
ಪ್ರೀತಿ ಮತ್ತು ಬಾಂಧವ್ಯ ಮನುಷ್ಯರ ನಡುವೆ ಮಾತ್ರವಲ್ಲದೆ ಪ್ರಾಣಿಗಳು ಮತ್ತು ಪಕ್ಷಿಗಳ ನಡುವೆಯೂ ಇದೆ. ಪ್ರೀತಿ ಕಾಳಜಿ ತೋರಿಸುವುದರರಲ್ಲಿ ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳು ಒಂದು ಕೈ ಮೇಲು ಅಂತಾನೇ ಹೇಳಬಹುದು. ಅವುಗಳು ತಮ್ಮ ಪ್ರೀತಿಯ ಸಂಗಾತಿಯನ್ನು ಬಿಟ್ಟು ಬದುಕಲಾರವು. ಅಷ್ಟು ನಿಸ್ವಾರ್ಥ ಮತ್ತು ಪರಿಶುದ್ಧ ಪ್ರೇಮ ಈ ಮೂಕ ಜೀವಿಗಳದ್ದು. ಇದೇ ರೀತಿ ಪ್ರೀತಿ ಮತ್ತು ಕಾಳಜಿಯ ನಿಜವಾದ ಅರ್ಥವನ್ನು ಮನುಷ್ಯರಿಗೆ ಕಲಿಸುವಂತಹ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೋಡಿ ಹಕ್ಕಿಯ ನಿಷ್ಕಲ್ಮಶ ಪ್ರೀತಿ ಎಂತಹ ಕಲ್ಲುಮನಸ್ಸನ್ನೂ ಕರಗಿಸುವಂತಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಂಸ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರೀತಿ ಮತ್ತು ನಿಷ್ಠೆ. ನೀವು ಹೃದಯವನ್ನು ಹೊಂದಿದ್ದರೆ ಖಂಡಿತವಾಗಿಯೂ ಈ ದೃಶ್ಯ ನಿಮ್ಮ ಕಣ್ಣಂಚಲ್ಲಿ ನೀರು ತರಿಸುತ್ತದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಪಕ್ಷಿಯೊಂದರ ಪರಿಶುದ್ಧ ಪ್ರೀತಿ ಮತ್ತು ನಿಷ್ಠೆಯನ್ನು ಕಣ್ತುಂಬಿಕೊಳ್ಳಬಹುದು.
ಗುಬ್ಬಿಯಂತಹ ಎರಡು ಪುಟ್ಟ ಪಕ್ಷಿಗಳಿರುತ್ತವೆ. ಅದರಲ್ಲಿ ಒಂದು ಹಕ್ಕಿ ಸತ್ತುಹೋಗಿರುತ್ತದೆ. ತೀರಿಕೊಂಡ ಸಂಗಾತಿಯ ಪಕ್ಕದಲ್ಲಿಯೇ ಕುಳಿತು ಇನ್ನೊಂದು ಹಕ್ಕಿ ಸಂಕಟಪಡುತ್ತಿರುತ್ತದೆ. ಯಾರೋ ಒಬ್ಬ ವ್ಯಕ್ತಿ ಬಂದು ಆ ಹಕ್ಕಿಯನ್ನು ಆಚೆ ಸರಿಸಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ತನ್ನ ಸಂಗಾತಿಯಿಂದ ಬೇರ್ಪಡಲು ಬಯಸದ ಹಕ್ಕಿ ತನ್ನ ಸಂಗಾತಿಯ ಜೊತೆಯಾಗಿಯೇ ಇರುತ್ತದೆ. ಆದರೆ ಕೊನೆಯಲ್ಲಿ ಸಂಗಾತಿಯ ಅಗಲಿಕೆಯ ನೋವಿನಿಂದ ಆ ಇನ್ನೊಂದು ಹಕ್ಕಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ನಂತರ ಆ ಎರಡು ಹಕ್ಕಿಗಳನ್ನು ಜೊತೆಯಾಗಿ ಮಣ್ಣು ಮಾಡಲಾಗುವ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು. ಇದು ಎಲ್ಲರ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು, ಸಾವಿನಲ್ಲೂ ಜೊತೆಯಾದ ಈ ಜೋಡಿ ಹಕ್ಕಿಯ ನಿಜವಾದ ಪ್ರೀತಿ ನಿಷ್ಠೆ.
ಇದನ್ನೂ ಓದಿ: Viral Video: ಈತನಿಂದ ಕಲಿಯಬೇಕು ಬದುಕಿನ ಪಾಠ, ಕಾಲಿಗೆ ಗಾಯವಾಗಿದ್ದರೂ ರಸ್ತೆ ಬದಿಯಲ್ಲಿ ಕೀಚೈನ್ ಮಾರಾಟ ಮಾಡಿದ ಪುಟ್ಟ ಬಾಲಕ
ಜೂನ್ 21ರಂದು ಹಂಚಿಕೊಳ್ಳಲಾದ ಈ ವೀಡಿಯೋ 79.2 ಸಾವಿರ ವೀಕ್ಷಣೆಗಳನ್ನು ಹಾಗೂ 1,436 ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವೀಡಿಯೊವನ್ನು ನೋಡಿ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಇದುವೇ ನಿಜವಾದ ಪ್ರೀತಿಯಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇನ್ನೊಂದು ಪಕ್ಷಿ ಜೀವಂತವಾಗಿತ್ತಲ್ಲ, ಅದು ಹೇಗೆ ಪ್ರಾಣ ಕಳೆದುಕೊಂಡದ್ದು ಪಕ್ಷಿಗಳು ಸಂಗಾತಿಯ ಅಗಲಿಕೆಯ ದುಃಖದಿಂದ ಸಾಯುತ್ತವೆಯೇ?’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರೀತಿ ಮತ್ತು ಪರಿಶುದ್ಧತೆಯ ಹೃದಯವನ್ನು ಕಂಡುಕೊಳ್ಳುವುದೇ ಅಪರೂಪವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ