ಹಣ ಕಂಡರೆ ಹೆಣ ಕೂಡಾ ಬಾಯಿ ಬಿಡುತ್ತದೆ ಎಂಬ ಮಾತೊಂದಿದೆ. ಈ ಮಾತಿಗೆ ಸೂಕ್ತ ನಿದರ್ಶನದಂತಿರುವ ಹಲವಾರು ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಕೆಲವರು ದುಡ್ಡಿನಾಸೆಗೆ ದರೋಡೆ, ಕಳ್ಳತನ ಮಾಡಿದ್ರೆ, ಹಣಕ್ಕಾಗಿ ಕೊಲೆಗಳೂ ನಡೆದ ಉದಾಹರಣೆಗಳಿವೆ. ಇಲ್ಲೊಂದು ಇಂತಹದ್ದೇ ವಿಚಿತ್ರ ಘಟನೆ ನಡೆದಿದ್ದು, ಪಿಂಚಣಿ ಹಣದ ಆಸೆಗೆ ಬಿದ್ದು, ದಂಪತಿಗಳಿಬ್ಬರು ಖತರ್ನಾಕ್ ಪ್ಲ್ಯಾನ್ ಒಂದನ್ನು ಮಾಡಿ 40 ವರ್ಷಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 12 ಬಾರಿ ಡಿವೋರ್ಸ್ ನೀಡಿ ಮರು ಮದುವೆಯಾಗಿ ಇದೀಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕಿಲಾಡಿ ದಂಪತಿಯ ಮದುವೆ-ಡಿವೋರ್ಸ್ ಸ್ಟೋರಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಐರೋಪ್ಯ ರಾಷ್ಟ್ರವಾದ ಆಸ್ಟ್ರಿಯಾದಲ್ಲಿ ಈ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ವಿಯೆನ್ನಾದ ದಂಪತಿಗಳಿಬ್ಬರು ಮದುವೆ, ವಿಚ್ಛೇದನ ಹೀಗೆ ಒಂದಲ್ಲ ಎರಡಲ್ಲ ಅನುಕ್ರಮವಾಗಿ 12 ಬಾರಿ ಡಿವೋರ್ಸ್ ಪಡೆದುಕೊಂಡು ಪರಸ್ಪರ ಮದುವೆಯಾಗಿದ್ದಾರೆ. ಸರ್ಕಾರದಿಂದ ಸಿಗುವ ಪಿಂಚಣಿ ಹಣಕ್ಕಾಗಿ ದಂಪತಿ ಈ ನಾಟಕವಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಈ ಮಹಿಳೆ 1981 ರಲ್ಲಿ ತನ್ನ ಮೊದಲ ಪತಿಯನ್ನು ಕಳೆದುಕೊಂಡಳು. ಇದಾದ ಬಳಿಕ ಆಕೆಗೆ ಸುಮಾರು $28,300 (24 ಲಕ್ಷ) ವಿಧವಾ ಪಿಂಚಣಿ ಸಿಗಲಾರಂಭಿಸಿತು. ಆಕೆ ಎರಡನೇ ಮದುವೆಯಾದ ಬಳಿಕ ಆಕೆಗೆ ಸಿಗುತ್ತಿದ್ದ ಪಿಂಚಣಿ ಕೂಡಾ ಸ್ಥಗಿತವಾಗುತ್ತದೆ. ಈ ಸಂದರ್ಭದಲ್ಲಿ ಕಾನೂನನ್ನು ದುರುಪಯೋಗ ಮಾಡಿಕೊಳ್ಳುವ ಅದ್ಭುತ ಐಡಿಯಾವನ್ನು ಕಂಡುಕೊಂಡ ಈ ದಂಪತಿ ಡಿವೋರ್ಸ್ ನಾಟಕವಾಡಲು ಶುರು ಮಾಡುತ್ತಾರೆ. ಹೌದು ಇವರು ಮದುವೆಯಾಗಿ ಆರು ವರ್ಷದ ಬಳಿಕ ವಿಚ್ಛೇದನವನ್ನು ಪಡೆದು ಮತ್ತೊಮ್ಮೆ ಆಕೆ ವಿಧವಾ ಪಿಂಚಣಿಗಾಗಿ ಅರ್ಜಿ ಸಲ್ಲಿಸುತ್ತಾಳೆ. ಈ ಪಿಂಚಣಿ ಹಣ ಸಿಕ್ಕ ಬಳಿಕ ಮತ್ತೊಮ್ಮೆ ತನ್ನ ಗಂಡನನ್ನು ಮರು ಮದುವೆಯಾಗುತ್ತಾಳೆ. ಹೀಗೆ ಇವರಿಬ್ಬರು ಪ್ರತಿ ಮೂರು ವರ್ಷಕ್ಕೊಮ್ಮೆ ಡಿವೋರ್ಸ್ ಪಡೆಯುತ್ತಾ ಪಿಂಚಣಿ ಹಣದ ಆಸೆಗಾಗಿ 40 ವರ್ಷಗಳ ಅವಧಿಯಲ್ಲಿ 12 ಬಾರಿ ಡಿವೋರ್ಸ್ ಪಡೆದು ಮತ್ತೆ ಮದುವೆಯಾಗಿದ್ದಾರೆ. ಹೀಗೆ ಇವರಿಬ್ಬರು ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಸಿಗುವ ಪಿಂಚಣಿ ಹಣದಿಂದ $ 342,000 ಬರೋಬ್ಬರಿ 2.90 ಕೋಟಿ ರೂ. ಗಳಿಸಿದ್ದಾರೆ.
2022 ರಲ್ಲಿ 12 ನೇ ಬಾರಿ ವಿಚ್ಛೇದನ ಪಡೆದ ನಂತರ ಈ ಮಹಿಳೆ ವಿಧವಾ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದಾಗ ದಂಪತಿಗಳ ವಂಚನೆ ಬಹಿರಂಗವಾಗಿದೆ. ತನಿಖೆಯ ವೇಳೆ ಮಹಿಳೆ ವಿಧವಾ ಪಿಂಚಣಿ ಪಡೆಯಲು ಪದೇ ಪದೇ ವಿಚ್ಛೇದನ ನೀಡುತ್ತಿದ್ದಳು ಎಂದು ತಿಳಿದುಬಂದಿದೆ. ಇದಾದ ಬಳಿಕ ದಂಪತಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಆರ್ಡರ್ ಮಾಡಿದ್ದು ದಹಿಪುರಿ ಆದ್ರೆ ಬಂದಿದ್ದು ಪೂರಿ, ಒಂದು ಬೌಲ್ ಮೊಸರು; ಅಸಮಾಧಾನ ಹೊರಹಾಕಿದ ಬೆಂಗಳೂರು ಯುವತಿ
ಆಸ್ಟ್ರಿಯಾದ ಕಾನೂನಿನ ಪ್ರಕಾರ ಒಬ್ಬ ಮಹಿಳೆ ವಿಧವೆಯಾದ ನಂತರ ಆಕೆ ಒಂಟಿಯಾಗಿ ಬದುಕುತ್ತಿದ್ದಾಳೆ ಎಂದರೆ ಆಕೆಗೆ ಸರ್ಕಾರದಿಂದ 28,300 ಡಾಲರ್ (ಸುಮಾರು 24 ಲಕ್ಷ ರೂ.) ವಿಧವಾ ಪಿಂಚಣಿ ಸಿಗುತ್ತದೆ. ಈ ಪಿಂಚಣಿ ಹಣಕ್ಕಾಗಿಯೇ ದಂಪತಿ ಡಿವೋರ್ಸ್ ನಾಟಕವಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ