ಉತ್ಕೃಷ್ಟ ಗುಣಮಟ್ಟ ಮತ್ತು ಸದಾ ಹೊಸತನದೊಂದಿಗೆ ತನ್ನದೇ ಆದ ಛಾಪನ್ನು ಮೂಡಿಸಿರುವ ಕೆ.ಎಂ.ಎಫ್‌ನ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರು ನಗರದಲ್ಲಿ ಬಿಡುಗಡೆಗೊಳಿಸುವ ಪ್ಲಾನ್ ನಡೆದಿತ್ತು. ಐಡಿ, ಅಸಲ್, ಎಂ.ಟಿ.ಆರ್‌ನಂತಹ ಖಾಸಗಿ ಕಂಪೆನಿಗಳಿಗೆ ಪ್ರಬಲ ಪೈಪೋಟಿ ನೀಡಲು ನಂದಿನಿ ಬ್ರ್ಯಾಂಡ್‌ನ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಕೆ.ಎಂ.ಎಫ್ ಘೋಷಣೆ ಮಾಡಿತ್ತು. ಅದಕ್ಕೆ ಸಿದ್ಧತೆ ಕೂಡಾ ನಡೆದಿತ್ತು ಮತ್ತು ಉತ್ಪನ್ನಗಳ ಬಿಡುಗಡೆಗೆ ದಿನಾಂಕವೂ ನಿಗದಿಯಾತ್ತು. ಆದರೆ ಇದೀಗ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸುವುದರಲ್ಲಿ ವಿಳಂಬವಾಗುತ್ತಿದ್ದು, ದೋಸೆ ಇಡ್ಲಿ ಹಿಟ್ಟಿನ ಪರಿಚಯದ ಬಗ್ಗೆ ಕೆ.ಎಂ.ಎಫ್‌ನಲ್ಲಿಯೇ ಆಂತರಿಕ ವಿರೋಧವಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಪ್ರೋಟೀನ್ ಆಧಾರಿತ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಬಿಡುಗಡೆಗೊಳಿಸುವುದಾಗಿ ಕೆಲ ದಿನಗಳ ಹಿಂದೆ ಕೆ.ಎಂ.ಎಫ್ ಹೇಳಿತ್ತು. ಕಡಿಮೆ ಬೆಲೆಯಲ್ಲಿ 900 ಗ್ರಾಂ ಮತ್ತು 450 ಗ್ರಾಂ ದೋಸೆ-ಇಡ್ಲಿ ಹಿಟ್ಟನ್ನು ಮಾರಾಟ ಮಾಡಲು ಮುಂದಾಗಿತ್ತು. ಆದರೆ ಇದೀಗ ಈ ಯೋಜನೆಯಲ್ಲಿ ವಿಳಂಬವಾಗುತ್ತಿದ್ದು, ಇದರ ನೇತೃತ್ವ ವಹಿಸಿದ್ದ ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಅವರನ್ನೇ ಕರ್ನಾಟಕ ಸರ್ಕಾರ ವರ್ಗಾವಣೆ ಮಾಡಿದೆ.
ಜಗದೀಶ್ ಅವರು ಉತ್ತಮ ಮಾರ್ಕೆಟಿಂಗ್ ತಂತ್ರಗಳಿಗೆ ಹೆಸರಿವಾಸಿಯಾಗಿದ್ದವರು. ಅವರ ನೇತೃತ್ವದಲ್ಲಿ ನಂದಿನಿ ಇಂಡಿಯನ್ ಸೂಪರ್ ಲೀಗ್ ಮತ್ತು ಪ್ರೋ ಕಬಡ್ಡಿ ಪಂದ್ಯಾವಳಿಗಳಿಗೆ ಕೇಂದ್ರ ಪ್ರಾಯೋಜಕತ್ವವನ್ನು ವಹಿಸಿತ್ತು, ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರಾಯೋಜಿಸಿತ್ತು. ಜೊತೆಗೆ ಇವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ತಾಜಾ ಡೈರಿ ಉತ್ಪನ್ನವನ್ನು ಪರಿಚಯಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿದ್ದರು. ಅಷ್ಟೇ ಅಲ್ಲದೆ ಜಗದೀಶ್ ದುಬೈನಲ್ಲಿಯೂ ನಂದಿನಿ ಕೆಫೆ, ಮಳಿಗೆಗಳನ್ನು ತೆರೆದರು ಮತ್ತು ತಿರುಪತಿ ಲಡ್ಡನ್ನು ತಯಾರಿಸಲು ತಿರುಪತಿಗೆ ನಂದಿನಿ ತುಪ್ಪದ ಪೂರೈಕೆಯನ್ನು ಸಹ ಪುನರಾರಂಭಿಸಿದರು. ಆದರೆ ಇದೀಗ ಸರ್ಕಾರ ಇವರನ್ನು ವರ್ಗಾವಣೆ ಮಾಡಿದ್ದು, ಈ ವರ್ಗಾವಣೆಯೇ ದೋಸೆ-ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯ ಮೇಲೆ ಪರಿಣಾಮ ಬೀರಿರಬಹುದೋ ಎಂಬ ಬಗ್ಗೆ ಸ್ಪಷ್ಟ ಕಾರಣ ಇಲ್ಲದಿದ್ದರೂ, ದೋಸೆ ಇಡ್ಲಿ ಹಿಟ್ಟಿನ ಪರಿಚಯದ ಬಗ್ಗೆ ಕೆ.ಎಂ.ಎಫ್‌ನಲ್ಲಿಯೇ ಆಂತರಿಕ ವಿರೋಧವಿದೆ ಎಂದು ಮೂಲಗಳು ತಿಳಿಸಿವೆ.
ಕೆ.ಎಂ.ಎಫ್ ಆರಂಭದಲ್ಲಿ ಅಕ್ಟೋಬರ್ 2024 ರಲ್ಲಿ ಬೆಂಗಳೂರಿನಲ್ಲಿ ಇಡ್ಲಿ-ದೋಸೆ ಹಿಟ್ಟನ್ನು ಬಿಡುಗಡೆಗೊಳಿಸುವುದಾಗಿ ಹೇಳಿತ್ತು. ನಂತರ ಆ ದಿನಾಂಕವನ್ನು ನವೆಂಬರ್ 26 ಕ್ಕೆ ಮುಂದೂಡಲಾಯಿತು. ಆದರೆ ಇದೀಗ ಈ ಯೋಜನೆಯಲ್ಲ ಮತ್ತಷ್ಟು ವಿಳಂಬವಾಗುತ್ತಿದ್ದು, ಈ ಯೋಜನೆಯ ಬಗ್ಗೆ ಕೆ.ಎಂ.ಎಫ್‌ನಲ್ಲಿಯೇ ಆಂತರಿಕ ವಿರೋಧವಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮದುವೆ ಮತ್ತು ಜನನ ದರವನ್ನು ಹೆಚ್ಚಿಸಲು ವಿಶ್ವವಿದ್ಯಾನಿಲಯಗಳಲ್ಲಿ ಶುರುವಾಗಲಿದೆ “ಲವ್ ಎಜುಕೇಶನ್”
ಈ ಬಗ್ಗೆ ಮಾತನಾಡಿದ ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್ “ಇಡ್ಲಿ-ದೋಸೆ ಹಿಟ್ಟಿನ ಗುಣಮಟ್ಟವನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳದಿದ್ದರೆ ಅದರಿಂದ ನಂದಿನಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ಬರುತ್ತದೆ. ಇದು ನಂದಿನಿಯ ಇತರ ಉತ್ಪನ್ನಗಳ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಆದ್ದರಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ” ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ