Foods of Karnataka: ತಿಂದ್ರೆ ಗ್ಯಾಸ್ ಟ್ರಬಲ್, ತಿನ್ನದೇ ಇದ್ದರೆ ಜೀವನವೇ ವ್ಯರ್ಥ: ಟ್ವಿಟರ್​ನಲ್ಲಿ ಹವಾ ಎಬ್ಬಿಸಿದೆ ಅವರೇಕಾಳು ರೊಟ್ಟಿ

Avarekalu Akkirotti: ‘ಅಕ್ಕಿರೊಟ್ಟಿಗೆ ಅವರೇಕಾಳು ಹಾಕಬಹುದು ಎಂದು ಮೊದಲು ಕಂಡುಕೊಂಡವರು ಯಾರು? ಅವರಿಗೆ ಮತ್ತು ಈ ಪರಂಪರೆಯನ್ನು ಮುಂದುವರಿಸುತ್ತಿರುವವರಿಗೆ ಕೋಟಿ ನಮನಗಳು’

Foods of Karnataka: ತಿಂದ್ರೆ ಗ್ಯಾಸ್ ಟ್ರಬಲ್, ತಿನ್ನದೇ ಇದ್ದರೆ ಜೀವನವೇ ವ್ಯರ್ಥ: ಟ್ವಿಟರ್​ನಲ್ಲಿ ಹವಾ ಎಬ್ಬಿಸಿದೆ ಅವರೇಕಾಳು ರೊಟ್ಟಿ
ಅವರೇಕಾಳು ರೊಟ್ಟಿ (ಚಿತ್ರಕೃಪೆ: ಮಾಯಾಶರ್ಮಾ ಮತ್ತು ಪ್ರಿಯಾ ಅವರ ಟ್ವಿಟರ್ ಅಕೌಂಟ್)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 20, 2022 | 10:21 PM

ಮಾಗಿಕಾಲದಲ್ಲಿ ಕೊಯ್ಲಾಗುವ ಅವರೇಕಾಯಿ ಅಂದರೆ ಕನ್ನಡಿಗರಿಗೆ ಅಚ್ಚುಮೆಚ್ಚು. ಅವರೇಕಾಳಿನಿಂದ ಬಗೆಬಗೆಯ ತಿನಿಸುಗಳನ್ನು ತಯಾರಿಸುವುದು ಪ್ರತಿವರ್ಷದ ವಾಡಿಕೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅವರೇಮೇಳಗಳೂ ನಡೆಯುತ್ತವೆ. ಮನೆಗಳಲ್ಲಿ ಮೆಗಾ ಸೀರಿಯಲ್​ಗಳಂತೆ ಅವರೇಕಾಳು ಹುಳಿ, ಹುರಿಗಾಳು, ಹಿತಕಿದವರೆ ರೊಟ್ಟಿ, ಮೇಲೋಗರ, ಉಸಲಿ ಸೇರಿದಂತೆ ಬಗೆಬಗೆಯ ಖಾದ್ಯಗಳು ತಟ್ಟೆಗೆ ಬರುತ್ತವೆ. ಇದೀಗ ಟ್ವಿಟರ್​ನಲ್ಲಿಯೂ ಇಂಥದ್ದೇ ಪೋಸ್ಟ್​ ಒಂದು ವೈರಲ್ ಆಗಿದೆ.

ಪತ್ರಕರ್ತೆ ಮಾಯಾಶರ್ಮಾ ಅವರು ಅವರೇಕಾಳು ಅಕ್ಕಿರೊಟ್ಟಿ-ಚಟ್ನಿಯ ಚಿತ್ರವೊಂದನ್ನು ಪೋಸ್ಟ್ ಮಾಡಿ, ‘ಅಕ್ಕಿರೊಟ್ಟಿಗೆ ಅವರೇಕಾಳು ಹಾಕಬಹುದು ಎಂದು ಮೊದಲು ಕಂಡುಕೊಂಡವರು ಯಾರು? ಅವರಿಗೆ ಮತ್ತು ಈ ಪರಂಪರೆಯನ್ನು ಮುಂದುವರಿಸುತ್ತಿರುವವರಿಗೆ ಕೋಟಿ ನಮನಗಳು’ ಎಂಬ ಒಕ್ಕಣೆ ಬರೆದಿದ್ದಾರೆ.

ಅಕ್ಕಿರೊಟ್ಟಿ ನೋಡಿ ಖುಷಿಪಟ್ಟ ಪ್ರಿಯಾ ಮಲೆಬೆನ್ನೂರು, ‘ಇದು ನಮ್ಮನ್ನ ಸ್ಪೆಷಲ್’ ಎಂದು ಅವರೇಕಾಳು ರೊಟ್ಟಿಯೊಂದಿಗೆ ಚಟ್ನಿಪುಡಿ, ಮೊಸರು ಬಜ್ಜಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಅವರೇಕಾಳು ರೊಟ್ಟಿಯನ್ನು ಚಟ್ನಿಯೊಂದಿಗೆ ತಿಂದರೆ ಅದರ ಸ್ವಾದ ಹೆಚ್ಚುವುದೇ? ಕಡಿಮೆಯಾಗುವುದೋ’ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ.

‘ಅವರೇಕಾಳು ರೊಟ್ಟಿಯಷ್ಟೇ ಅಲ್ಲ, ಉಪ್ಪಿಟ್ಟೂ ಬಲುಚಂದ’ ಎಂದು ಕಿರಣ್ ಬಾಲಕೃಷ್ಣ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಅವರೇಕಾಳು ರೊಟ್ಟಿಗೆ ತುಪ್ಪ-ಚಟ್ನಿಪುಡಿ ಇರಬೇಕು, ಇಲ್ಲದಿದ್ದರೆ ಕಾಯಿಚಟ್ನಿ ಇರಲಿ. ಎರಡೂ ಒಟ್ಟೊಟ್ಟಿಗೆ ಬೇಡ’ ಎನ್ನುವುದು ಶ್ರೀವತ್ಸ ಅವರ ಅಭಿಪ್ರಾಯ.

‘ನನಗೆ ಅವರೇಕಾಳಿಲ್ಲದ ಅಕ್ಕಿರೊಟ್ಟಿ ಇಷ್ಟ. ಅವರೇಕಾಳು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಆಗುತ್ತದೆ. ಆದರೆ ಏನು ಮಾಡುವುದು? ಹೊಟ್ಟೆ ಬೇಡ ಅನ್ನುತ್ತೆ, ನಾಲಿಗೆ ತಿನ್ನಬೇಕು ಅನ್ನುತ್ತೆ’ ಎಂದು ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಸಂದೀಪ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಕ್ಕಿರೊಟ್ಟಿಗೆ ಅವರೇಕಾಳು ಹಾಕಿದವರು ಯಾರು ಎಂಬ ಪ್ರಶ್ನೆಗೆ ಆರ್​ವಿಕೆ ಎನ್ನುವವರು ಮಾತ್ರ ನೇರವಾಗಿ ‘ನಿಮ್ಮಜ್ಜಿ’ ಎಂದು ಉತ್ತರಿಸಿದ್ದಾರೆ. ಆಮೇಲೆ ತಮ್ಮ ಉತ್ತರವಕ್ಕೆ ವಿವರಣೆಯಾಗಿ, ‘ಅವರಜ್ಜಿ, ಮುತ್ತಜ್ಜಿ’ ಎಂದು ಹೇಳಿದ್ದಾರೆ. ಬಹಳಷ್ಟು ಜನರು ತಮ್ಮ ಅಪ್ಪ-ಅಮ್ಮಂದಿರನ್ನು ನೆನಪಿಸಿಕೊಂಡಿದ್ದಾರೆ.

ಮಾಯಾಶರ್ಮಾ ಅವರು ಹಾಕಿರುವ ರಾಗಿಮೊದ್ದೆ ಸೊಪ್ಪುಸಾರಿನ ಚಿತ್ರವೂ ಸಾಕಷ್ಟು ಜನರ ಗಮನ ಸೆಳೆದಿದೆ. ‘ಇದು ದಕ್ಷಿಣ ಕರ್ನಾಟಕ ಜನರ ಭಾವನೆ’ ಎಂದು ಹೆಮ್ಮೆಯಿಂದ ಸಾಗರ್ ಜೆ ಗೌಡ ಎನ್ನುವವರು ರಾಗಿಮೊದ್ದೆ ಸೊಪ್ಪು ಎಸರಿನ ಮತ್ತೊಂದು ಚಿತ್ರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅವರೆಕಾಳು ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

ಇದನ್ನೂ ಓದಿ: ದುಬಾರಿ ತರಕಾರಿಗಳ ಮಧ್ಯೆ ಅವರೆಕಾಯಿಗೆ ಬಂತು ಡಿಮ್ಯಾಂಡ್

Published On - 10:21 pm, Thu, 20 January 22