Viral Video: ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ; ಮೈ ಜುಮ್ಮೆನಿಸುವಂತಿದೆ ರಕ್ಷಣಾ ಕಾರ್ಯ

| Updated By: ಅಕ್ಷತಾ ವರ್ಕಾಡಿ

Updated on: Jul 21, 2024 | 2:09 PM

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಅನೇಕಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋ ದೃಶ್ಯಾವಳಿಗಳು ನಮ್ಮಲ್ಲಿ ಭಯ ಹುಟ್ಟಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ವೈರಲ್‌ ಆಗಿದ್ದು, 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ. ಈ ದೈತ್ಯ ಹಾವಿನ ರಕ್ಷಣಾ ಕಾರ್ಯದ ಮೈ ಜುಮ್ಮೆನಿಸುವ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral Video: ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ  ಕಾಳಿಂಗ ಸರ್ಪ; ಮೈ ಜುಮ್ಮೆನಿಸುವಂತಿದೆ ರಕ್ಷಣಾ ಕಾರ್ಯ
Follow us on

ಕಾಳಿಂಗ ಸರ್ಪ ಈ ಜಗತ್ತಿನ ಅತಿ ಉದ್ದವಾದ ಹಾಗೂ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದರ ಆಕಾರ, ಬುಸುಗುಡುವಿಕೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಇಂತಹ ದೈತ್ಯ ಗಾತ್ರದ ಕಾಳಿಂಗ ಸರ್ಪಗಳು ಮನುಷ್ಯರ ಕಣ್ಣಿಗೆ ಕಾಣಸಿಗುವುದು ಬಲು ಅಪರೂಪ. ಆದ್ರೆ ಮಲೆನಾಡ ಪ್ರದೇಶಗಳಲ್ಲಿ ಈ ದೈತ್ಯ ಸರ್ಪಗಳು ಆಗೋಮ್ಮೆ ಈಗೊಮ್ಮೆ ಕಾಣ ಸಿಗುತ್ತವೆ. ಇದೀಗ ಇಲ್ಲೊಂದು 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಜನ ವಸತಿ ಪ್ರದೇಶದಲ್ಲಿ ಕಾಣಿಸಿದ್ದು, ಇದರ ರಕ್ಷಣಾ ಕಾರ್ಯದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಭಯಾನಕ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಮಳೆಗಾಲದಲ್ಲಿ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುವುದ ಸಾಮಾನ್ಯ. ಅದೇ ರೀತಿ ಆಗುಂಬೆಯಲ್ಲಿಯೂ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ವನ್ಯಜೀವಿ ಅಧಿಕಾರಿಗಳು ಈ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ರಸ್ತೆ ದಾಟಿ ಬಂದಂತಹ ಈ ದೈತ್ಯ ಕಾಳಿಂಗ ಸರ್ಪ ಮನೆಯೊಂದರ ಕಾಂಪೌಂಡ್‌ ಏರಿ ಅಲ್ಲಿದ್ದ ಮರದ ಕೊಂಬೆಯಲ್ಲಿ ಹಾಯಾಗಿ ಕುಳಿತಿತ್ತು. ಈ ದೈತ್ಯ ಜೀವಿಯನ್ನು ಕಂಡು ಬೆಚ್ಚಿ ಬಿದ್ದ ಆ ಮನೆಯವರು ಮತ್ತು ಅಲ್ಲಿನ ಸ್ಥಳೀಯ ನಿವಾಸಿಗಳು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಎಆರ್‌ಆರ್‌ಎಸ್‌ ತಂಡ ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ಅಪಾಯಗಳು ಸಂಭವಿಸದಂತೆ ಬಹಳ ಜಾಗರೂಕತೆಯಿಂದ ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಆಗುಂಬೆ ರೈನ್‌ ಫಾರೆಸ್ಟ್‌ ಸಂಶೋಧನಾ ಕೇಂದ್ರದ ಫೀಲ್ಡ್‌ ಡೈರೆಕ್ಟರ್‌ ಅಜಯ್‌ ಗಿರಿ (ajay_v_giri) ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಆಗುಂಬೆ ಸಮೀಪದ ಮನೆಯೊಂದರ ಕಾಂಪೌಂಡ್‌ ಬಳಿಯಿದ್ದ ಗಿಡವೊಂದರ ಮೇಲೆ 12 ಅಡಿ ಉದ್ದದ ಹಾವು ಹಾಯಾಗಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಎಆರ್‌ಆರ್‌ಎಸ್‌ ತಂಡ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೈತ್ಯ ಹಾವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದು ಜೊತೆಗೆ ಹಾವನ್ನು ರಕ್ಷಣೆ ಮಾಡಿದ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ