ಇತ್ತೀಚಿಗಂತೂ ವಿವಾಹೇತರ ಸಂಬಂಧಗಳ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈ ಅನೈತಿಕ ಸಂಬಂಧಗಳು ಅದೆಷ್ಟೋ ಸಂಸಾರಗಳನ್ನು ಹಾಳು ಮಾಡಿವೆ. ಅದರಲ್ಲೂ ಗಂಡನಿಗೆ ಇನ್ನೊಬ್ಬಳ ಜೊತೆ ಸಂಬಂಧವಿರುವುದು ಹೆಂಡ್ತಿಗೆ ಗೊತ್ತಾದರೆ ಅಥವಾ ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧ ಇದೆಯೆಂದು ಪತಿಗೆ ಗೊತ್ತಾದರೆ ಅಲ್ಲಿ ದೊಡ್ಡ ರಂಪಾಟವೇ ನಡೆಯುತ್ತವೆ. ಆದ್ರೆ ಇಲ್ಲೊಂದು ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಹೆಂಡತಿ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಸ್ವತಃ ಆಕೆಯ ಗಂಡನೇ ಆಕೆಗೆ ಪ್ರೀತಿಸಿದಾತನೊಂದಿಗೆ ಮದುವೆ ಮಾಡಿಸಿದ್ದಾನೆ. ಈ ಮದುವೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದ್ದು, ಇಲ್ಲಿನ ಮೂರು ಮಕ್ಕಳ ತಾಯಿಯೊಬ್ಬಳಿಗೆ ಇಬ್ಬರು ಮಕ್ಕಳ ತಂದೆಯೊಂದಿಗೆ ಲವ್ ಆಗಿದ್ದು, ಈ ವಿಷಯ ಬಹಿರಂಗವಾಗುತ್ತಿದ್ದಂತೆ ಮಹಿಳೆಯ ಗಂಡ ಈ ಪ್ರೇಮಿಗಳಿಬ್ಬರಿಗೆ ಮದುವೆ ಮಾಡಿಸಿದ್ದಾನೆ. ಕಳೆದ 12 ವರ್ಷದ ಹಿಂದೆ ಈ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಆದ್ರೆ ಇದೀಗ ಆಕೆ ಇನ್ನೊಬ್ಬ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಆಕೆಯ ಸಂತೋಷಕ್ಕೆ ಅಡ್ಡಿಪಡಿಸಬಾರದು ಎಂದು ಗಂಡ ತನ್ನ ಹೆಂಡ್ತಿಗೆ ಇನ್ನೊಂದು ಮದುವೆ ಮಾಡಿಸಿದ್ದಾನೆ.
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಂಡ ತನ್ನ ಹೆಂಡತಿಗೆ ಎರಡನೇ ಮದುವೆ ಮಾಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಊರಿನ ಜನರ ಮುಂದೆ ಆ ವ್ಯಕ್ತಿ ಮಹಿಳೆಯ ಹಣೆಗೆ ಸಿಂಧೂರವನ್ನಿಟ್ಟು ಮದುವೆಯಾಗಿದ್ದು, ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದು ಅವರ ಜವಬ್ದಾರಿಯಾಗಿರುತ್ತದೆ ಅದನ್ನು ಅವರೇ ಎದುರಿಸಬೇಕು ಎಂದು ಮೊದಲ ಪತಿ ಹೇಳಿದ್ದಾನೆ.
ಇದನ್ನೂ ಓದಿ: ಲೆಕ್ಕಕ್ಕೆ ಸಿಗದಷ್ಟು ಹಣದಲ್ಲಿ ನಡೆದ ಅದ್ದೂರಿ ಮದುವೆಗಳು; ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ಐಟಿ ದಾಳಿ
ಡಿಸೆಂಬರ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಡಿವೋರ್ಸ್ ಕೊಟ್ಟಿದ್ದರೆ ಪಾಪ ಈ ಮೊದಲ ಪತಿ ಎಲ್ಲಿಂದ ಜೀವನಾಂಶ ಕೊಡುತ್ತಿದ್ದʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಯ್ಯೋ ದೇವ್ರೇ ಈ ಸಮಾಜದಲ್ಲಿ ಏನಾಗ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಘಟನೆಯ ಸುದ್ದಿ ಕೇಳಿ ಫುಲ್ ಶಾಕ್ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ