Twitter: ಕೆಲಸ ಕಳೆದುಕೊಂಡ ಟ್ವಿಟರ್​ನ ಅರ್ಧದಷ್ಟು ಸಿಬ್ಬಂದಿ; ಇವರನ್ನು ಮನೆಗೆ ಕಳಿಸುವುದು ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ ಎಂದ ಎಲಾನ್ ಮಸ್ಕ್

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಣಿಸಿಕೊಂಡಿದ್ದು ಮತ್ತೊಂದು ದೈತ್ಯ ಸಾಮಾಜಿಕ ಜಾಲತಾಣ ಕಂಪನಿ ಫೇಸ್​ಬುಕ್​ (ಮೆಟಾ) ಸಹ ಆದಾಯ ಕಳೆದುಕೊಂಡಿದೆ. ಗೂಗಲ್​ನ ಜಾಹೀರಾತು ಆದಾಯವೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

Twitter: ಕೆಲಸ ಕಳೆದುಕೊಂಡ ಟ್ವಿಟರ್​ನ ಅರ್ಧದಷ್ಟು ಸಿಬ್ಬಂದಿ; ಇವರನ್ನು ಮನೆಗೆ ಕಳಿಸುವುದು ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ ಎಂದ ಎಲಾನ್ ಮಸ್ಕ್
ಎಲಾನ್ ಮಸ್ಕ್​
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 06, 2022 | 7:37 AM

ಸ್ಯಾನ್​ಫ್ರಾನ್ಸಿಸ್​ಕೊ: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ (Twitter)​ ಕಂಪನಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಎಲಾನ್ ಮಸ್ಕ್ (Elon Musk) ಉದ್ಯೋಗಿಗಳನ್ನು ಮನಬಂದಂತೆ ಕೆಲಸದಿಂದ ತೆಗೆಯುತ್ತಿದ್ದಾರೆ. 7,500 ಉದ್ಯೋಗಿಗಳ ಪೈಕಿ ಅರ್ಧಷ್ಟು ಉದ್ಯೋಗಿಗಳು ಈಗ ಕೆಲಸ ಕಳೆದುಕೊಂಡಿದ್ದಾರೆ. ಕೆಲಸದಿಂದ ತೆಗೆಯುವ ರೀತಿಯು ಅಮಾನವೀಯವಾಗಿದೆ. ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿರುವ ಟ್ವಿಟರ್ ಉದ್ಯೋಗಿಗಳಿಗೆ ಕೆಲಸಕ್ಕೆ ಬರುವ ಅಗತ್ಯವಿಲ್ಲ, ಮನೆಗಳಿಂದಲೇ ಕೆಲಸ ಮಾಡಿ ಎಂದು ಸೂಚಿಸಲಾಗಿದೆ. ಅವರು ಕೆಲಸದಲ್ಲಿ ಮುಂದುವರಿಯುವುದು ಖಚಿತವಾದರೆ ಕಂಪನಿ ಒದಗಿಸಿರುವ ಇಮೇಲ್ ಖಾತೆಗೆ ಒಂದು ಇಮೇಲ್ ಬರುತ್ತದೆ. ಒಂದು ವೇಳೆ ಕೆಲಸದಿಂದ ತೆಗೆಯುವ ನಿರ್ಧಾರ ತೆಗೆದುಕೊಂಡಿದ್ದರೆ ಅವರ ಖಾಸಗಿ ಇಮೇಲ್​ ಐಡಿಗೆ ಒಂದು ಇಮೇಲ್ ಬರುತ್ತದೆ. ಅದೇ ಕ್ಷಣದಿಂದ ‘ಸ್ಲಾಕ್’ (ಆಂತರಿಕ ಸಂವಹನ) ಹಾಗೂ ಕಂಪನಿ ಇಮೇಲ್ ಖಾತೆ ಕೆಲಸ ಮಾಡುವುದು ನಿಲ್ಲಿಸುತ್ತದೆ. ಈ ಬೆಳವಣಿಗೆಯು ಉದ್ಯೋಗಿಗಳಲ್ಲಿ ಆತಂಕ ಉಂಟುಮಾಡಿದೆ.

ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಪ್ರತಿಷ್ಠೆ ಪಡೆದಿರುವ ಟ್ವಿಟರ್​ನಲ್ಲಿ ನಡೆಯುತ್ತಿರುವ ಈ ವಿದ್ಯಮಾನ ಐಟಿ ಮತ್ತು ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಹತ್ತಾರು ವರ್ಷ ಜೀವ ತೇದು ಕೆಲಸ ಮಾಡಿದ್ದ ಕಂಪನಿಯಿಂದ ಹೀಗೆ ಏಕಾಏಕಿ ಕೆಲಸ ಕಳೆದುಕೊಳ್ಳುವುದನ್ನು ಹಲವರಿಗೆ ನಂಬಲು ಸಹ ಆಗುತ್ತಿಲ್ಲ. ಟ್ವಿಟರ್​ನ ಅಮೆರಿಕ ಮತ್ತು ಕೆನಡಾ ದೇಶಗಳ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥರಾಗಿದ್ದ ಮೈಕೆಲ್ ಆಸ್ಟಿನ್ ಸಹ ಹೀಗೆ ಕೆಲಸ ಕಳೆದುಕೊಂಡಿದ್ದಾರೆ. ‘ಬೆಳಿಗ್ಗೆ ಏಳುವ ಹೊತ್ತಿಗೆ ನಾನಿನ್ನು ಟ್ವಿಟರ್​ನಲ್ಲಿ ಕೆಲಸ ಮಾಡುವುದಿಲ್ಲ ಎಂದು ತಿಳಿದು ಬಂತು. ನನಗೆ ನಂಬಲು ಆಗಲಿಲ್ಲ. ತುಂಬಾ ದುಃಖವಾಯಿತು’ ಎಂದು ಅವರು ವಿಷಾದಿಸಿದರು.

‘ಟ್ವಿಟರ್​ ಒಂದು ದಿನಕ್ಕೆ ಅನುಭವಿಸುತ್ತಿರುವ ನಷ್ಟದ ಮೌಲ್ಯ 40 ಲಕ್ಷ ಡಾಲರ್. ಇಂಥ ಪರಿಸ್ಥಿತಿಯಲ್ಲಿ ನೌಕರರನ್ನು ಮನೆಗೆ ಕಳಿಸುವುದು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ’ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಅವರ ಸ್ಥಿತಿಗತಿ ಕುರಿತು ಸಾಮೂಹಿಕ ಇಮೇಲ್ ಕಳಿಸಿದ ಕೇವಲ 24 ಗಂಟೆಗಳಲ್ಲಿ ಟ್ವಿಟರ್ ಮಾಲೀಕ ಮಸ್ಕ್ ನಷ್ಟದ ವಿಚಾರ ಮುಂದಿಟ್ಟು ಇಂಥದ್ದೊಂದು ಇಮೇಲ್ ಕಳಿಸಿದ್ದರು. ಲೇಆಫ್​ಗಳಿಗೂ ಮುನ್ನ ಟ್ವಿಟರ್​ ವಿಶ್ವದಾದ್ಯಂತ ಇರುವ ತನ್ನ ಕಚೇರಿಗಳನ್ನು ಮುಚ್ಚಿತ್ತು. ಉದ್ಯೋಗಿಗಳಿಗೆ ಮನೆಯಲ್ಲಿಯೇ ಕುಳಿತು ಮುಂದಿನ ಮಾಹಿತಿಯ ಬಗ್ಗೆ ನಿರೀಕ್ಷಿಸುವಂತೆ ಸೂಚಿಸಲಾಗಿತ್ತು. ‘ತೀರಾ ಅಮಾನವೀಯವಾಗಿ ನಮ್ಮನ್ನು ಕೆಲಸದಿಂದ ತೆಗೆಯಲಾಯಿತು. ಕಂಪನಿಯ ಬಗ್ಗೆ ಅಥವಾ ಇಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿಲ್ಲ. ಬಾಡಿಗೆ ಯೋಧರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೇಗಾದರೂ ಸರಿ ಹಣ ಉಳಿಸಬೇಕು ಎನ್ನುವುದಷ್ಟೇ ಅವರ ಉದ್ದೇಶವಾಗಿದೆ’ ಎಂದು ಉದ್ಯೋಗಿಯೊಬ್ಬರು ಎಎಫ್​ಪಿ ಸುದ್ದಿಸಂಸ್ಥೆಯ ಪ್ರತಿನಿಧಿಯ ಬಳಿ ದುಃಖ ತೋಡಿಕೊಂಡಿದ್ದಾರೆ.

44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಕಂಪನಿಯನ್ನು ಖರೀದಿಸಿರುವ ಮಸ್ಕ್ ಈ ಮೊತ್ತವನ್ನು ಹೊಂದಿಸಲು ಹೆಣಗಾಡುತ್ತಿದ್ದಾರೆ. ಕೋಟ್ಯಂತರ ಡಾಲರ್​ನಷ್ಟು ಸಾಲ ಮಾಡಿಕೊಂಡಿರುವ ಅವರು, ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದಲ್ಲಿದ್ದ ತಮ್ಮ ಷೇರುಗಳನ್ನು ಮಾರುವ ಮೂಲಕ 15.5 ಶತಕೋಟಿ ಡಾಲರ್​ನಷ್ಟು ಮೊತ್ತವನ್ನು ಒಗ್ಗೂಡಿಸಿಕೊಂಡಿದ್ದಾರೆ. ಗಾಬರಿ ಹುಟ್ಟಿಸುವಷ್ಟು ವೇಗದಲ್ಲಿ ಕೆಲಸ ಮಾಡಬೇಕು ಎಂದು ಟ್ವಿಟರ್​ನಲ್ಲಿಯೇ ಉಳಿಸಿಕೊಂಡ ಉದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಟೆಸ್ಲಾದ ಡೆವಲಪರ್​ಗಳು ಮತ್ತು ಟೀಮ್ ಲೀಡರ್​ಗಳನ್ನು ಟ್ವಿಟರ್​ಗೆ ನಿಯೋಜಿಸಿ, ಕೆಲಸಕ್ಕೆ ವೇಗ ನೀಡಲು ಯತ್ನಿಸಲಾಗುತ್ತಿದೆ ಎಂದು ಟ್ವಿಟರ್​ ಉದ್ಯೋಗಿಗಳು ದೂರಿದ್ದಾರೆ.

ಟೆಸ್ಲಾ ಮತ್ತು ಸ್ಪೇಸ್​ಎಕ್ಸ್​ ಕಂಪೆನಿಗಳ ಮುಖ್ಯಸ್ಥರಾಗಿರುವ ಮಸ್ಕ್ ವರ್ಷಕ್ಕೆ 100 ಕೋಟಿ ಡಾಲರ್​ಗಳಷ್ಟು ಮೊತ್ತವನ್ನು ಟ್ವಿಟರ್ ಸಾಲಗಳ ಮೇಲಿನ ಬಡ್ಡಿ ತೆರಲು ಹೊಂದಿಸಬೇಕಿದೆ. ಟ್ವಿಟರ್ ಕಂಪನಿಯು ಸಾಲದಲ್ಲಿದೆ ಎಂದು ಮನವರಿಕೆಯಾದ ತಕ್ಷಣ ಮಸ್ಕ್ ತಮ್ಮ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲು ಯತ್ನಿಸಿದ್ದರು. ಆದರೆ ಅದಕ್ಕೆ ಕಾನೂನಿನ ತೊಡಕು ಕಾಣಿಸಿಕೊಂಡಿತ್ತು. ಟ್ವಿಟರ್​ಗಾಗಿ ಹಣ ಸಂಪಾದಿಸುವ ಹೊಸ ಮಾರ್ಗಗಳನ್ನು ಹುಡುಕಲು ಮಸ್ಕ್ ಸತತ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಟ್ವಿಟರ್ ಖಾತೆಗೆ ಬ್ಲೂಟಿಕ್ ಪಡೆದುಕೊಳ್ಳಲು 8 ಡಾಲರ್​ ನೀಡಬೇಕು ಎನ್ನುವ ಪ್ರಸ್ತಾವವೂ ಸೇರಿದೆ. ಈವರೆಗೆ ಟ್ವಿಟರ್ ಕೇವಲ ಜಾಹೀರಾತು ಆಧರಿಸಿ ಕೆಲಸ ಮಾಡುತ್ತಿತ್ತು. ಇದನ್ನು ಬದಲಿಸಿ, ಬದಲಿ ಆದಾಯ ಮೂಲ ಹುಡುಕಲು ಮಸ್ಕ್ ಮುಂದಾಗಿದ್ದರು. ಆದರೆ ತರಬೇತಿ ಪಡೆದ ಉದ್ಯೋಗಿಗಳನ್ನು ಮನೆಗೆ ಕಳಿಸಿ ಟ್ವಿಟರ್​ಗೆ ವಿಶ್ವಾಸಾರ್ಹತೆ ತಂದುಕೊಡಲು ಸಾಧ್ಯವೇ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ.

ಈ ನಡುವೆ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಣಿಸಿಕೊಂಡಿದ್ದು ಮತ್ತೊಂದು ದೈತ್ಯ ಸಾಮಾಜಿಕ ಜಾಲತಾಣ ಕಂಪನಿ ಫೇಸ್​ಬುಕ್​ (ಮೆಟಾ) ಸಹ ಆದಾಯ ಕಳೆದುಕೊಂಡಿದೆ. ಗೂಗಲ್​ನ ಜಾಹೀರಾತು ಆದಾಯವೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಟ್ವಿಟರ್​ ಅನ್ನು ಮಸ್ಕ್ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಮೂಡಿದ ಗೊಂದಲದಿಂದಾಗಿ ಹಲವು ಜಾಹೀರಾತು ಕಂಪನಿಗಳು ತಮ್ಮ ಯೋಜನೆಗಳನ್ನು ತಡೆಹಿಡಿದಿದ್ದು, ಜಾಹೀರಾತು ನೀಡುವ ಬಗ್ಗೆ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಮೊದಲೇ ನಷ್ಟದಲ್ಲಿದ್ದ ಟ್ವಿಟರ್​ಗೆ ಈ ಬೆಳವಣಿಗೆಯೂ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.