂಗ್ರಹಣಾ ಸಾಮರ್ಥ್ಯವನ್ನು 1ಟಿಬಿ ತನಕ ವಿಸ್ತರಿಸುವ ಅವಕಾಶ ಇದೆ. ಅಲ್ಲದೇ 5000ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಗೆ ಫಾಸ್ಟ್ ಚಾರ್ಟಿಂಗ್ ಸಹ ಇದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಎರಡು ದಿನಗಳ ತನಕ ಬ್ಯಾಟರಿ ಇರಲಿದೆ ಎಂದು ಪೋಕೋ ಹೇಳಿಕೊಂಡಿದೆ.
ದೆಹಲಿ: ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗ 5ಜಿ ಸಂಚಲನ ಶುರುವಾಗಿದೆ. ಶೀಘ್ರದಲ್ಲಿ 5ಜಿ ಸೇವೆ ಆರಂಭವಾಗುವ ನಿರೀಕ್ಷೆ ಇರುವ ಕಾರಣ ಮೊಬೈಲ್ ತಯಾರಿಕಾ ಕಂಪೆನಿಗಳು ಹೊಸ ಸೌಲಭ್ಯದತ್ತ ಹೆಚ್ಚು ಗಮನ ವಹಿಸುತ್ತಿವೆ. ಕೆಲ ಕಂಪೆನಿಗಳು ಒಂದು ವರ್ಷದ ಹಿಂದೆಯೇ 5ಜಿ ಬೆಂಬಲಿತ ಫೋನ್ಗಳನ್ನು ಪರಿಚಯಿಸಿ ಆಗಿದೆಯಾದರೂ ಈಗ ಮತ್ತಷ್ಟು ಹೊಸತನವನ್ನು ಮೈಗೂಡಿಸಿಕೊಂಡು ಬರುತ್ತಿರುವ ಫೋನ್ಗಳ ದರ್ಬಾರ್ ಜೋರಾಗಿದೆ. ಭಾರತದ ಮಾರುಕಟ್ಟೆಗೆ ತೀರಾ ಇತ್ತೀಚಿನ ಹೆಸರಾದರೂ ಈಗಾಗಲೇ ಮೊಬೈಲ್ ಪ್ರಿಯರ ಮನಸ್ಸಿಗೆ ಲಗ್ಗೆ ಇಟ್ಟಿರುವ ಪೋಕೋ ತನ್ನ ಹೊಸ ಉತ್ಪನ್ನ ಬಿಡುಗಡೆ ಮಾಡಿದೆ. 5ಜಿ ಸೌಲಭ್ಯವನ್ನೊಳಗೊಂಡ Poco M3 Pro 5G (ಪೋಕೋ ಎಂ3 ಪ್ರೋ 5ಜಿ) ಇಂದು (ಜೂನ್ 8) ಬಿಡುಗಡೆಯಾಗಿದೆ.
ಇದು ಪೋಕೋ ಕಂಪೆನಿಯು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ 5ಜಿ ಫೋನ್ ಆಗಿರುವ ಕಾರಣ ನಿರೀಕ್ಷೆ ಹೆಚ್ಚಿದೆ. ಕೆಲವೆಡೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಫೋನ್ ಭಾರತದಲ್ಲಿ ಮೇ ತಿಂಗಳಲ್ಲೇ ತೆರೆಕಾಣಬೇಕಿತ್ತಾದರೂ ಕೊರೊನಾ ಕಾರಣದಿಂದ ತಡವಾಗಿದೆ. ಇದೀಗ ಆನ್ಲೈನ್ ಕಾರ್ಯಕ್ರಮದ ಮುಖಾಂತರ ಪೋಕೋ ಎಂ3 ಪ್ರೋ 5ಜಿ ಮಾರುಕಟ್ಟೆಗೆ ಈಗಷ್ಟೇ ಕಾಲಿಟ್ಟಿದ್ದು, Redmi Note 10 Pro, Redmi Note 10S and Realme 8 Pro ಫೋನ್ಗಳಿಗೆ ತೀವ್ರ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.
ಆ್ಯಂಡ್ರಾಯ್ಡ್ 11 ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಬಂದಿರುವ ಪೋಕೋ ಎಂ3 ಪ್ರೋ 5ಜಿ 5000ಎಂಎಹೆಚ್ ಬ್ಯಾಟರಿ ಹೊಂದಿದೆ. ಮೂರು ಕ್ಯಾಮೆರಾ ಹಾಗೂ ವಿಶಿಷ್ಟ ವಿನ್ಯಾಸದೊಂದಿಗೆ ಆಕರ್ಷಕವಾಗಿ ಕಾಣುವ ಫೋನ್ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದ್ದು, 4ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹಾಗೂ 6ಜಿಬಿ RAM ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದ ಎರಡು ಮಾದರಿಗಳನ್ನು ಒಳಗೊಂಡಿದೆ. ಇವುಗಳ ಬೆಲೆ ಕ್ರಮವಾಗಿ 13,999ರೂ ಹಾಗೂ 15,999ರೂ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಕಪ್ಪು (ಪವರ್ ಬ್ಲ್ಯಾಕ್), ನೀಲಿ (ಕೂಲ್ ಬ್ಲ್ಯೂ) ಮತ್ತು ಹಳದಿ (ಪೋಕೋ ಯೆಲ್ಲೋ) ಎಂದು ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ಜೂನ್ 14ರಿಂದ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿರಲಿದೆ. ಮೊದಲ ದಿನದ ಮಾರಾಟದಲ್ಲಿ ಎರಡೂ ಮಾದರಿಗಳ ಮೇಲೆ 500 ರೂ. ರಿಯಾಯಿತಿ ನೀಡುವುದಾಗಿ ಪೋಕೋ ಘೋಷಿಸಿದ್ದು, ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಲ್ಲಿ ಸಂಸ್ಥೆ ಇದೆ.
6.5 ಇಂಚು ಅಗಲದ ಫುಲ್ ಹೆಚ್ಡಿ+ ಡಿಸ್ಪ್ಲೇ ಹೊಂದಿರುವ ಇದರ ಸ್ಕ್ರೀನ್ ಗೊರಿಲ್ಲಾ ಗ್ಲಾಸ್ 3ಮಾದರಿಯದ್ದಾಗಿದೆ. ಜತೆಗೆ ಹಿಂಬದಿಯಲ್ಲಿ 48ಎಂಪಿ (f/1.79 ಅಪೆರ್ಚರ್), 2ಎಂಪಿ (ಡೆಪ್ತ್ ಸೆನ್ಸಾರ್), 2ಎಂಪಿ (ಮ್ಯಾಕ್ರೋ ಸೆನ್ಸಾರ್ f/2.4 ಅಪೆರ್ಚರ್) ಮೂರು ಕ್ಯಾಮೆರಾ ಇದ್ದು, 8ಎಂಪಿಯ ಮುಂಬದಿ ಕ್ಯಾಮೆರಾ ಇದೆ.
ಇದರ ಇನ್ನೊಂದು ಹೆಚ್ಚುಗಾರಿಕೆಯೆಂದರೆ ಸಂಗ್ರಹಣಾ ಸಾಮರ್ಥ್ಯವನ್ನು 1ಟಿಬಿ ತನಕ ವಿಸ್ತರಿಸುವ ಅವಕಾಶ ಇದೆ. ಅಲ್ಲದೇ 5000ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಗೆ ಫಾಸ್ಟ್ ಚಾರ್ಟಿಂಗ್ ಸಹ ಇದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಎರಡು ದಿನಗಳ ತನಕ ಬ್ಯಾಟರಿ ಇರಲಿದೆ ಎಂದು ಪೋಕೋ ಹೇಳಿಕೊಂಡಿದೆ.
ಇದನ್ನೂ ಓದಿ: Poco 5G Mobile Phone: ಪೋಕೋ M3 ಪ್ರೋ 5G ಜೂನ್ 8ಕ್ಕೆ ಫ್ಲಿಪ್ಕಾರ್ಟ್ನಲ್ಲಿ ಲಭ್ಯ; ಬಣ್ಣ, ಬೆಲೆ ಇತರ ಮಾಹಿತಿ