ಹೆಚ್ಚಾಗುತ್ತಿದೆ Sleep divorce ಟ್ರೆಂಡ್; ಪ್ರತ್ಯೇಕವಾಗಿ ಮಲಗುವ ಈ ಪ್ರವೃತ್ತಿ ದಂಪತಿಗಳಿಗೆ ಸಂತೋಷ ನೀಡುತ್ತದೆಯೇ? ಅಧ್ಯಯನ ಹೇಳೋದೇನು?
ಸಾಮಾನ್ಯವಾಗಿ ವಿಚ್ಛೇದನವು ದಂಪತಿಗಳನ್ನು ದೂರ ದೂರ ಮಾಡಿ, ಅವರ ನಡುವಿನ ಸಂಬಂಧವನ್ನು ಶಾಶ್ವತವಾಗಿ ಮುರಿದು ಹಾಕುತ್ತದೆ. ಆದ್ರೆ ಇದೀಗ ಸಂಬಂಧವನ್ನು ಬಲಪಡಿಸುವ ಸ್ಲೀಪಿಂಗ್ ಡಿವೋರ್ಸ್ ಪ್ರವೃತ್ತಿ ಸಖತ್ ಟ್ರೆಂಡ್ ಆಗುತ್ತಿದ್ದು, ಈ ನಿದ್ರೆಯ ವಿಚ್ಛೇದನವು ನಿಜಕ್ಕೂ ದಂಪತಿಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆಯೇ ಎಂಬ ಬಗ್ಗೆ ತಜ್ಞರು ವಿವರಣೆಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ದಾಂಪತ್ಯ ಜೀವನದಿಂದ ಮುಕ್ತಿಯನ್ನು ಪಡೆಯಲು ದಂಪತಿಗಳು ವಿಚ್ಛೇದನದ ಮೊರೆ ಹೋಗ್ತಾರೆ. ಹೌದು ಹೆಚ್ಚಿನವರು ಡಿವೋರ್ಸ್ ಮೂಲಕ ಇಷ್ಟವಿಲ್ಲದ ಹಾಗೂ ಕಿರಿಕಿರಿ ಉಂಟು ಮಾಡುವ ಸಂಬಂಧದಿಂದ ಮುಕ್ತಿಯನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಿಚ್ಛೇದನ ಪ್ರಕರಣಗಳು ತೀರಾ ಸಾಮಾನ್ಯವಾಗಿಬಿಟ್ಟಿದೆ. ಈ ನಡುವೆ ಸಂಬಂಧವನ್ನು ಬಲಪಡಿಸುವ ವಿಶೇಷ ಡಿವೋರ್ಸ್ ಪ್ರವೃತ್ತಿಯೊಂದು ಟ್ರೆಂಡ್ ಆಗುತ್ತಿದೆ. ಏನಿದು ಸ್ಲೀಪ್ ಡಿವೋರ್ಸ್? ಈ ನಿದ್ರೆಯ ವಿಚ್ಛೇದನ ನಿಜಕ್ಕೂ ಗಂಡ ಹೆಂಡತಿಯ ಸಂಬಂಧವನ್ನು ಬಲಪಡಿಸುತ್ತದೆಯೇ ಅಥವಾ ಇದು ದಂಪತಿಗಳ ನಡುವೆ ಬಿರುಕು ಮೂಡುವಂತೆ ಮಾಡುತ್ತದೆಯೇ ಎಂಬುದನ್ನು ತಜ್ಞರು ವಿವರಿಸಿದ್ದಾರೆ.
ಏನಿದು ಸ್ಲೀಪ್ ಡಿವೋರ್ಸ್ ?
ಉತ್ತಮ ನಿದ್ರೆಗಾಗಿ ಸಂಗಾತಿಗಳು ಬೇರೆ ಬೇರೆ ಕೋಣೆಗಳಲ್ಲಿ ಪ್ರತ್ಯೇಕವಾಗಿ ಮಲಗುವುದೇ ಸ್ಲೀಪ್ ಡಿವೋರ್ಸ್. ಸಾಮಾನ್ಯವಾಗಿ ದಂಪತಿಗಳು ಒಂದೇ ಕೋಣೆಯಲ್ಲಿ ಒಟ್ಟಿಗೆ ಮಲಗುತ್ತಾರೆ. ಆದ್ರೆ ಈ ಸ್ಲೀಪ್ ಡಿವೋರ್ಸ್ ಪ್ರವೃತ್ತಿಯಲ್ಲಿ ಗಂಡ-ಹೆಂಡತಿ ಬೇರೆ ಬೇರೆ ಮಲಗುತ್ತಾರೆ. ಯಾವುದೇ ಡಿಸ್ಟರ್ಬ್ ಇಲ್ಲದೆ ಉತ್ತಮ ನಿದ್ರೆಯನ್ನು ಪಡೆಯುವುದು ಸ್ಲೀಪ್ ಡಿವೋರ್ಸ್‌ನ ಮೂಲ ಉದ್ದೇಶವಾಗಿದೆ. ಇಲ್ಲಿ ದಂಪತಿಗಳು ದೈಹಿಕವಾಗಿ ಬೇರೆಬೇರೆಯಾಗಿದ್ದರೂ, ಭಾವನಾತ್ಮಕವಾಗಿ ಜೊತೆಯಾಗಿರುತ್ತಾರೆ.
ಈ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?
ಹಿಲ್ಟನ್ 2025 ಟ್ರೆಂಡ್ಸ್ ವರದಿಯ ಪ್ರಕಾರ, ದಂಪತಿಗಳು ರಜೆಯಲ್ಲಿರುವಾಗ ಮತ್ತು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ನಿದ್ರೆಯ ವಿಚ್ಛೇದನವನ್ನು ಸ್ವೀಕರಿಸುತ್ತಿದ್ದಾರೆ. ವಿಶೇಷವಾಗಿ ದಂಪತಿಗಳು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ಎರಡು ಪ್ರತ್ಯೇಕ ರೂಮ್‌ಗಳನ್ನು ಬುಕ್ ಮಾಡಿ, ನೆಮ್ಮದಿಯ ನಿದ್ರೆಗಾಗಿ ಮತ್ತು ಪರ್ಸನಲ್ ಸ್ಪೇಸ್ ಸಲುವಾಗಿ ಪ್ರತ್ಯೇಕವಾಗಿ ಮಲಗುತ್ತಿದ್ದಾರೆ. ನಿದ್ರೆಯ ಸಮಸ್ಯೆಗಳಿಂದ ದೂರವಿರಲು ಉದಾಹರಣೆಗೆ ಗೊರಕೆಯಿಂದ, ಮಧ್ಯೆ ಮಧ್ಯೆ ಎಚ್ಚರಗೊಂಡು ಲೈಟ್ ಆನ್ ಮಾಡಿದಾಗ, ನಿದ್ರೆಯಲ್ಲಿ ಹೊರಳಾಡಿದಾಗ ಸಂಗಾತಿಯ ನಿದ್ರೆಯು ಹಾಳಾಗುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿದ್ದು, ಒಬ್ಬಂಟಿಯಾಗಿ ನೆಮ್ಮದಿಯಿಂದ ನಿದ್ರೆ ಮಾಡಲು ದಂಪತಿಗಳು ಹೆಚ್ಚಾಗಿ ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ.
ಕಳೆದ ವರ್ಷ ನಡೆದ ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸನ್ ಸಂಸ್ಥೆ 2005 ಜನರಿಗೆ ಆನ್‌ಲೈನ್ ಸಮೀಕ್ಷೆಯೊಂದನ್ನು ನಡೆಸಿತ್ತು. ಅಮೆರಿಕದಲ್ಲಿ ದಂಪತಿಗಳು ಹೆಚ್ಚಾಗಿ ಪ್ರತ್ಯೇಕವಾಗಿ ಮಲಗಲು ಆದ್ಯತೆ ನೀಡುತ್ತಿದ್ದಾರೆ ಎಂದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ. ಅಮೆರಿಕನ್ ಸ್ಲೀಪ್ ಮೆಡಿಸನ್ ಸಂಸ್ಥೆಯ ವಕ್ತಾರ ಡಾ. ಸೀಮಾ ಖೋಸ್ಲಾ “ಕಡಿಮೆ ನಿದ್ರೆಯು ಮನಸ್ಥಿತಿಯನ್ನು ಹದಗೆಡಿಸುತ್ತದೆ ಮತ್ತು ಇದು ಸಂಗಾತಿಯೊಂದಿಗೆ ವಾಗ್ವಾದ, ಜಗಳವನ್ನು ಮಾಡಿಸು ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ರಾತ್ರಿಯ ನಿದ್ರೆಯು ಆರೋಗ್ಯ ಹಾಗೂ ಸಂತೋಷ ಎರಡಕ್ಕೂ ತುಂಬಾನೇ ಮುಖ್ಯ ಆದ್ದರಿಂದ ಸಂಬಂಧದ ದೃಷ್ಟಿಯಿಂದ ಸ್ಲೀಪ್ ಡಿವೋರ್ಸ್ ಒಳ್ಳೆಯದು” ಎಂದು ಹೇಳಿದ್ದಾರೆ.
ಓಹಿಯೋ ಸ್ಟೇಟ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ ಸಂಸ್ಥೆಯ ಸಂಶೋಧಕರು 2017 ರಲ್ಲಿ ನಡೆಸಿದ ಅಧ್ಯಯನದಲ್ಲಿ “ಸತತ ಎರಡು ದಿನಗಳಲ್ಲಿ ದಂಪತಿಗಳು 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಪಡೆದರೆ, ಅವರು ನಿದ್ರೆಯ ಕೊರತೆಯಿಂದಾಗಿ ವೈವಾಹಿಕ ಜೀವನದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಹೆಚ್ಚಿರುತ್ತದೆ, ಇದು ಸಂಬಂಧವನ್ನು ಹಾಳು ಮಾಡಬಹುದು. ಹೀಗಿರುವಾಗ ಪ್ರತ್ಯೇಕವಾಗಿ ನಿದ್ರೆ ಮಾಡುವ ಮೂಲಕ ಸಂಬಂಧವನ್ನು ಬಲಪಡಿಸಿಕೊಳ್ಳಬಹುದುʼ ಎಂಬುದನ್ನು ಹೇಳಿದ್ದಾರೆ.
2016 ರಲ್ಲಿ ಪ್ರಟಕವಾದ ಜರ್ಮನ್ ಅಧ್ಯಯನವೊಂದರ ಪ್ರಕಾರ “ದಂಪತಿಗಳು ಒಟ್ಟಿಗೆ ಮಲಗುವುದು ಸಂಗಾತಿಗಳ ನಡುವೆ ಅನ್ಯೋನ್ಯತೆಯನ್ನು ಬೆಳೆಸಬಹುದು ನಿಜ. ಆದ್ರೆ ಗೊರಕೆ, ಹೊರಳಾಡುವುದು ಈ ಕೆಲವು ಅಡಚಣೆಗಳು ಸಂಗಾತಿಯ ನಿದ್ರೆಯನ್ನು ಹಾಳು ಮಾಡುತ್ತವೆ” ಎಂಬುದನ್ನು ಹೇಳಿದೆ.
ಇದನ್ನೂ ಓದಿ: ಈ ದೇಶದಲ್ಲಿ ಕಳೆದ 95 ವರ್ಷಗಳಿಂದ ಒಂದೇ ಒಂದು ಮಗು ಹುಟ್ಟಿಲ್ಲ!
ಸ್ಲೀಪ್ ಡಿವೋರ್ಸ್ ಪ್ರಯೋಜನಗಳು:
• ಇದು ಉತ್ತಮ ನಿದ್ರೆಯನ್ನು ಪಡೆಯುವಂತೆ ಮಾಡುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಮತ್ತು ಇದು ಸಂಬಂಧದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
• ಒಂಟಿಯಾಗಿ ಮಲಗಿ ನೆಮ್ಮದಿಯಿಂದ ನಿದ್ರೆ ಮಾಡುವ ಮೂಲಕ ಒತ್ತಡ ಮತ್ತು ಆತಂಕವನ್ನು ನಿವಾರಿಸಬಹುದಾಗಿದೆ.
• ಇದು ಸಂಬಂಧವನ್ನು ಬಲಪಡಿಸುತ್ತದೆ. ಹೌದು ಗಂಡ ಹೆಂಡತಿ ರಾತ್ರಿ ಬೇರೆಯಾಗಿ ಮಲಗಿದರೂ ಬೆಳಗ್ಗೆ ಉತ್ತಮ ನಿದ್ರೆಯಿಂದ ಎದ್ದಾಗ ಒಬ್ಬರನ್ನೊಬ್ಬರು ಮುದ್ದಾಡುವ, ಪ್ರೀತಿ ಮಾಡುವ ರೀತಿ ಹಾಗೂ ಧನಾತ್ಮಕ ಭಾವನೆ ಇವೆಲ್ಲವೂ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ