WhatsApp New Feature: ಆಂಡ್ರಾಯ್ಡ್, ಐಒಎಸ್ ಬಳಕೆದಾರರೇ ಗಮನಿಸಿ: ಸದ್ಯದಲ್ಲೇ ವಾಟ್ಸ್ಆ್ಯಪ್ನಿಂದ ಬರುತ್ತೆ ವಿಶೇಷ ಮೆಸೇಜ್
ವಾಟ್ಸ್ಆ್ಯಪ್ ತನ್ನ ಬಳಕೆದಾರರೊಂದಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಲಿದೆ. ಅಂದರೆ ನಿಮ್ಮ ಖಾತೆಗೆ ವಾಟ್ಸ್ಆ್ಯಪ್ನಿಂದ ಮೆಸೇಜ್ ಬರಲಿದ್ದು, ಇದರಲ್ಲಿ ಅನೇಕ ಮಾಹಿತಿಗಳನ್ನು ನೀಡಲಾಗುತ್ತದೆ.
ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ದಿನಕ್ಕೊಂದು ಫಿಚರ್ಗಳನ್ನು ಘೋಷಣೆ ಮಾಡುತ್ತಿದೆ. ಈಗೀಗ ಕೇವಲ ಆಂಡ್ರಾಯ್ಡ್ (Android), ಐಒಎಸ್ ಬಳಕೆದಾರರಿಗೆ ಮಾತ್ರವಲ್ಲದೆ ವೆಬ್ ಮತ್ತು ಟ್ಯಾಬ್ಲೆಟ್ನಲ್ಲಿ ವಾಟ್ಸ್ಆ್ಯಪ್ ಬಳಸುವವರಿಗೂ ನೂತನ ಆಯ್ಕೆಗಳನ್ನು ನೀಡುತ್ತಿದೆ. ಹೀಗಾಗಿಯೇ ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಇದೀಗ ಬಳಕೆದಾರರಿಗೆ ಬಹಳ ಉಪಯುಕ್ತವಾದ ಫೀಚರ್ ಒಂದನ್ನು ಪರಿಚಯಿಸಲು ವಾಟ್ಸ್ಆ್ಯಪ್ ಮುಂದಾಗಿದೆ. ಹೊಸ ಆಯ್ಕೆಯ ಮೂಲಕ ವಾಟ್ಸ್ಆ್ಯಪ್ ನಿಮಗೆ ವಿಶೇಷವಾದ ಮೆಸೇಜ್ಗಳನ್ನು ಕಳುಹಿಸಲಿದೆ. ಈ ಅಪ್ಡೇಟ್ ಕುರಿತ ಮಾಹಿತಿ ಇಲ್ಲಿದೆ ನೋಡಿ.
ವಾಟ್ಸ್ಆ್ಯಪ್ ತನ್ನ ಬಳಕೆದಾರರೊಂದಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಲಿದೆ. ಅಂದರೆ ನಿಮ್ಮ ಖಾತೆಗೆ ವಾಟ್ಸ್ಆ್ಯಪ್ನಿಂದ ಮೆಸೇಜ್ ಬರಲಿದ್ದು, ಇದರಲ್ಲಿ ಅನೇಕ ಮಾಹಿತಿಗಳನ್ನು ನೀಡಲಾಗುತ್ತದೆ. ಉದಾಹರಣೆಗೆ ಕಂಪನಿ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಹೊಸ ಅಪ್ಡೇಟ್ ಬಗ್ಗೆ ಅಥವಾ ನೂತನ ಫೀಚರ್ ಕುರಿತು ಮೆಸೇಜ್ ಕಳುಹಿಸಿ ಮಾಹಿತಿ ನೀಡಲಿದೆ. ಇದು ವಾಟ್ಸ್ಆ್ಯಪ್ನ ಅಧಿಕೃತ ಚಾಟ್ ಆಗಿದ್ದು ವೆರಿಫೈ ಮಾರ್ಕ್ ಕೂಡ ಇರಲಿದೆ. ಬಳಕೆದಾರರಿಗೆ ವಾಟ್ಸ್ಆ್ಯಪ್ ಅನ್ನು ಹೇಗೆ ಉಪಯೋಗಿಸ ಬೇಕು ಎಂಬುವುದರಿಂದ ಹಿಡಿದು ಕೆಲ ಟಿಪ್ಸ್ಗಳನ್ನು ಕೂಡ ನೀಡಲಿದೆಯಂತೆ.
ಸದ್ಯಕ್ಕೆ ಈ ಆಯ್ಕೆ ಪರೀಕ್ಷಾ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದರ ಮೂಲಕ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಏನು ಹೊಸದು ಬಂದಿದೆ ಎಂದು ಗೂಗಲ್ನಲ್ಲಿ ಹುಡುಕುವ ತೊಂದರೆ ಇರುವುದಿಲ್ಲ. ಬದಲಾಗಿ ಎಲ್ಲ ಮಾಹಿತಿಯನ್ನು ವಾಟ್ಸ್ಆ್ಯಪ್ ತನ್ನ ವಾಟ್ಸ್ಆ್ಯಪ್ನಲ್ಲೇ ನೀಡುತ್ತಿದೆ. ನಿಮಗೆ ಈ ಮಾಹಿತಿ ಬೇಡ ಎಂದಾದರೆ ಇದನ್ನು ಮ್ಯೂಟ್ ಅಥವಾ ಖಾತೆಯನ್ನು ಬ್ಲಾಕ್ ಮಾಡುವ ಆಯ್ಕೆ ಕೂಡ ನೀಡಲಿದೆಯಂತೆ.
ವಿಂಡೀಸ್ ಬಳಕೆದಾರರಿಗೆ ಹೊಸ ಆಯ್ಕೆ:
ವಾಟ್ಸ್ಆ್ಯಪ್ ವೆಬ್ ಉಪಯೋಗಿಸುತ್ತಿರುವ ವಿಂಡೀಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ. ವಿಂಡೋಸ್ ಬಳಕೆದಾರರಿಗೆ ಹೊಸ ವಾಟ್ಸ್ಆ್ಯಪ್ ಅನ್ನು ಪರಿಚಯಿಸಿದ್ದು ಇದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಐಒಎಸ್, ಆಂಡ್ರಾಯ್ಡ್ ಮಾದದರಿಯಲ್ಲಿ ಕೆಲಸ ಮಾಡುತ್ತದಂತೆ. ಇದರ ಜೊತೆಗೆ ಗ್ರೂಪ್ ವಿಡಿಯೋ ಕರೆ ಮತ್ತು ಆಡಿಯೋ ಕರೆ ಆಯ್ಕೆಯನ್ನು ನೀಡಲಾಗಿದೆ. ಎಂಟು ಜನರೊಂದಿಗೆ ಒಮ್ಮೆಲೆ ವಿಡಿಯೋ ಕಾಲ್ನಲ್ಲಿ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ. ಅಂತೆಯೆ 32 ಜನರು ಆಡಿಯೋ ಕಾಲ್ನಲ್ಲಿ ಕನೆಕ್ಟ್ ಆಗಬಹುದಂತೆ. ಸದ್ಯಕ್ಕೆ ಈ ಆಯ್ಕೆಯನ್ನು ವಿಂಡೀಸ್ ಬಳಕೆದಾರರಿಗೆ ಮಾತ್ರ ನೀಡಲಾಗಿದ್ದು, ಮ್ಯಾಕ್ ಡೆಸ್ಕ್ ಟಾಪ್ನವರಿಗಾಗಿ ಪರೀಕ್ಷಾ ಹಂತದಲ್ಲಿದೆ.
ಐಒಎಸ್ನಲ್ಲಿ ಹೊಸ ಫೀಚರ್:
ವಾಟ್ಸ್ಆ್ಯಪ್ ತನ್ನ ಐಫೋನ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಅನ್ನು ವಾಟ್ಸ್ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿಯಲ್ಲೇ ನೀಡಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಐಫೋನ್ ಬಳಕೆದಾರರಿಗೆ ಸಹ ಈ ಸೌಲಭ್ಯವನ್ನು ಕಲ್ಪಿಸಿದೆ. ಈವರೆಗೆ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ಸ್ಟೇಟಸ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದೆ. ವಾಯ್ಸ್ ಸ್ಟೇಟಸ್ ಬಳಕೆದಾರರಿಗೆ 30 ಸೆಕೆಂಡ್ಗಳ ಕಾಲ ಇರಲಿದೆ..
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ