ಆಮ್ರಸ್ ಚೀಝ್ ದೋಸೆ; ಕೊಲ್ಲಬೇಡಿರೋ ದೋಸೆಯನ್ನು ಎನ್ನುತ್ತಿರುವ ನೆಟ್ಟಿಗರು
Mango : ಅಹಮದಾಬಾದ್ ಮೂಲದ ಬ್ಲಾಗರ್ ಹಂಚಿಕೊಂಡ ಈ ವಿಡಿಯೋ ಈತನಕ 3ಮಿಲಿಯನ್ ಜನರ ಕಣ್ಣಿಗೆ ಬಿದ್ದಿದೆ. ಅಲ್ಲಿಯ ಬೀದಿಬದಿ ತಯಾರಾದ ಈ ದೋಸೆಯನ್ನು ನೋಡಿ ಸಾವಿರಾರು ಜನರು 'ಡಿಸ್ಲೈಕ್'ಗಾಗಿ ಮೊರೆ ಇಟ್ಟಿದ್ದಾರೆ.

Viral : ಚಾಕೋಲೇಟ್ ಪಾನಿಪುರಿ, ಹಣ್ಣುಗಳ ಚಹಾ ಹೀಗೆ ಇನ್ನೂ ಏನೇನೋ ವಿಚಿತ್ರ ಪಾಕಪ್ರಯೋಗಗಳನ್ನು ಮಾಡಿದಾಗೆಲ್ಲ ನೆಟ್ಟಮಂದಿ ಸರಿಯಾಗಿ ಝಾಡಿಸಿದ್ದಾರೆ! ಆದರೀಗ ಮತ್ತದೇ ಝಾಡಿಸುವಿಕೆಗೆ ಅವರಿಗೆ ಅವಕಾಶ ಒದಗಿದೆ. ಈಗ ಯಾರು ಏನು ಎಲ್ಲಿ ಮತ್ತೆಂಥಾ ಪಾಕಪ್ರಾವೀಣ್ಯ ಮೆರೆದಿದ್ದಾರೆ ಎಂಬ ಕುತೂಹಲ ನಿಮಗೀಗಾಗಲೇ ಹುಟ್ಟಿತೇ? ಈಗಂತೂ ಮಾವೋತ್ಸವ! ಮಾವಿನಹಣ್ಣಿನ ಶೀಕರಣಿ ಅಥವಾ ರಸಾಯನದ ಸ್ವಾದಲ್ಲಿ ದಿನವೂ ಮುಳುಗಿ ಏಳುತ್ತಿದ್ದೀರಿ; ಪೂರಿಯೊಂದಿಗೆ, ಚಪಾತಿಯೊಂದಿಗೆ, ಹೋಳಿಗೆಯೊಂದಿಗೂ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.
ಈ ವಿಡಿಯೋದಲ್ಲಿ ದೋಸೆ ಹಿಟ್ಟಿನ ಮೇಲೆ ಶೀಕರಣಿ ಹರಡಿ, ಚೀಝ್, ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊತ್ತಂಬರಿ ಸೊಪ್ಪು ಹಾಕಲಾಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ, ಇಂಥ ದೋಸೆಯನ್ನು ಬ್ಯಾನ್ ಮಾಡಿ ಎಂದು ಸಮರ ಸಾರುತ್ತಿದ್ದಾರೆ. ಅಹಮದಾಬಾದ್ನ ರಸ್ತೆಬದಿ ಅಂಗಡಿಯಲ್ಲಿ ತಯಾರಿಸುವಾಗ ಈ ವಿಡಿಯೋ ಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತೀಯರ ಪರಮಖಾದ್ಯ ದೋಸೆಯನ್ನು ಈ ಉತ್ತರದವರು ಯಾಕೆ ಹೀಗೆಲ್ಲ ಹತ್ಯೆಗೈಯ್ಯುತ್ತಾರೆ ಎಂದು ಸಾಕಷ್ಟು ಜನ ಕುಪಿತರಾಗಿದ್ದಾರೆ.
ಇದನ್ನೂ ಓದಿ : ಹಸಿವಾದೊಡೆ ಭಿಕ್ಷಾನ್ನಗಳುಂಟು; ಅಂಗಡಿಯಿಂದ ಡೋನಟ್ ಪಡೆದ ರ್‍ಯಾಕೂನ್
ಅಹಮದಾಬಾದ್ ಮೂಲದ ಬ್ಲಾಗರ್ ಹಂಚಿಕೊಂಡ ಈ ವಿಡಿಯೋ ಈತನಕ 3ಮಿಲಿಯನ್ ಜನರ ಕಣ್ಣಿಗೆ ಬಿದ್ದಿದೆ. ಸಾವಿರಾರು ಜನರು ‘ಡಿಸ್ಲೈಕ್’ಗಾಗಿ ಮೊರೆ ಇಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಕಲ್ಲಂಗಡಿ ಹಣ್ಣು ಮತ್ತು ಅದರ ಬೀಜದ ದೋಸೆ ತಯಾರಾಗುತ್ತದೆ ಕಾಯುತ್ತಿರಿ ಎಂದು ವ್ಯಂಗ್ಯವಾಡಿದ್ದಾರೆ ಒಬ್ಬರು.
ಈಗೇನು ನೀವೂ ಈ ಆಮ್ರಸ್ ಚೀಸ್ ದೋಸೆ ಮಾಡೋದಕ್ಕೆ ಪ್ರಯತ್ನಿಸ್ತೀರಾ ಹೇಗೆ?!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:47 pm, Sat, 13 May 23