200 ಕೆಜಿ ಚಾಕೊಲೇಟ್ ಬಳಸಿ ತಯಾರಿಸಿದ ಗಣೇಶನ ವಿಗ್ರಹವಿದು; ಈ ಮೂರ್ತಿಯ ವಿಸರ್ಜನೆ ಹೇಗೆ ಮಾಡುತ್ತಾರಂತೆ ಗೊತ್ತಾ?

200 ಕೆಜಿ ಚಾಕೊಲೇಟ್ ಬಳಸಿ ತಯಾರಿಸಿದ ಗಣೇಶನ ವಿಗ್ರಹವಿದು; ಈ ಮೂರ್ತಿಯ ವಿಸರ್ಜನೆ ಹೇಗೆ ಮಾಡುತ್ತಾರಂತೆ ಗೊತ್ತಾ?
ಚಾಕೊಲೇಟ್ ಗಣೇಶ

ಗಣೇಶನ ಹಬ್ಬಕ್ಕೆ ವಿಶೇಷ ರೀತಿಯ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತವೆ. ಅದೇ ಮಾದರಿಯಲ್ಲಿ ಇಲ್ಲೊಬ್ಬರು 200 ಕೆಜಿ ಚಾಕಲೇಟ್ ಬಳಸಿ ಗಣೇಶನನ್ನು ತಯಾರಿಸಿದ್ದು, ಭಕ್ತರ ಮನಗೆದ್ದಿದೆ.

TV9kannada Web Team

| Edited By: shivaprasad.hs

Sep 10, 2021 | 3:30 PM

ಗಣೇಶ ಚತುರ್ಥಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಭಕ್ತರು ಗಣಪತಿ ಹಬ್ಬದ ಆಚರಣೆಗಾಗಿ ಬಹಳ ಕಾಲದಿಂದ ಸಿದ್ಧತೆಯಲ್ಲಿ ಕಾರ್ಯನಿರತರಾಗಿರುತ್ತಾರೆ. ಅಂತಹ ಹತ್ತು ಹಲವು ವಿಶಿಷ್ಟ ಗಣಪತಿ ವಿಗ್ರಹಗಳು ಎಲ್ಲರ ಗಮನ ಸೆಳೆಯುತ್ತವೆ. ಇದೇ ಮಾದರಿಯಲ್ಲಿ ಚಾಕ್ಲೇಟ್‌ನಿಂದ ಮಾಡಿದ ಗಣೇಶನ ವಿಗ್ರಹವು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಚರ್ಚೆಯಾಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ರೆಸ್ಟೋರೆಂಟ್ ಮತ್ತು ಚಾಕೊಲೇಟ್ ಉದ್ಯಮಿ ಹರ್ಜಿಂದರ್ ಸಿಂಗ್ ಕುಕ್ರೇಜಾ  ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಾಕೊಲೇಟ್ ಗಣೇಶ ವಿಗ್ರಹದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪಂಜಾಬ್​ನ ಲೂಧಿಯಾನದಲ್ಲಿರುವ ಬೇಕರಿ ಅಂಗಡಿಯಲ್ಲಿ ಚಾಕೊಲೇಟ್ ನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಜನರಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಬೇಕರಿ ಮಾಲೀಕ ಹರ್ಜಿಂದರ್ ಸಿಂಗ್ ಕುಕ್ರೇಜಾ ಈ ಕುರಿತು ಮಾತನಾಡಿ, ‘‘ನಾವು 6 ವರ್ಷಗಳಿಂದ ಚಾಕೊಲೇಟ್ ಗಣೇಶನನ್ನು ತಯಾರಿಸುತ್ತಿದ್ದೇವೆ. ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಬಹುದು ಎಂಬ ಸಂದೇಶವನ್ನು ಇದರ ಮೂಲಕ ನಾವು ತಿಳಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದಿದ್ದಾರೆ.

ಕುಕ್ರೇಜಾ ಈ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಲು ಹತ್ತು ದಿನಗಳ ಸಮಯ ಬೇಕಾಯಿತು ಎಂದಿದ್ದಾರೆ. 10 ಜನರು 10 ದಿನ ಶ್ರಮ ವಹಿಸಿ 200 ಕೆಜಿಗಿಂತ ಅಧಿಕ ಬೆಲ್ಜಿಯಂ ಡಾರ್ಕ್ ಚಾಕೊಲೇಟ್ ಬಳಸಿ ಇದನ್ನು ತಯಾರಿಸಿದ್ದಾರೆ. ‘‘ಇದು ಸುಲಭದ ಕೆಲಸವಾಗಿರಲಿಲ್ಲ. ಸಣ್ಣ ತಪ್ಪುಗಳಾದರೂ ಮತ್ತೆ ಹೊಸದಾಗಿ ಕೆಲಸ ಆರಂಭಿಸಬೇಕಾಗುತ್ತಿತ್ತು’’ ಎಂದು ಅವರು ಹೇಳಿದ್ದಾರೆ. ಆದರೆ ಚಾಕಲೇಟ್ ಗಣೇಶನನ್ನು ಬಹಳ ಆಸಕ್ತಿಯಿಂದ ಮಾಡಿದ್ದರಿಂದ ಎಲ್ಲಾ ಸವಾಲುಗಳನ್ನು ಕೂಡ ಇಷ್ಟಪಟ್ಟು ಎದುರಿಸಿದ್ದೇವೆ ಎಂದಿದ್ದಾರೆ ಕುಕ್ರೇಜಾ.

ಚಾಕಲೇಟ್ ಗಣೇಶನ ವಿಡಿಯೊ ಇಲ್ಲಿದೆ:

ಈ ಚಾಕಲೇಟ್ ಗಣೇಶನ ವಿಗ್ರಹವನ್ನು ಹೇಗೆ ವಿಸರ್ಜನೆ ಮಾಡಲಾಗುತ್ತದೆ ಎಂಬ ಅನುಮಾನ ಹಲವರಿಗೆ ಬರಬಹುದು. ಇದಕ್ಕೆ ಒಂದು ಸುಂದರ ಪರಿಕಲ್ಪನೆಯನ್ನು ಕುಕ್ರೇಜಾ ಮತ್ತು ತಂಡದವರು ತಯಾರಿಸಿದ್ದಾರೆ. ಅದೇನೆಂದರೆ, ಮೂರ್ತಿಯನ್ನು ಹಾಲಿನಲ್ಲಿ ಮುಳುಗಿಸಿ, ಅದನ್ನು ನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅದರಲ್ಲೂ ಚಾಕಲೇಟ್ ಹಾಲಿನ ರೂಪದಲ್ಲಿರುವ ಪ್ರಸಾದವನ್ನು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ನೀಡಲಾಗುವುದು ಎಂದು ಕುಕ್ರೇಜಾ ತಿಳಿಸಿದ್ದಾರೆ.

ಕುಕ್ರೇಜಾ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಒಳ್ಳೆಯ ಪರಿಕಲ್ಪನೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ಇದನ್ನೂ ಓದಿ:

ಕೋಲಾರ: ತಾಲಿಬಾನಿಗಳಿಗೆ, ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಬುದ್ಧಿ ಕಲಿಸುತ್ತಿರುವ ಪರಿಕಲ್ಪನೆಯಲ್ಲಿ ಗಣೇಶ

Vikrant Rona: ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್​ ಸಿನಿಮಾ ಕ್ರೇಜ್​

(Chocolate Ganesha got netizens attention here is the details)

Follow us on

Related Stories

Most Read Stories

Click on your DTH Provider to Add TV9 Kannada