ಮಗುವಿಗೆ ಹೆಸರಿಡಲು ಮೈಸೂರು ದಂಪತಿ ನಡುವೆ ಜಗಳ, ಕೋರ್ಟ್ನಲ್ಲೇ ಹೆಸರು ಸೂಚಿಸಿ ಪ್ರಕರಣ ಇತ್ಯರ್ಥ ಮಾಡಿದ ಜಡ್ಜ್
ಮಗುವಿಗೆ ಯಾವ ಹೆಸರಿಡುವುದು ಎನ್ನುವ ಕಾರಣಕ್ಕೆ ಎಷ್ಟೋ ದಂಪತಿಗಳ ನಡುವೆ ಜಗಳಗಳು ಆಡುವುದನ್ನು ನೋಡಿರಬಹುದು. ಇದೇ ರೀತಿಯ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಹೆಸರಿಡಲು ಮುಂದಾಗ ದಂಪತಿಗಳ ನಡುವೆ ಮನಸ್ತಾಪವೊಂದು ಮೂಡಿದೆ. ಕೊನೆಗೆ ಪತ್ನಿಯೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಮೂರು ವರ್ಷದ ಮಗುವಿಗೆ ಆರ್ಯವರ್ಧನ್ ಎಂದು ಹೆಸರಿಡಲು ಸೂಚಿಸುವ ಮೂಲಕ ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಈ ಪ್ರಕರಣವನ್ನು ಬಗೆಹರಿಸಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹೆಸರಿಡುವುದೇ ದೊಡ್ಡ ಕೆಲಸವಾಗಿದೆ. ಪೋಷಕರು ಮಗು ಹುಟ್ಟುವುದಕ್ಕೂ ಮುಂಚೆಯೇ ಮಗುವಿಗೆ ಏನು ಹೆಸರಿಡಬೇಕೆಂದು ಯೋಚಿಸುತ್ತಾರೆ. ಕೆಲವೊಮ್ಮೆ ಮಗುವಿಗೆ ಯಾವ ಹೆಸರಿಡುವುದು ಎನ್ನುವ ಕಾರಣಕ್ಕೆ ಎಷ್ಟೋ ದಂಪತಿಗಳ ನಡುವೆ ಜಗಳಗಳು ಆಗುತ್ತದೆ. ಇದೇ ರೀತಿಯ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಮಗುವಿನ ಹೆಸರಿಡಲು ಮುಂದಾಗ ದಂಪತಿಗಳ ನಡುವೆ ಮನಸ್ತಾಪವೊಂದು ಮೂಡಿದ್ದು, ಪತ್ನಿಯೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಅಂದಹಾಗೆ, 2021 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನ ದಂಪತಿಗಳಿಗೆ ಮಗು ಜನಿಸಿತು. ಆದರೆ ಮಗುವಿನ ಜನಿಸಿದ ಬಳಿಕ ಈ ದಂಪತಿಗಳ ನಡುವೆ ಮಗುವಿನ ಹೆಸರಿನ ಆಯ್ಕೆಯ ವಿಚಾರವಾಗಿ ಜಗಳವಾಗಿತ್ತು. ತಾಯಿ ಮಗುವನ್ನು ‘ಆದಿ’ ಎಂದು ಹೆಸರಿಡಲು ಬಯಸಿದರೆ, ತಂದೆಯೂ ಶನಿ ಹೆಸರನ್ನು ಇಡಲು ಇಚ್ಛಿಸಿದ್ದರು. ಆದರೆ ದಂಪತಿಗಳಿಬ್ಬರಿಗೂ ಗಂಡು ಮಗುವಿಗೆ ನಾಮಕರಣ ಮಾಡಲು ಒಮ್ಮತದ ಅಭಿಪ್ರಾಯವು ಮೂಡಿರಲಿಲ್ಲ. ಇದರಿಂದಾಗಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಒಂದೂವರೆ ವರ್ಷದಿಂದ ತವರು ಮನೆಯಲ್ಲೇ ಉಳಿದಿದ್ದರು. ಅದಲ್ಲದೇ, ಸಿಆರ್ ಪಿಸಿ ಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಧೀಶರು ನೀಡಿದ ಸಲಹೆಗಳನ್ನೂ ಮಹಿಳೆಯೂ ತಿರಸ್ಕರಿಸಿದ್ದಾರೆ.
ಆದರೆ, ಮೈಸೂರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮಗುವನ್ನು ಪೋಷಕರೊಂದಿಗೆ ಕರೆಸಿ, ಮೂರು ವರ್ಷದ ಮಗುವಿಗೆ ಆರ್ಯವರ್ಧನ್ ಎಂದು ಹೆಸರಿಡಲು ಸೂಚಿಸುವ ಮೂಲಕ ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಹೌದು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ, 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೋವಿಂದಯ್ಯ ಅವರು, ಮಗುವಿಗೆ ಹೆಸರಿಡುವುದರಲ್ಲಿ ಏನಿದೆ? ಮಗುವಿಗೆ ಉತ್ತಮ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ಕೊಡಿಸಿ ಎಂದು ದಂಪತಿಗಳಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ: ಡಚ್ ಸೊಸೆಗೆ ಫಿಲ್ಟರ್ ಕಾಫಿ ಕುಡಿಯುವುದು ಹೇಗೆಂದು ಹೇಳಿಕೊಡುತ್ತಿರುವ ಭಾರತೀಯ ಅತ್ತೆ, ವಿಡಿಯೋ ವೈರಲ್
ಅದಲ್ಲದೇ, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೌಮ್ಯ ಅವರು ಮಗುವಿಗೆ ಆರ್ಯವರ್ಧನ್ ಹೆಸರಿಡಲು ಸೂಚಿಸಿದ್ದಾರೆ. ಕೊನೆಗೆ ನ್ಯಾಯಾಧೀಶ ಗೋವಿಂದಯ್ಯ ಅವರು ದಂಪತಿಗಳಿಬ್ಬರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಗುವಿಗೆ ಅದೇ ಹೆಸರನ್ನು ಇಡಿ ಎಂದು ಹೇಳಿ ಮಗುವಿಗೆ ಸಿಹಿಯನ್ನು ತಿನ್ನಿಸಿದ್ದಾರೆ. ನ್ಯಾಯಾಧೀಶರ ಮಾತಿಗೆ ದಂಪತಿಗಳು ಒಪ್ಪಿಗೆ ಸೂಚಿಸುವ ಮೂಲಕ ಈ ಪ್ರಕರಣವು ಇತ್ಯರ್ಥವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ