ಇಂದಿನ ವೇಗದ ಜಗತ್ತಿನಲ್ಲಿ ಸ್ಮಾರ್ಟ್ಫೋನ್ (Smartphone) ಬಳಸದೆ ಇರುವವ ಸಂಖ್ಯೆ ತೀರಾ ಕಡಿಮೆ. ಇತ್ತೀಚೆಗಷ್ಟೆ ಪ್ರಕಟವಾದ ವರದಿಯೊಂದರ ಪ್ರಕಾರ ಇಡೀ ವಿಶ್ವದಲ್ಲಿ ಶೇ. 93 ರಷ್ಟು ಮಂದಿ ಸ್ಮಾರ್ಟ್ಫೋನ್ಗಳನ್ನು ಹೊಂದಿದ್ದಾರಂತೆ. ಸ್ಮಾರ್ಟ್ಫೋನ್ ಹೊಂದಿರುವವರು ತಮ್ಮ ಡಿಸ್ ಪ್ಲೇ (Display) ಮೇಲೆ ಅನೇಕ ಐಕಾನ್ ಅಥವಾ ಸಿಂಬಲ್ಗಳನ್ನು ನೀಡಿರುತ್ತೀರಿ. ಕೆಲವೊಂದು ಬಾರಿ ನಿಮಗೆ ತಿಳಿಯದೆ ಇರುವ, ನೋಡದೇ ಇರುವ ಸಿಂಬಲ್ ಕೂಡ ಫೋನ್ ಡಿಸ್ ಪ್ಲೇ ಮೇಲ್ಬಾಗದಲ್ಲಿ ಗೋಚರಿಸುತ್ತಿರುತ್ತದೆ. ಹಾಗಾದರೆ, ಈ ಸ್ಮಾರ್ಟ್ಫೋನ್ಗಳಲ್ಲಿರುವ ಸಿಂಬಲ್ (Symbol) ಏನನ್ನು ಸೂಚಿಸುತ್ತದೆ?, ಅದರ ಅರ್ಥವೇನು? ಎಂಬುದನ್ನು ನೋಡೋಣ.
ಬ್ಯಾಟರಿ ಐಕಾನ್:
ಮೇಲೆ ತೋರಿಸುವ ಚಿತ್ರದಲ್ಲಿರುವ ಐಕಾನ್ ನಿಮ್ಮ ಸ್ಮಾರ್ಟ್ಫೋನ್ನ ಬ್ಯಾಟರಿ ಬಗ್ಗೆ ಮಾಹಿತಿ ನೀಡುತ್ತದೆ. ಬಹುಶಃ ಇದರ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ನೀವು ಮೊಬೈಲ್ ಚಾರ್ಜ್ಗೆ ಹಾಕಿದಾಗ ಇದು ಎಷ್ಟು ಶೇಕಡ ಚಾರ್ಜ್ ಆಗಿದೆ ಎಂಬ ಸಿಂಬಲ್ ಅನ್ನು ಪ್ರದರ್ಶಿಸುತ್ತದೆ. ಬ್ಯಾಟರಿ ಸೇವ್ ಮೋಡ್, ಲೋ ಬ್ಯಾಟರಿ ಮೋಡ್ ಸಿಂಬಲ್ ಅನ್ನು ಕೂಡ ನೀವು ಕಾಣಬಹುದು.
WhatsApp New Feature: ವಾಟ್ಸ್ಆ್ಯಪ್ನಲ್ಲಿ ಬಂದಿದೆ ಹೊಸ ಫೀಚರ್: ಸೇವ್ ಮಾಡದೆ ಅನೌನ್ ನಂಬರ್ಗೆ ಮೆಸೇಜ್ ಮಾಡಿ
ನೆಟ್ವರ್ಕ್ ಮತ್ತು ಡೇಟಾ ಐಕಾನ್:
ಈ ಚಿತ್ರದಲ್ಲಿ ನೆಟ್ವರ್ಕ್ಗೆ ಸಂಬಂಧಿಸಿದ ಐಕಾನ್ ಅನ್ನು ಕಾಣಬಹುದು. ವಿರುದ್ಧ ದಿಕ್ಕಿನಲ್ಲಿ ತೋರಿಸುವ ಲಂಬ ಬಾಣಗಳು ಮೊಬೈಲ್ ಡೇಟಾದ ಮಾಹಿತಿ ನೀಡುತ್ತದೆ. ನಾಲ್ಕು ಗೆರೆಗಳು ನಿಮ್ಮ ಸಿಗ್ನಲ್ ಸ್ಟ್ರೆಂತ್ ಅನ್ನು ತೋರಿಸುತ್ತದೆ. ಇದರ ಮೇಲೆ 5ಜಿ ಎಂದು ಬರೆದಿದ್ದರೆ, ನಿಮ್ಮ ಮೊಬೈಲ್ನಲ್ಲಿ 5ಜಿ ನೆಟ್ವರ್ಕ್ ಸಕ್ರಿಯವಾಗಿದೆ ಎಂಬುದನ್ನು ಸೂಚಿಸುತ್ತದೆ. ವೃತ್ತಾಕಾರದ ಒಳಗಡೆ ಪ್ಲಸ್ ಸಿಂಬಲ್ ಕಾಣಿಸಿಕೊಂಡರೆ ಅದು ಡೇಟಾ ಉಳಿಸುವಿಕೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಅರ್ಥ.
ಕರೆಗಳು, ವಾಲ್ಯೂಮ್ ಮತ್ತು ಅಲಾರಮ್:
ಕಾಲ್ ಮಾಡುವ ಸಂದರ್ಭ ನಿಮ್ಮ ಮೈಕ್ರೊಫೋನ್ ಮ್ಯೂಟ್ ಆಗಿದ್ದರೆ ಸ್ಟೇಟಸ್ ಬಾರ್ನಲ್ಲಿ ಕ್ರಾಸ್-ಔಟ್ ಮೈಕ್ರೊಫೋನ್ ಸಿಂಬಲ್ ಕಾಣಿಸುತ್ತದೆ. ಸ್ಪೀಕರ್ ಸಿಂಬಲ್ ಮೇಲೆ ಗೆರೆಯಿದ್ದು ಅಂಕುಡೊಂಕಾದ ರೇಖೆಯನ್ನು ಕಂಡರೆ ನಿಮ್ಮ ಮೊಬೈಲ್ ವೈಬ್ರೇಟ್ ಮೋಡ್ನಲ್ಲಿದೆ ಎಂದರ್ಥ. ಸ್ಟೇಟಸ್ ಬಾರ್ನ ಬಲಭಾಗದಲ್ಲಿರುವ ಸಣ್ಣ ಅಲಾರಾಂ ಗಡಿಯಾರವಿದ್ದರೆ ನಿಮ್ಮ ಫೋನ್ನಲ್ಲಿ ನೀವು ಅಲಾರಾಂ ಆಯ್ಕೆಯನ್ನು ಆನ್ ಮಾಡಿರುತ್ತೀರಿ.
ಅಪ್ಲೋಡ್ ಮತ್ತು ಡೌನ್ಲೋಡ್ ಸಿಂಬಲ್:
ನಿಮ್ಮ ಸ್ಮಾರ್ಟ್ಫೋನ್ ಡಿಸ್ ಪ್ಲೇಯಲ್ಲಿ ಮೇಲಿನ ಬಾಣದ ಗುರುತು ಕಂಡರೆ ಗೂಗಲ್ ಡ್ರೈವ್ಗೆ PDF ನಂತಹ ಫೈಲ್ ಅನ್ನು ಅಪ್ಲೋಡ್ ಮಾಡುತ್ತಿದ್ದೀರಿ ಎಂದರ್ಥ. ಕೆಳಗಿನ ಬಾಣ ಇದ್ದರೆ ಡೌನ್ಲೋಡ್ ಅನ್ನು ಸೂಚಿಸುತ್ತದೆ. ಅಂತೆಯೆ ರೈಟ್ ಮಾರ್ಕ್ ಸಿಂಬಲ್ ಕಂಡುಬಂದರೆ ನಿಮ್ಮ ಫೈಲ್ ಡೌನ್ಲೋಡ್ ಆಗಿರುತ್ತದೆ.
ಸಂಪರ್ಕ ಚಿಹ್ನೆಗಳು:
ನಿಮ್ಮ ಸ್ಮಾರ್ಟ್ಫೋನ್ ಬ್ಲೂಟೂತ್ ಮೂಲಕ ಇನ್ನೊಂದಕ್ಕೆ ಮೊಬೈಲ್ಗೆ ಕನೆಕ್ಟ್ ಆಗಿದ್ದರೆ B ಐಕಾನ್ ಕಾಣಿಸಿಕೊಳ್ಳುತ್ತದೆ. ಯುಎಸ್ಬಿ ಚಿಹ್ನೆಯು ಗೋಚರಿಸಿದರೆ, ಯುಎಸ್ಬಿ ಸಂಪರ್ಕದ ಮೂಲಕ ನಿಮ್ಮ ಫೋನ್ ಇನ್ನೊಂದು ಸಾಧನಕ್ಕೆ ಸಂಪರ್ಕಗೊಂಡಿದೆ ಎಂದರ್ಥ. ನೀವು ನಿಮ್ಮ ಫೋನ್ನಿಂದ ನಿಮ್ಮ ನೆಟ್ವರ್ಕ್ನಲ್ಲಿರುವ ಇನ್ನೊಂದು ಸಾಧನಕ್ಕೆ ಕನೆಕ್ಟ್ ಮಾಡಿದಾಗ ಸಾಮಾನ್ಯವಾಗಿ ಬಾಕ್ಸ್ನ ಒಂದು ಮೂಲೆಯಲ್ಲಿ ವೈ-ಫೈ ಚಿಹ್ನೆ ಕಾಣಿಸಿಕೊಳ್ಳುತ್ತದೆ. ವಿಮಾನ ಐಕಾನ್ ಎಂದರೆ ನೀವು ಯಾವುದೇ ಸಂಪರ್ಕಗಳನ್ನು ಹೊಂದಿಲ್ಲ ಎಂದರ್ಥ. ಇದು ಏರ್ಪ್ಲೇನ್ ಮೋಡ್ ಅನ್ನು ಪ್ರತಿನಿಧಿಸುತ್ತದೆ. ಇದನ್ನು ಆನ್ ಮಾಡಿದರೆ ಕರೆ ಬರುವುದು ಅಥವಾ ಮಾಡಲು, ಮೆಸೇಜ್ ಕಳುಹಿಸಲು ಯಾವುದೂ ಸಾಧ್ಯ ಆಗುವುದಿಲ್ಲ.
ಇತರ ಚಿಹ್ನೆಗಳು:
ಲೊಕೇಶನ್ ಸಿಂಬಲ್ ಎಲ್ಲರಿಗೂ ತಿಳಿದಿದೆ. ಇದನ್ನು ಆನ್ ಮಾಡುವ ಮೂಲಕ ಗೂಗಲ್ ಮ್ಯಾಪ್ ಉಪಯೋಗಿಸಬಹುದು. ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಅರ್ಧ ಚಂದ್ರನ ಐಕಾನ್ ಸ್ಟೇಟಸ್ ಬಾರ್ನಲ್ಲಿ ಇದ್ದರೆ ಡಾರ್ಕ್ ಮೋಡ್ ಆನ್ ಆಗಿದೆ ಎಂದರ್ಥ. ಇದನ್ನು ಆನ್ ಮಾಡಿದರೆ ನಿಮ್ಮ ಫೋನ್ ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಗಾಢ ಬೂದು ಬಣ್ಣಕ್ಕೆ ತಿರುಗುತ್ತದೆ. ಫೋಕಸ್ ಮೋಡ್ ಎಂಬ ಆಯ್ಕೆಯ ಮೂಲಕ ನಿಮ್ಮ ಫೋನಿಗೆ ಬರುವ ನೋಟಿಫಿಕೇಶನ್ ಅನ್ನು ಆಯ್ದ ಆ್ಯಪ್ಗಳಿಂದ ನಿರ್ಬಂಧಿಸಲು ಸಾಧ್ಯವಾಗುತ್ತದೆ. ಡು ನಾಟ್ ಡಿಸ್ಟರ್ಬ್ ಎಂದ ಐಕಾನ್ ನಿಮ್ಮ ಮೊಬೈಲ್ಗೆ ಬರುವ ಎಲ್ಲ ನೋಟಿಫಿಕೇಶನ್ ಅನ್ನು ಬ್ಲಾಕ್ ಮಾಡುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ