ನಿಮಗೂ ಬಂತಾ ಈ ಬ್ಲೂ ಸ್ಕ್ರೀನ್ ಎರರ್? ಕಂಪ್ಯೂಟರ್ ದಿಢೀರ್ ರೀಸ್ಟಾರ್ಟ್ ಆಗ್ತಿದ್ಯಾ? ಹೀಗೆ ಮಾಡಿ…
Windows blue screen death error, crowdstrike update problem: ಸೈಬರ್ ಸೆಕ್ಯೂರಿಟಿ ಸಾಫ್ಟ್ವೇರ್ ಆದ ಕ್ರೌಡ್ಸ್ಟ್ರೈಕ್ನ ಅಪ್ಡೇಟ್ವೊಂದರಲ್ಲಿ ಸಮಸ್ಯೆಯಾಗಿ ವಿಂಡೋಸ್ ಸಿಸ್ಟಂಗಳು ಇವತ್ತು ಸ್ಥಗಿತಗೊಂಡಿವೆ. ವಿಶ್ವಾದ್ಯಂತ ಬಹಳಷ್ಟು ಕಂಪ್ಯೂಟರ್ಗಳು ಮತ್ತು ನೆಟ್ವರ್ಕ್ಗೆ ಬಾಧೆಯಾಗಿದೆ. ವಿಂಡೋಸ್ ಕಂಪ್ಯೂಟರ್ಗಳಲ್ಲಿ ಬ್ಲ್ಯೂ ಸ್ಕ್ರೀನ್ ಎರರ್ ಕಾಣಿಸಿಕೊಂಡು ಸಿಸ್ಟಂ ದಿಢೀರ್ ರೀಸ್ಟಾರ್ಟ್ ಆಗಿವೆ. ಇದಕ್ಕೆ ಏನು ಪರಿಹಾರ ಎಂಬ ವಿವರ ಇಲ್ಲಿದೆ...
ನವದೆಹಲಿ, ಜುಲೈ 19: ಇವತ್ತು ವಿಂಡೋಸ್ ತಂತ್ರಾಂಶದಲ್ಲಿ ಬಗ್ ಅಥವಾ ದೋಷ ಕಾಣಿಸಿಕೊಂಡು ವಿಶ್ವಾದ್ಯಂತ ಲಕ್ಷಾಂತರ ಮಂದಿಯ ಕಂಪ್ಯೂಟರ್ಗಳನ್ನು ಬಾಧಿಸಿದೆ. ನೀಲಿ ಬಣ್ಣದ ಬ್ಯಾಕ್ಗ್ರೌಂಡ್ನಲ್ಲಿ ಎರರ್ ಮೆಸೇಜ್ ಕಾಣಿಸಿಕೊಂಡು ಕಂಪ್ಯೂಟರ್ಗಳು ದಿಢೀರನೇ ರೀಸ್ಟಾರ್ಟ್ ಆಗಿವೆ. ಈ ಮುಂಚೆಯೂ ನಿಮ್ಮ ಕಂಪ್ಯೂಟರ್ ಇಂಥದ್ದೇ ಎರರ್ ಜೊತೆಗೆ ರೀಸ್ಟಾರ್ಟ್ ಆಗಿದ್ದಿರಬಹುದು. ಇವತ್ತು ಒಂದೇ ದಿನದಲ್ಲಿ ವಿಶ್ವಾದ್ಯಂತ ಬಹಳಷ್ಟು ಕಂಪ್ಯೂಟರ್ಗಳ ಮೇಲೆ ಇದು ಪರಿಣಾಮ ಬೀರಿದೆ. ಬ್ಯಾಂಕುಗಳು, ನ್ಯೂಸ್ ಚಾನಲ್ಗಳು, ಷೇರು ವಿನಿಮಯ ಕೇಂದ್ರ ಹೀಗೆ ಬಹಳಷ್ಟು ಸೇವೆಗಳು ಸ್ಥಗಿತಗೊಂಡ ಬಗ್ಗೆ ವರದಿಯಾಗಿದೆ. ವಿಮಾನ ಹಾರಾಟ ಕಾರ್ಯಾಚರಣೆ ಮೇಲೂ ಇದು ಪರಿಣಾಮ ಬೀರಿದೆ.
ವಿಂಡೋಸ್ನ ಈ ಬಗ್ ಅನ್ನು ‘ಬ್ಲ್ಯೂ ಸ್ಕ್ರೀನ್ ಆಫ್ ಡೆತ್’ ಎಂದು ಕರೆಯಲಾಗುತ್ತದೆ. ವಿಂಡೋಸ್ ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಅದು ರೀಸ್ಟಾರ್ಟ್ ಆಗಿಬಿಡುತ್ತದೆ. ನೀವು ಇಂಗ್ಲೀಷ್ನಲ್ಲಿ ಈ ಎರರ್ ಮೆಸೇಜ್ ನೋಡಿರಬಹುದು: ‘ಯುವರ್ ಪಿಸಿ ರ್ಯಾನ್ ಇನ್ಟು ಎ ಪ್ರಾಬ್ಲಮ್ ಅಂಡ್ ನೀಡ್ಸ್ ಟು ರೀಸ್ಟಾರ್ಟ್. ವೀ ಆರ್ ಜಸ್ಟ್ ಕಲೆಕ್ಟಿಂಗ್ ಸಮ್ ಎರರ್ ಇನ್ಫೋ, ಅಂಡ್ ದೆನ್ ವೀ ವಿಲ್ ರೀಸ್ಟಾರ್ಟ್ ಫಾರ್ ಯು’ ಎಂದು ಬಂದಿರಬಹುದು.
ಯಾಕೆ ಈ ಬ್ಲೂ ಸ್ಕ್ರೀನ್ ದೋಷ ಕಾಣಿಸುತ್ತೆ?
ಇದು ತಂತ್ರಾಂಶದ ಅಪ್ಡೇಟ್ ಸಮಸ್ಯೆ. ಸಾಫ್ಟ್ವೇರ್ ಅಥವಾ ಹಾರ್ಡ್ವೇರ್ ಸಮಸ್ಯೆ ಆಗಿರಬಹುದು. ಇಂಥ ಗಂಭೀರ ದೋಷ ಕಾಣಿಸಿಕೊಂಡಾಗ ವಿಂಡೋಸ್ ಶಟ್ಡೌನ್ ಆಗಿ ಕೂಡಲೇ ರೀಸ್ಟಾರ್ಟ್ ಆಗಬಹುದು ಎಂದು ಮೈಕ್ರೋಸಾಫ್ಟ್ನ ಬ್ಲಾಗ್ಪೋಸ್ಟ್ವೊಂದರಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ವಿಂಡ್ಸ್ಕ್ರೀನಲ್ಲಿ ಫಾಸ್ಟ್ಯಾಗ್ ಹಾಕದಿದ್ರೆ ಬ್ಲ್ಯಾಕ್ಲಿಸ್ಟ್ ಸೇರ್ತೀರಾ ಹುಷಾರ್..! ಎನ್ಎಚ್ಎಐ ಬಿಗಿನಿಯಮ
ಈಗ ಬಂದಿರುವ ಬಗ್ ವಿಂಡೋಸ್ನದ್ದಲ್ಲ, ಕ್ರೌಡ್ಸ್ಟ್ರೈಕ್ನದ್ದು…
ಇವತ್ತು ಜಾಗತಿಕವಾಗಿ ವಿಂಡೋಸ್ ಕಂಪ್ಯೂಟರ್ಗಳಲ್ಲಿ ಕಾಣಿಸಿಕೊಂಡಿರುವ ಬ್ಲೂ ಸ್ಕ್ರೀನ್ ಡೆತ್ ಎರರ್ಗೆ ವಿಂಡೋಸ್ ತಂತ್ರಾಂಶ ಕಾರಣವಲ್ಲ, ಅದು ಸೈಬರ್ ಸೆಕ್ಯೂರಿಟಿ ಕ್ರೌಡ್ಸ್ಟ್ರೈಕ್ನ ಅಪ್ಡೇಟ್ವೊಂದರಿಂದ ಉಂಟಾದ ದೋಷ ಎನ್ನಲಾಗಿದೆ.
ಇವತ್ತು ಶುಕ್ರವಾರ ಕ್ರೌಡ್ಸ್ಟ್ರೈಕ್ ತನ್ನ ಫಾಲ್ಕನ್ ಸೆನ್ಸಾರ್ ಸಾಫ್ಟ್ವೇರ್ನ ಅಪ್ಡೇಟ್ ಬಿಡುಗಡೆ ಮಾಡಿತ್ತು. ಸೈಬರ್ ದಾಳಿಯಿಂದ ಕಂಪ್ಯೂಟರ್ ಅನ್ನು ರಕ್ಷಿಸಲೆಂದು ಈ ಫಾಲ್ಕನ್ ಸೆನ್ಸಾರ್ ಇರುವುದು. ಆದರೆ, ಇದರ ಇವತ್ತಿನ ಅಪ್ಡೇಟ್ ಮತ್ತು ವಿಂಡೋಸ್ ಮಧ್ಯೆ ತಾಳಮೇಳ ಆಗಿಲ್ಲ. ಇದರಿಂದಾಗಿ ವಿಂಡೋಸ್ನ ಬ್ಲೂ ಸ್ಕ್ರೀನ್ ದೋಷ ಕಾಣಿಸಿಕೊಂಡು ಸಿಸ್ಟಂ ರೀಸ್ಟಾರ್ಟ್ ಆಗುತ್ತಿದೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಸ್ಥಗಿತ: ಏರ್‌ಲೈನ್‌ಗಳು, ಬ್ಯಾಂಕ್‌ಗಳು, ಷೇರು ಮಾರುಕಟ್ಟೆ ಮೇಲೆ ಎಫೆಕ್ಟ್
ಇದಕ್ಕೆ ಪರಿಹಾರ ಇದೆ… ಹೀಗೆ ಮಾಡಿ
ನಿಮಗೂ ಇವತ್ತು ಈ ವಿಂಡೋಸ್ ಬ್ಲೂಸ್ ಸ್ಕ್ರೀನ್ ಎರರ್ ಕಾಣಿಸಿಕೊಂಡಿದ್ದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿರಿ:
- ನಿಮ್ಮ ವಿಂಡೋಸ್ ಅನ್ನು ಸ್ಟಾರ್ಟ್ ಮಾಡಿ ಸೇಫ್ ಮೋಡ್ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್ನಲ್ಲಿ ಬೂಟ್ ಮಾಡಿ.
- C:\Windows\System32\drivers\CrowdStrike directory ಇಲ್ಲಿಗೆ ಹೋಗಿ
- ಇಲ್ಲಿ ‘C-00000291*.sys’ ಎಂಬ ಹೆಸರಿನ ಫೈಲ್ ಅನ್ನು ಹುಡುಕಿರಿ.
- ಈ ಫೈಲ್ ಅನ್ನು ಡಿಲೀಟ್ ಮಾಡಿ.
- ಈಗ ನಿಮ್ಮ ವಿಂಡೋಸ್ ಅನ್ನು ಮಾಮೂಲಿಯ ರೀತಿಯಲ್ಲಿ ಬೂಟ್ ಮಾಡಿ.
ಈ ಮೇಲಿನ ಕ್ರಮದ ಬಳಿಕ ನಿಮ್ಮ ಸಿಸ್ಟಂ ಸರಿಯಾಗಬಹುದು. ಒಂದು ವೇಳೆ ಸರಿಯಾಗಲಿಲ್ಲವೆಂದರೆ ಐಟಿ ಸಹಾಯ ಪಡೆಯಬೇಕಾಗಬಹುದು. ಕ್ರೌಡ್ಸ್ಟ್ರೈಕ್ ಕಂಪನಿ ಕೂಡ ಈ ಅಪ್ಡೇಟ್ ಅನ್ನು ಸರಿಪಡಿಸಿ ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ