WhatsApp Uber service: ಇದೀಗ ವಾಟ್ಸ್ಆ್ಯಪ್ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಇಲ್ಲಿದೆ ಸಂಪೂರ್ಣ ಮಾಹಿತಿ
ಗ್ರಾಹಕರು ಉಬರ್ ಆ್ಯಪ್ ಬದಲಾಗಿ ನೇರವಾಗಿ ವಾಟ್ಸ್ಆ್ಯಪ್ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ.
ಉಬರ್ (Ubar) ಹಾಗೂ ವಾಟ್ಸ್ಆ್ಯಪ್ (WhatsApp) ಸಹಭಾಗಿತ್ವವನ್ನು ಘೋಷಿಸಿಕೊಂಡಿದ್ದು,ಇನ್ನು ಗ್ರಾಹಕರು ಉಬರ್ ಆ್ಯಪ್ ಬದಲಾಗಿ ನೇರವಾಗಿ ವಾಟ್ಸ್ಆ್ಯಪ್ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಪ್ರಖ್ಯಾತ ಆನ್‌ಲೈನ್ ಕ್ಯಾಬ್ ಬುಕ್ಕಿಂಗ್ ಸಂಸ್ಥೆ ಊಬರ್ ಮತ್ತು ವಾಟ್ಸ್ಆಪ್ ಒಡೆತನದ ಮೆಟಾ (Meta) ಸಂಸ್ಥೆಗಳು ಸೇರಿಕೊಂಡು ಇಂತಹದೊಂದು ಫೀಚರ್ ಅನ್ನು ಲಾಂಚ್ ಮಾಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಆರಂಭವಾಗುತ್ತಿರುವ ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ. ವಾಟ್ಸ್ಆ್ಯಪ್ ಮೆಸೆಂಜರ್ ಸೇವೆಯು ಭಾರತದಲ್ಲಿ ಅರ್ಧ ಶತಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಬಹುತೇಕ ಜನರು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದಾರೆ. ಹಾಗಾಗಿ ಉಬರ್ ಕೂಡ ಇದನ್ನು ಗಮನಿಸಿ ಆ್ಯಪ್ ಸಹಾಯವಿಲ್ಲದೆ ಬಳಕೆದಾರರಿಗೆ ಸುಲಭ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಜೊತೆಗೆ ಕೈ ಜೋಡಿಸಿದೆ.
ವಾಟ್ಸ್ಆ್ಯಪ್ ಚಾಟ್‌ನಲ್ಲೇ ನೋಂದಣಿ, ರೈಡ್ ಬುಕಿಂಗ್, ಹಾಗೂ ಪ್ರಯಾಣದ ರಸೀದಿಯನ್ನು ಪಡೆದುಕೊಳ್ಳಬಹುದಾಗಿದೆ. ಉಬರ್ ಅನ್ನು ಬುಕಿಂಗ್‌ಗಾಗಿ ಇಂಗ್ಲೀಷ್ ಬಳಕೆ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ಭಾಷೆಗಳಲ್ಲೂ ಬುಕಿಂಗ್ ಸೌಲಭ್ಯ ಒದಗಿಸಲಾಗುವುದು. ವಾಟ್ಸ್ಆ್ಯಪ್ನಲ್ಲಿ ಉಬರ್ ಚಾಟ್‌ಬಾಟ್ ಮೂಲಕ ಒಮ್ಮೆ ರೈಡ್ ಬುಕ್ ಮಾಡಿದ ನಂತರ ಗ್ರಾಹಕರು ಚಾಲಕನ ಹೆಸರು, ವಾಹನದ ಲೈಸೆನ್ಸ್ ಪ್ಲೇಟ್ ಸಂಖ್ಯೆ ಮತ್ತು ಪಿಕಪ್ ಪಾಯಿಂಟ್‌ಗೆ ಹೋಗುವ ಸ್ಥಳ ಸೇರಿದಂತೆ ಎಲ್ಲಾ ವಿವರಗಳನ್ನು ವಾಟ್ಸ್ಆ್ಯಪ್ ಸಂದೇಶದ ಮೂಲಕ ಪಡೆಯುತ್ತಾರೆ ಎಂದು ಉಬರ್ ಹೇಳಿದೆ.
“ಎಲ್ಲಾ ಭಾರತೀಯರಿಗೆ ಉಬರ್ ಸೇವೆ ಬಳಕೆಗೆ ಸಿಗುವಂತೆ ಮಾಡಲು ನಾವು ಬಯಸುತ್ತೇವೆ ಮತ್ತು ಅವರಿಗೆ ಅನುಕೂಲಕರವಾದ ವೇದಿಕೆಗಳಲ್ಲಿ ಸಿಗುವ ಮೂಲಕ ಸೇವೆಯನ್ನು ನೀಡಲಿದ್ದೇವೆ ” ಎಂದು ಉಬರ್ನ ವ್ಯಾಪಾರ ಅಭಿವೃದ್ಧಿಯ ಹಿರಿಯ ನಿರ್ದೇಶಕಿ ನಂದಿನಿ ಮಹೇಶ್ವರಿ ಹೇಳಿದರು.
ಹೇಗೆ ಕಾರ್ಯನಿರ್ವಹಿಸುತ್ತದೆ?:
ಉಬರ್ ಆ್ಯಪ್ ಅವಶ್ಯಕತೆಯಿಲ್ಲದೆಯೇ, ವಾಟ್ಸ್ಆ್ಯಪ್ ಮೂಲಕ ಚಾಟ್ ಇಂಟರ್ಫೇಸ್ನಲ್ಲಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ ರೈಡ್ಗಳನ್ನು ಬುಕ್ ಮಾಡಬಹುದು ಮತ್ತು ಟ್ರಿಪ್ ರಸೀದಿಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಥವಾ ಉಬರ್ ವಾಟ್ಸ್ಆ್ಯಪ್ ಚಾಟ್ ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಚಾಟ್‌ಬಾಟ್ ನಂತರ ಪಿಕಪ್ ಮತ್ತು ಡ್ರಾಪ್ ಆಫ್ ಸ್ಥಳಗಳನ್ನು ನೀಡಲು ಬಳಕೆದಾರರನ್ನು ಕೇಳುತ್ತದೆ. ಅವರು ಬುಕ್ ಮಾಡಲು ಬಯಸುವ ರೀತಿಯ ರೈಡ್ ಅನ್ನು ಆಯ್ಕೆ ಮಾಡುತ್ತದೆ.
ಇಲ್ಲಿ ಚಾಟ್‌ಬಾಟ್ ನಿಮಗೆ ಮುಂಗಡ ದರದ ಮಾಹಿತಿಯನ್ನು ನೀಡುತ್ತದೆ ಮತ್ತು ಚಾಲಕನ ಆಗಮನದ ನಿರೀಕ್ಷಿತ ಸಮಯವನ್ನು ಸಹ ನೀಡುತ್ತದೆ. ಉಬರ್ನಲ್ಲಿ ಕೇವಲ ಒಂದು ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಿದ ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸೇವೆಯು ಲಭ್ಯವಿದೆ ಎಂದು ವಾಟ್ಸ್ಆ್ಯಪ್ ದೃಢಪಡಿಸುತ್ತದೆ. ಈ ಟೆಕ್ನಾಲಜಿಯಿಂದಾಗಿ ಇನ್ನು ಪ್ರಯಾಣಿಕರು ಉಬರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಥವಾ ಬಳಸುವ ಅಗತ್ಯವಿಲ್ಲ.
- ವಾಟ್ಸ್ಆ್ಯಪ್ ಅನ್ನು ತೆರೆದು +917292000002 ಗೆ ಸಂದೇಶವನ್ನು ಕಳುಹಿಸಬಹುದು.
- ಚಾಟ್ ಬಾಕ್ಸ್ ಮೂಲಕ ಮೆಸೇಜ್ ಮಾಡಿ.
- ನಿಮ್ಮ ಪಿಕ್ ಅಪ್ ಮತ್ತು ಡ್ರಾಪ್ ಸ್ಥಳಗಳನ್ನು ನಮೋದಿಸಿ.
- ಆಗ ಚಾಲಕನ ಆಗಮನದ ಸಮಯ ಮತ್ತು ದರದ ಮಾಹಿತಿಯನ್ನು ಪಡೆಯುತ್ತೀರಿ.