ಯಾರಿಗೂ ತಲೆಕೆಡಿಸಿಕೊಳ್ಳದೆ ವಿಮಾನದೊಳಗೆ ಸಿಗರೇಟು ಸೇದಿದ ಮಹಿಳೆ; ಗಾಬರಿ ಬಿದ್ದ ಸಹ ಪ್ರಯಾಣಿಕರು ಮಾಡಿದ್ದೇನು?
ಮಹಿಳೆಯೊಬ್ಬರು ವಿಮಾನದೊಳಗೆ ಸಿಗರೇಟು ಹಚ್ಚಿ ಸಹಪ್ರಯಾಣಿಕರನ್ನು ವಿಚಲಿತಗೊಳಿಸಿದ್ದಾರೆ. ಈ ಸಂದರ್ಭದ ವಿಡಿಯೊ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಯುವಕನೊಬ್ಬ ವಿಮಾನದೊಳಗೆ ಸಿಗರೇಟನ್ನು ಹಚ್ಚಿ, ಬಂಧನಕ್ಕೊಳಗಾಗಿದ್ದು ಸುದ್ದಿಯಾಗಿತ್ತು. ಆ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಅಮೇರಿಕಾದಲ್ಲಿ ಮತ್ತೊಂದು ಇಂಥದ್ದೇ ಘಟನೆ ವರದಿಯಾಗಿದೆ. ಫ್ಲೋರಿಡಾಕ್ಕೆ ತೆರಳುವ ಸ್ಪಿರಿಟ್ ಏರ್ಲೈನ್ಸ್ನ ವಿಮಾನವೊಂದರಲ್ಲಿದ್ದ ಮಹಿಳೆ ವಿಮಾನದ ಕ್ಯಾಬಿನ್ ಒಳಗೆ ಸಿಗರೇಟ್ ಎಳೆದು ವಿವಾದಕ್ಕೀಡಾಗೀದ್ದಾರೆ. ಈ ಸಂದರ್ಭದ ವಿಡಿಯೊ ವೈರಲ್ ಆಗಿದ್ದು, ಮಹಿಳೆಯ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆ ಸಿಗರೇಟು ಎಳೆಯಲು ಪ್ರಾರಂಭಿಸಿದ ತಕ್ಷಣ ಪಕ್ಕದಲ್ಲಿದ್ದ ಇತರ ಪ್ರಯಾಣಿಕರು ದೂರು ನೀಡಿದ್ದಾರೆ. ವಿಮಾನದೊಳಗೆ ಆಗಮಿಸಿದ ಪೊಲೀಸರು, ಮಹಿಳೆಯ ಬ್ಯಾಗ್ ಇದೆಯೇ ಎಂದು ವಿಚಾರಿಸಿ ವಿಮಾನದಿಂದ ಹೊರಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಘಟನೆಯ ಕುರಿತಂತೆ ಸಹ ಪ್ರಯಾಣಿಕರಾಗಿದ್ದ, ಅಲೆಕ್ಸಾ ಮಜ್ದಲವಿ ಫಾಕ್ಸ್ ನ್ಯೂಸ್ಗೆ ಹೇಳಿಕೆ ನೀಡಿದ್ದು, ಆ ಮಹಿಳೆಯ ನಡೆಯಿಂದ ನಮಗೆ ಗಾಬರಿಯಾಯಿತು ಎಂದಿದ್ದಾರೆ. ‘‘ಆಕೆ ಸಿಗರೇಟನ್ನು ತೆಗೆದು, ಸೇದಲು ಆರಂಭಿಸಿದರು. ಇದು ನಿಜವಾಗಿಯೂ ನಮ್ಮ ಕಣ್ಣೆದುರೇ ನಡೆಯುತ್ತಿದೆಯೇ ಎಂದು ಎಲ್ಲರಿಗೂ ಗಾಬರಿಯಾಯಿತು’’ ಎಂದು ಅಲೆಕ್ಸಾ ಹೇಳಿದ್ದಾರೆ.
ಫೋರ್ಟ್ ಲೌಡರ್ಡೇಲ್- ಹಾಲಿವುಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಒಂದು ಗಂಟೆ ಕಾಯಬೇಕಾಗಿ ಬಂದಿತಂತೆ. ಅದರಿಂದ ಬೇಸತ್ತ ಮಹಿಳೆ ಹಾಗೆ ಮಾಡಿರಬಹುದು. ಆದರೆ ಇದರಿಂದಾಗಿ ವಿಮಾನದೊಳಗಿದ್ದ ಪ್ರಯಾಣಿಕರಿಗೆ ಹಾಗೂ ಅಸ್ತಮಾ ರೋಗಿಯಾದ ಅಲೆಕ್ಸಾ ಅವರಿಗೆ ಗಾಬರಿಯಾಯಿತು ಎಂದು ಅಲೆಕ್ಸಾ ತಿಳಿಸಿದ್ದಾರೆ. ಸಿಗರೇಟು ಎಳೆದ ಮಹಿಳೆಗೆ ಇತರರು ಮನವರಿಕೆ ಮಾಡಿದರೂ ಆಕೆ ಅದನ್ನು ತಲೆಗೆ ಹಾಕಿಕೊಂಡಿಲ್ಲ ಎಂದು ಅಲೆಕ್ಸಾ ದೂರಿದ್ದಾರೆ. ತಕ್ಷಣ ಮೇಲಧಿಕಾರಿಗಳಿಗೆ ಪ್ರಯಾಣಿಕರು ತಿಳಿಸಿದ್ದರಿಂದ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಯಾವುದೇ ಬಂಧನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಶ್ವದ ಯಾವುದೇ ಭಾಗದಲ್ಲಿ ವಿಮಾನದೊಳಗೆ ಧೂಮಪಾನ ಮಾಡುವುದು ಅಪರಾಧ ಎಂಬ ನೀತಿ 1988ರಿಂದ ಜಾರಿಗೆ ಬಂದಿದೆ. ಅಮೇರಿಕಾದಲ್ಲಿ ವಿಮಾನದೊಳಗೆ ಧೂಮಪಾನ ಮಾಡಿದರೆ ಸುಮಾರು 4000 ಡಾಲರ್ ದಂಡ ವಿಧಿಸುವ ಅವಕಾಶವಿದೆ.
ಇದನ್ನೂ ಓದಿ:
ಅಫ್ಘನ್ನಿಂದ ಪಾರಾಗಿ ಬೆಲ್ಜಿಯಂನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ ಬಾಲಕಿಯ ಸಂಭ್ರಮ ನೋಡಿ
Tokyo Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಗ್ರೆಟ್ ಬ್ರಿಟನ್ ದಂಪತಿ
(A woman start smoking in US flight what happened next see video)