
Baking : ಜಗತ್ತಿನಲ್ಲಿರುವ ಪ್ರಸಿದ್ಧ ವ್ಯಕ್ತಿಗಳನ್ನು, ಸಿನೆಮಾ ತಾರೆಯರನ್ನು, ರಾಜಕಾರಣಿಗಳನ್ನು ತಿಂಗಳಾನುಗಟ್ಟಲೆ ಗುಲಾಬಿಯಲ್ಲಿ ಅದ್ದಿ ತೆಗೆದಿಡುತ್ತಿದ್ದ ಎಐ ಕಲಾವಿದರು ವಿಶ್ರಾಂತಿ ತೆಗೆದುಕೊಳ್ಳುತ್ತಿರಬಹುದು. ಆದರೆ ಈ ಜ್ವರ ಸುಳಿವಿಲ್ಲದಂತೆ ಇದೀಗ ಬೇಕರಿಯವರಿಗೆ ಹರಡಿಕೊಂಡಿದೆ! ದೆಹಲಿಯಲ್ಲಿ ಬಾರ್ಬಿ ಥೀಮ್ ಕೇಕ್ ಟ್ರೆಂಡಿಂಗ್ನಲ್ಲಿದ್ದು 18ರಿಂದ 30 ವರ್ಷದೊಳಗಿನ ಯುವತಿಯರನ್ನು ಆಕರ್ಷಿಸುತ್ತಿದೆ. ಅಂತೂ ಬಾರ್ಬಿ ಸಿನೆಮಾ (Barbie Movie) ಥಿಯೇಟರುಗಳಲ್ಲಿ ಬಿಡುಗಡೆಯಾದಾಗಿನಿಂದ ವ್ಯಾಪಾರ ಜಗತ್ತು ಮತ್ತು ಅಂತರ್ಜಾಲ ಜಗತ್ತು ಗುಲಾಬಿ ನಶೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇಷ್ಟು ದಿನ ಕಣ್ಣಿಗಷ್ಟೇ ಕಾಣುತ್ತಿದ್ದ ಈ ಗುಲಾಬಿ ಇದೀಗ ಕೇಕ್ ಮೂಲಕ ಗುಲಾಬಿ ನಾಲಗೆಯನ್ನೂ ಆಳಲು ಹೊರಟಿದೆ!
ಬಾರ್ಬಿ ಥೀಮ್ನಡಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದೆಹಲಿ ಯುವತಿಯರು
ದೆಹಲಿಯ ಹೋಮ್ ಬೇಕರ್ಗಳು #ComeOnBarbieLetsGoBake ಎಂದು ಬಾರ್ಬಿ ಕೇಕ್ಗಳನ್ನು ಉತ್ಸಾಹದಿಂದ ತಯಾರಿಸುತ್ತಿದ್ದಾರೆ. ಗ್ರೇಟರ್ ಕೈಲಾಶ್ನ ಗೃಹಿಣಿ ಜಿಯಾ ಮಲ್ಹೋತ್ರಾ, ‘ಜು. 29ರಂದು ನನ್ನ 30ನೇ ಹುಟ್ಟುಹಬ್ಬವಿತ್ತು. ಅದಕ್ಕಿಂತ ಮೊದಲು ಬಾರ್ಬಿ ಸಿನೆಮಾ ನೋಡಿದ್ದೆ. ನನಗೆ ನಾನು ಚಿಕ್ಕವಳಂತೆ ಭಾಸವಾಗಬೇಕು ಅಂಥ ಥೀಮ್ ಪಾರ್ಟಿಯಡಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ಆಗ ಕೈಹಿಡಿದವಳೇ ಬಾರ್ಬಿ! ದೆಹಲಿಯ ಬೇಕರ್ಗೆ ಫೋನ್ ಮಾಡಿ ಮಾತನಾಡಿದೆ. ಅದಕ್ಕೆ ಅವರು, ನೀವಷ್ಟೇ ಅಲ್ಲ ಇದೇ ಥೀಮಿನಡಿ ಇಂದು 7 ಜನರು ಆರ್ಡರ್ ಮಾಡಿದ್ದನ್ನು ಹೇಳಿದರು” ಎಂದಿದ್ದಾರೆ.
ಜಿಯಾ ಮಲ್ಹೋತ್ರಾ ಮಾಲವೀಯನಗರದ ಬೇಕರಿಯಲ್ಲಿ ಕೇಕ್ ಆರ್ಡರ್ ಮಾಡಿದ್ದಾರೆ. ಇದರ ಮಾಲೀಕ ಸಾರಾ ತನೇಜಾ, ”ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಿಗೆ ಬಾರ್ಬಿ ಕೇಕ್ಗಳ ಬೇಡಿಕೆ ಇತ್ತು. ಆದರೆ ಈ ಸಿನೆಮಾ ಬಂದ ಮೇಲೆ 18ರಿಂದ 30 ವರ್ಷದೊಳಗಿನ ಹೆಣ್ಣುಮಕ್ಕಳಿಂದ ಆರ್ಡರ್ ಸ್ವೀಕರಿಸುತ್ತಿದ್ದೇವೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಲ್ಲಿ ಈ ಕೇಕ್ಗಳು ವಿಶೇಷ ಪಾತ್ರ ವಹಿಸುತ್ತಿವೆ. ಈ ಸಿನೆಮಾ ಬಿಡುಗಡೆಯಾದಾಗಿನಿಂದಲೂ ನಾನು ಈ ಥೀಮ್ನಡಿ 24 ಕೇಕ್ಗಳನ್ನು ತಯಾರಿಸಿದ್ದೇನೆ’ ಎಂದಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:17 pm, Thu, 3 August 23