WhatsApp: ಇನ್ಮುಂದೆ ವಾಟ್ಸ್ಆ್ಯಪ್ನಲ್ಲಿ ಸಿಕ್ಕ ಸಿಕ್ಕ ಸ್ಟೇಟಸ್ ಹಾಕುವಂತಿಲ್ಲ: ಬರುತ್ತಿದೆ ಹೊಸ ರೂಲ್ಸ್
WhatsApp Status: ವಾಟ್ಸ್ಆ್ಯಪ್ ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗೆ ಸ್ಟೇಟಸ್ ಬಗ್ಗೆ ರಿಪೋರ್ಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಬಳಕೆದಾರರು ಮೆಸೇಜ್ ಮಾಡುವುದರಲ್ಲಿ ಈ ಫೀಚರ್ ನೀಡಿದೆ.
ತನ್ನ ಅಚ್ಚರಿಯ ಫೀಚರ್ ಹಾಗೂ ಯೂಸರ್ ಫ್ರೆಂಡ್ಲಿ ಮೂಲಕ ಮನಗೆದ್ದಿರುವ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಈ ವರ್ಷ ಪರಿಚಯಿಸಿರುವ ಒಂದೊಂದು ಫೀಚರ್ ಕೂಡ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅತಿ ಹೆಚ್ಚು ನೂತನ ಫೀಚರ್ಗಳನ್ನು (New Feature) 2022 ರಲ್ಲಿ ಬಿಡುಗಡೆ ಮಾಡಿರುವ ವಾಟ್ಸ್ಆ್ಯಪ್ನಲ್ಲಿ ಇನ್ನೂ 10-15 ಅಪ್ಡೇಟ್ಗಳು ಪರೀಕ್ಷಾ ಹಂತದಲ್ಲಿದೆ. ಹೊಸ ವರ್ಷ ಆಗುಮಿಸುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಹೊಸ ಅಪ್ಡೇಟ್ಗಳನ್ನು ಘೋಷಿಸುವ ವಾಟ್ಸ್ಆ್ಯಪ್ ಇದೀಗ ಸ್ಟೇಟಸ್ (WhatsApp Status) ವಿಚಾರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ವಾಟ್ಸ್ಆ್ಯಪ್ ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗೆ ಸ್ಟೇಟಸ್ ಬಗ್ಗೆ ರಿಪೋರ್ಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಬಳಕೆದಾರರು ಮೆಸೇಜ್ ಮಾಡುವುದರಲ್ಲಿ ಈ ಫೀಚರ್ ನೀಡಿದೆ. ಸದ್ಯ Wabetainfo ಪ್ರಕಾರ, ನಿಮ್ಮ ಕಾಂಟೆಕ್ಟ್ನಲ್ಲಿರುವ ವ್ಯಕ್ತಿಯು ಅಶ್ಲೀಲ ವಿಡಿಯೊವನ್ನು ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದರೆ ಅಥವಾ ಜನರ ಭಾವನೆಗಳಿಗೆ ಹಾನಿ ಮಾಡುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ವಿಷಯಗಳಲ್ಲಿ ಸ್ಟೇಟಸ್ನಲ್ಲಿ ಶೇರ್ ಮಾಡಿದ್ದರೆ ಈ ಕುರಿತು ರಿಪೋರ್ಟ್ ಮಾಡಬಹುದು. ಪ್ರಸ್ತುತ ವಾಟ್ಸ್ಆ್ಯಪ್ ತನ್ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ.
ಕೋಡ್ ಎಂಟ್ರಿ ಮಾಡದೆ ವಾಟ್ಸ್ಆ್ಯಪ್ ಓಪನ್ ಆಗಲ್ಲ:
ಭದ್ರತಾ ವಿಚಾರದಲ್ಲಿ ಬಳಕೆದಾರರಿಗೆ ವಾಟ್ಸ್ಆ್ಯಪ್ ಇನ್ನಷ್ಟು ಹೆಚ್ಚಿನ ಭದ್ರತೆ ನೀಡಲು ಮುಂದಾಗಿದೆ. ಹೊಸ ಡಿವೈಸ್‌ಗಳಿಗೆ ಲಾಗಿನ್ ಮಾಡುವಾಗ ಉತ್ತಮ ಭದ್ರತೆಯನ್ನು ನೀಡಲು ವಾಟ್ಸ್ಆ್ಯಪ್ ಮುಂದಾಗಿದ್ದು, ಹೊಸ ಪರಿಶೀಲನಾ ಕೋಡ್ ಅನ್ನು ನಮೂದಿಸುವ ಮೂಲಕವೇ ಹೊಸ ಡಿವೈಸ್‌ನಲ್ಲಿ ಲಾಗ್ ಇನ್ ಪ್ರಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ. ಬಹು ಡಿವೈಸ್‌ಗಳಲ್ಲಿ ಒಂದೇ ಖಾತೆಯನ್ನು ಬಳಕೆ ಮಾಡುವ ಫೀಚರ್ಸ್ ಅನ್ನು ಅನಾವರಣ ಮಾಡಿದ ನಂತರ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ಸೌಲಭ್ಯ ನೀಡಲಾಗುತ್ತಿದೆ. ಈ ಹೊಸ ಫೀಚರ್ಸ್ ಮೂಲಕ ನೀವು ಹೊಸ ಡಿವೈಸ್‌ನಲ್ಲಿ ಲಾಗಿನ್ ಮಾಡುವಾಗ 6 ಅಂಕಿಯ ಕೋಡ್ ಅನ್ನು ವಾಟ್ಸ್ಆ್ಯಪ್ನಲ್ಲಿ ನೋಡಬಹುದಾಗಿದೆ. ಹಾಗೆಯೇ ಈ ಕೋಡ್ ಪ್ರಾರ್ಥಮಿಕ ಡಿವೈಸ್ ಅಥವಾ ಮೊಬೈಲ್‌ಗೆ ಮಾತ್ರ ರವಾನೆಯಾಗುತ್ತದೆ.
ವಾಟ್ಸ್ಆ್ಯಪ್ನಲ್ಲಿ ಬಂದಿದೆ undo ಫೀಚರ್:
ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಆಕ್ಸಿಡೆಂಟಲ್ ಡಿಲೀಟ್ ಫೀಚರ್ಸ್ ಅನ್ನು ಅನಾವರಣ ಮಾಡಿದೆ. ಡಿಲೀಟ್ ಫಾರ್ ಎವರಿಒನ್ ಮಾಡುವ ಬದಲು ನೀವು ಆಕಸ್ಮಿಕವಾಗಿ ಡಿಲೀಟ್ ಫಾರ್ ಮಿ ಆಯ್ಕೆ ಬಳಸಿದಲ್ಲಿ ಈ ಫೀಚರ್ಸ್ ಉಪಯೋಗಕ್ಕೆ ಬರಲಿದೆ. ಅಂದರೆ ನೀವು ಡಿಲೀಟ್ ಫಾರ್ ಮಿ ಮೂಲಕ ಸಂದೇಶ ಡಿಲೀಟ್ ಮಾಡಿದರೆ ಅಂಡೂ ಎಂಬ ಆಯ್ಕೆ ಕಾಣುವ ಮೂಲಕ ಈ ಆಕ್ಸಿಡೆಂಟಲ್ ಡಿಲೀಟ್ ಫೀಚರ್ಸ್ ನಿಮ್ಮ ರಕ್ಷಣೆಗೆ ಬರಲಿದೆ. ಈ ಫೀಚರ್ಸ್ ನಿಮಗೆ ಒಂದು ಸ್ಮಾಲ್ ವಿಂಡೋದಲ್ಲಿ ನಿಮ್ಮ ಡಿಲೀಟ್ ಫಾರ್ ಮಿ ಸಂದೇಶಕ್ಕೆ ಹಿಂತಿರುಗಲು ಅವಕಾಶ ನೀಡಲಿದೆ. ಆಕ್ಸಿಡೆಂಟಲ್ ಫೀಚರ್ಸ್ ಬಳಕೆದಾರರಿಗೆ ಐದು ಸೆಕೆಂಡುಗಳ ವಿಂಡೋವನ್ನು ಒದಗಿಸಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Sun, 25 December 22