Bristol’s Bank Tavern: ಈ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಬರೋಬ್ಬರಿ ನಾಲ್ಕು ವರ್ಷ ಕಾಯಲೇಬೇಕು!
ರಜಾ ದಿನಗಳಲ್ಲಿ ಕುಟುಂಬದ ಜೊತೆಗೆ ಒಳ್ಳೆಯ ಸಮಯ ಕಳೆಯಲು ಹೊರಗಡೆ ಊಟಕ್ಕೆ ಹೋಗುವ ಪ್ಲಾನ್ ಹಾಕಿಕೊಳ್ಳುವುದು ಸಹಜ. ಆದರೆ ಆಯ್ಕೆ ಮಾಡಿಕೊಳ್ಳುವ ಹೋಟೆಲ್ ಸ್ವಚ್ಛತೆಯಿಂದ ಕೂಡಿರಬೇಕು, ದುಡ್ಡು ಕೊಟ್ಟರೆ ಪರವಾಗಿಲ್ಲ ಆದರೆ ಅಡುಗೆ ರುಚಿಕರವಾಗಿರಬೇಕು ಎಂದುಕೊಳ್ಳುತ್ತೇವೆ. ಫೇಮಸ್ ಆಗಿರುವ ಹೋಟೆಲ್ ಅಥವಾ ರೆಸ್ಟೋರೆಂಟ್ ಆಗಿದ್ದರೆ ರಶ್ ಇರುತ್ತದೆ, ಹೀಗಾಗಿ ಸ್ವಲ್ಪ ಕಾಯಲೇಬೇಕು. ಆದರೆ ವಿಶ್ವದ ಈ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಾಯಬೇಕೆಂತೆ. ಹಾಗಾದ್ರೆ ಈ ದುಬಾರಿ ರೆಸ್ಟೋರೆಂಟ್ ಇರುವುದು ಎಲ್ಲಿ, ಈ ರೆಸ್ಟೋರೆಂಟ್ ವಿಶೇಷತೆ ಏನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಷಾರಾಮಿ ಹೋಟೆಲ್ ಗಳು ಎಂದ ಮೇಲೆ ಕೇಳಬೇಕೇ, ಕೂತರು ನಿಂತರು ಎಲ್ಲಾ ಸವಲತ್ತುಗಳು ಕೂಡ ಇರುತ್ತವೆ. ದುಡ್ಡು ಇದ್ದರೆ ಏನು ಬೇಕಾದರೂ ಕೊಂಡು ತಿನ್ನಬಹುದು. ಆದರೆ ಮಧ್ಯಮವರ್ಗದ ಜನರಿಗೆ ಇಂತಹ ಐಷಾರಾಮಿ ಹೋಟೆಲ್ಗಳಲ್ಲಿ ಕೂತು ತಿನ್ನುವುದು ಕನಸಿನ ಮಾತಾಗಿರುತ್ತದೆ. ಆದರೆ ನಿಮ್ಮ ಬಳಿ ಎಷ್ಟೇ ದುಡ್ಡು ಇದ್ದರೂ ವಿಶ್ವದ ಈ ಹೋಟೆಲ್ನಲ್ಲಿ ಟೇಬಲ್ ಬುಕ್ ಮಾಡುವುದು ಅಷ್ಟು ಸುಲಭವಲ್ಲ. ಸರಿಸುಮಾರು ನಾಲ್ಕು ವರ್ಷಗಳ ಕಾಲ ಕಾಯಬೇಕು ಎಂದರೆ ನೀವು ನಂಬಲೇಬೇಕು. ಈ ಐಷಾರಾಮಿ ಹೋಟೆಲ್ ಹೆಸರು ದಿ ಬ್ಯಾಂಕ್ ಟಾವೆರ್ನ್ ರೆಸ್ಟೋರೆಂಟ್ ಆಗಿದ್ದು, ಇದು ಇರುವುದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ.
ವ್ಯಾಪಾರ ಪಾವತಿ ಪೂರೈಕೆದಾರ ಡೊಜೊ ನಡೆಸಿದ ಸಂಶೋಧನೆಯ ಪ್ರಕಾರ, ಬ್ಯಾಂಕ್ ಟಾವೆರ್ನ್ ಪ್ರಪಂಚದಾದ್ಯಂತದ ದೀರ್ಘ ಕಾಯುವ ಪಟ್ಟಿಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಭಾನುವಾರ ನೀವೇನಾದರೂ ಇಲ್ಲಿ ಊಟಬೇಕೆಂದುಕೊಂಡಿದ್ದರೆ ನಾಲ್ಕು ವರ್ಷಗಳ ಕಾಲ ಮುಂಚೆಯೇ ಬುಕ್ ಮಾಡಿರಬೇಕು. ಈ ರೆಸ್ಟೋರೆಂಟ್ ನಲ್ಲಿರುವ ಒಂಬತ್ತು ಟೇಬಲ್ಗಳು ಯಾವಾಗಲೂ ತುಂಬಿರುತ್ತದೆ.
ಕ್ರಿ.ಶ 1800ರಲ್ಲಿ ನಿರ್ಮಿಸಲಾದ ಹಳೆಯದಾದ ಈ ರೆಸ್ಟೋರೆಂಟ್ ನೋಡುವುದಕ್ಕೆ ಸಣ್ಣದಾಗಿದ್ದು, ಅನೇಕ ಗಲಭೆಗಳು, ಎರಡು ವಿಶ್ವ ಯುದ್ಧಗಳು ನಡೆದರೂ, ಈ ರೆಸ್ಟೋರೆಂಟ್ ಹಳೆಯ ಸ್ಥಿತಿಯನ್ನೇ ಕಾಯ್ದುಕೊಂಡಿದೆ. ಲಂಡನ್‌ನಿಂದ ಎರಡೂವರೆ ಗಂಟೆಗಳ ದೂರವಿರುವ ಬ್ರಿಸ್ಟಲ್‌ನಲ್ಲಿದೆ. ಈ ರೆಸ್ಟೋರೆಂಟ್ ತನ್ನನ್ನು ‘ದೊಡ್ಡ ಹೃದಯದ ಸಣ್ಣ ಪಬ್’ ಎಂದು ಕರೆದುಕೊಂಡಿದೆ.
ಈ ರೆಸ್ಟೋರೆಂಟ್ ನಲ್ಲಿ ರುಚಿ ರುಚಿಯಾದ ಆಹಾರಗಳು ಲಭ್ಯವಿದ್ದು, 30 ದಿನಗಳ ಹಳೆಯ ಗೋಮಾಂಸ, ಜೇನುತುಪ್ಪ ಮತ್ತು ರೋಸ್ಮರಿಯಲ್ಲಿ ಹುರಿದ ಕುರಿಮರಿ, ಬೇಯಿಸಿದ ಹಂದಿಮಾಂಸ, ಆಲೂಗೆಡ್ಡೆ ಕರಿ, ಸರಳ ದಾಲ್ ಹಾಗೂ ರೊಟ್ಟಿಯನ್ನು ಸವಿಯಬಹುದಾಗಿದೆ. ಈ ರೆಸ್ಟೋರೆಂಟ್ ನಲ್ಲಿ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಊಟವು ಲಭ್ಯವಿರುತ್ತದೆ.
ಇದನ್ನೂ ಓದಿ: ಅಂಬಾನಿ ಕಾರ್ಯಕ್ರಮಕ್ಕೆ ಮಾರ್ಕ್ ಜುಕರ್‌ಬರ್ಗ್ ಪತ್ನಿ ಧರಿಸಿದ ಬಟ್ಟೆಯ ಬೆಲೆ 10 ಲಕ್ಷ ರೂ.
ಅದಲ್ಲದೇ, ಭಾನುವಾರದ ವಿಶೇಷ ಮೆನುವಿನಲ್ಲಿ ವಿಶೇಷ ಖಾದ್ಯಗಳಾದ ಗ್ರೀಕ್ ಸ್ಕ್ವಿಡ್ ಬಾಲ್‌ಗಳು, ಲೆಂಟಿಲ್ ಪನಿಯಾಣಗಳು, ಮೇಪಲ್ ಸಿರಪ್ ಗ್ರೇಸ್ ಮತ್ತು ಬೆಲ್ಲಿ ಪೋರ್ಕ್ ಸೇರಿದಂತೆ ರಾಸ್ಪೆರಿ ಮೊಸರು ಪನ್ನಾ ಕೋಟಾ ಮತ್ತು ಗೂಸ್ಟೆರಿ ಸ್ಪಾಂಜ್ ಜೊತೆಗೆ ಸ್ಟ್ರಾಬೆರಿ ಮತ್ತು ಬಿಳಿ ಚಾಕೊಲೇಟ್ ಹೀಗೆ ಸಿಹಿತಿಂಡಿಗಳು ದೊರೆಯುತ್ತವೆ. ಈ ಐಷಾರಾಮಿ ರೆಸ್ಟೋರೆಂಟ್ ನಲ್ಲಿ ಎರಡು ಹೊತ್ತಿನ ಊಟದ ಬೆಲೆ 2320 ರೂ ಆಗಿದ್ದು, ಮೂರು ಹೊತ್ತಿನ ಊಟದ ಬೆಲೆಯೂ 2850 ರೂಯಿದ್ದು ದುಬಾರಿಯಾಗಿದೆ.
ಬ್ಯಾಂಕ್ ಟ್ಯಾವರ್ನ್ ನ ಸಂಡೇ ರೋಸ್ಟ್ ಮಿಲ್ 2019 ರಲ್ಲಿ ಬ್ರಿಸ್ಟಲ್ ನ ಅಬ್ಸರ್ವರ್ ಮಾಸಿಕ ಆಹಾರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದಲ್ಲದೇ, 2018 ರಲ್ಲಿ ಬ್ರಿಸ್ಟಲ್ ಗುಡ್ ಫುಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದ ವಿಶ್ವದ ಬ್ಯಾಂಕ್ ಟಾವೆರ್ನ್ ರೆಸ್ಟೋರೆಂಟ್ ಸದಾ ಸುದ್ದಿಯಲ್ಲಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ