ಉತ್ತರ ಪ್ರದೇಶದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಪ್ರಯಾಗ್ರಾಜ್ ರಸ್ತೆ ಬದಿ ಕೂತು ತರಕಾರಿ ಮಾರಿದ ಪ್ರಸಂಗ
ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ ಅನ್ನುವುದನ್ನು ಮನಗಂಡ ಮಿಶ್ರಾ ಅವರು ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಮುಂದಾದರು. ಫೇಸ್ಬುಕ್ ತಮ್ಮ ಟೈಮ್ ಲೈನ್ನಲ್ಲಿ ಅವರು ಮೊಟ್ಟ ಮೊದಲು ಸ್ಪಷ್ಟಪಡಿಸಿದ ಅಂಶವೆಂದರೆ, ಆ ಚಿತ್ರದಲ್ಲಿರೋದು ಬೇರೆ ಯಾರೂ ಅಲ್ಲ ಅದು ತಾನೇ ಅನ್ನೋದು.
ಲಖನೌ: ಉತ್ತರ ಪ್ರದೇಶದಲ್ಲಿ ವಿಶೇಷ ಕಾರ್ಯದರ್ಶಿ ರ‍್ಯಾಂಕಿನ ಐ ಎ ಎಸ್ ಅಧಿಕಾರಿಯೊಬ್ಬರು ತರಕಾರಿ ಮಾರಲು ಆರಂಭಿಸುತ್ತಾರೆಂದರೆ ಅಲ್ಲಿನ ವ್ಯವಸ್ಥೆಯಲ್ಲಿ ಎಲ್ಲೋ ತಪ್ಪಾಗಿದೆ ಅಂತಲೇ ಆರ್ಥ. ಇಲ್ಲಿರುವ ಚಿತ್ರ ನೋಡಿ. ಉತ್ತರ ಪ್ರದೇಶ ಸಾರಿಗೆ ವಿಭಾಗದ ವಿಶೇಷ ಅಧಿಕಾರಿಯಾಗಿರುವ ಅಖಿಲೇಶ್ ಮಿಶ್ರಾ ಅವರು ಪ್ರಯಾಗ್ರಾಜ್ನಲ್ಲಿ ತರಕಾರಿ ಮಾರುತ್ತಾ ಕೂತಿದ್ದಾರೆ. ಅವರ ಎದುರುಗಡೆ ಒಂದಿಬ್ಬರು ಗ್ರಾಹಕರಿದ್ದಾರೆ. ಈ ಚಿತ್ರಗಳನ್ನು ಎಲ್ಲಿಂದಲೋ ಎತ್ತಿಲ್ಲ. ಇವು ಇದೇ ಅಧಿಕಾರಿಯ ಫೇಸ್ ಬುಕ್ ಟೈಮ್ ಲೈನ್ನಲ್ಲಿವೆ! ರಸ್ತೆ ಬದಿ ತಲೆ ಮೇಲೆ ಸೂರು ಸಹ ಇಲ್ಲದ ಶೆಡ್ ಕೂಡ ಅಲ್ಲದ ಒಂದು ತರಕಾರಿ ಅಂಗಡಿಯಲ್ಲಿ ಗೋಣಿತಟ್ಟಿನ ಚೀಲದ ಮೇಲೆ ಕೂತು ಕಾಯಿಪಲ್ಲೆ ಮಾರುವ ಸ್ಥಿತಿ ಅಧಿಕಾರಿಗೆ ಬಂದಿದೆ ಎಂದರೆ ಅವರು ಕೆಲಸ ಕಳೆದುಕೊಂಡು ಹೊಟ್ಟೆಪಾಡಿಗಾಗಿ ಇದನ್ನು ಮಾಡುತ್ತಿರಬಹುದೆಂಬ ಶಂಕೆ ಮೂಡೋದು ಸಹಜವೇ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜೋರಾದ ಚರ್ಚೆ ಶುರುವಾಯಿತು. ಜನ ತಮ್ಮದೇ ಆದ ಕತೆಗಳನ್ನು ಕಟ್ಟಲಾರಂಭಿಸಿದರು. ಮಿಶ್ರಾ ಅವರನ್ನು ಬಲ್ಲವರು, ಬಂಧು ಬಳಗದವರು, ಸ್ನೇಹಿತರು ಅವರಿಗೆ ಫೋನ್ ಮಾಡಲಾರಂಭಿಸಿದರು. ಏನು ಕತೆ, ಯಾಕೆ ಹೀಗೆ, ನಮ್ಮಿಂದ ಏನಾದರೂ ಸಹಾಯ ಬೇಕಿತ್ತಾ ಅಂತ ಕೇಳಿದರು. ಕೆಲವರು ಪೋಟೋಗಳನ್ನು ಮಾರ್ಫ್ ಮಾಡಲಾಗಿದೆ, ಅದು ಅಖಿಲೇಶ್ ಮಿಶ್ರಾ ಅಲ್ಲ ಅಂತ ಕಾಮೆಂಟ್ಗಳನ್ನು ಮಾಡಿದರು.
ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ ಅನ್ನುವುದನ್ನು ಮನಗಂಡ ಮಿಶ್ರಾ ಅವರು ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಮುಂದಾದರು. ಫೇಸ್ಬುಕ್ ತಮ್ಮ ಟೈಮ್ ಲೈನ್ನಲ್ಲಿ ಅವರು ಮೊಟ್ಟ ಮೊದಲು ಸ್ಪಷ್ಟಪಡಿಸಿದ ಅಂಶವೆಂದರೆ, ಆ ಚಿತ್ರದಲ್ಲಿರೋದು ಬೇರೆ ಯಾರೂ ಅಲ್ಲ ಅದು ತಾನೇ ಅನ್ನೋದು. ನಂತರ ಅವರು, ಆ ಸನ್ನಿವೇಶ ಸೃಷ್ಟಿಯಾದ ಕತೆಯನ್ನು ಹೇಳಿದ್ದಾರೆ.
‘ಗುರುವಾರದಂದು ಅಧಿಕೃತ ಕೆಲಸದ ನಿಮಿತ್ತ ನಾನು ಪ್ರಯಾಗ್ರಾಜ್ ಹೋಗಿದ್ದೆ. ಅಲ್ಲಿಂದ ವಾಪಸ್ಸಾಗುವಾಗ ರಸ್ತೆ ಬದಿಯ ಈ ಅಂಗಡಿಯಲ್ಲಿ ತಾಜಾ ತರಕಾರಿಗಳು ಕಾಣಿಸಿದವು. ಒಂದಷ್ಟು ತರಕಾರಿ ಕೊಳ್ಳುವ ಉದ್ದೇಶದಿಂದ ವಯಸ್ಸಾದ ಹೆಣ್ಣುಮಗಳು ಕೂತಿದ್ದ ಅಂಗಡಿಗೆ ಹೋದಾಗ ಆಕೆ, ಅಲ್ಲೇ ಆಡಿಕೊಂಡಿದ್ದ ತನ್ನ ಮಗು ಬಹಳ ದೂರ ಹೋಗಿಬಿಟ್ಟಿದೆ, ಮಗುವನ್ನು ಕರೆತರುವವರೆಗೆ ಅಂಗಡಿ ನೋಡಿಕೊಳ್ಳಿ ಅಂತ ನನಗೆ ಹೇಳಿ ಹೊರಟೇ ಬಿಟ್ಟಳು,’ ಎಂದು ಮಿಶ್ರಾ ಬರೆದುಕೊಂಡಿದ್ದಾರೆ.
‘ಆಕೆ ಕೂತಿದ್ದ ಜಾಗದಲ್ಲಿ ನಾನು ಕುಳಿತ ತಕ್ಷಣವೇ ಒಬ್ಬ ಗ್ರಾಹಕ ಮತ್ತು ಇನ್ನೊಬ್ಬ ವ್ಯಾಪಾರಿ ಅಲ್ಲಿಗೆ ಬಂದರು. ಏತನ್ಮಧ್ಯೆ, ನನ್ನ ಸ್ನೇಹಿತರೊಬ್ಬರು ನನ್ನ ಫೋನ್ ತೆಗೆದುಕೊಂಡು ಫೋಟೋಗಳನ್ನು ಕ್ಲಿಕ್ಕಿಸಿ ನನ್ನ ಪೇಸ್ಬುಕ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದರು. ಈ ಫೋಟೋಗಳನ್ನು ನಾನೂ ಸಹ ಇವತ್ತೇ ನೋಡಿದ್ದು. ಇದು ತಮ್ಮೆಲ್ಲರ ಗಮನಕ್ಕೆ..’ ಎಂದು ಹಿರಿಯ ಐಎಎಸ್ ಅಧಿಕಾರಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಲವಂತವಾಗಿ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಬಂಧನ; ವಿಡಿಯೋ ವೈರಲ್